ಎಲಾನ್​ ಮಸ್ಕ್​ 
ವಿದೇಶ

ಭಾರತೀಯ ಪ್ರತಿಭೆಗಳಿಂದ ಅಮೆರಿಕಕ್ಕೆ ಪ್ರಯೋಜನ

ಪ್ರಮುಖ ಮುಖ್ಯಾಂಶಗಳು

  • ಎಚ್1ಬಿ ವೀಸಾಕ್ಕೆ ಕಡಿವಾಣ ಸರಿಯಲ್ಲ
  • ಉದ್ಯಮಿ ಎಲಾನ್ ಮಸ್ಕ್ ಅಭಿಮತ

ನವದೆಹಲಿ: ಪ್ರತಿಭಾವಂತ ಭಾರತೀಯರಿಂದ ಅಮೆರಿಕ ಅಪಾರ ಪ್ರಯೋಜನ ಪಡೆದಿದೆ ಎಂದು ಟೆಸ್ಲಾ, ಸ್ಪೇಸ್​ಎಕ್ಸ್ ಮತ್ತು ಎಕ್ಸ್ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲಾನ್ ಮಸ್ಕ್ ಹೇಳಿದ್ದಾರೆ.

ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವ ಕೊರತೆಯನ್ನು ತುಂಬಲು ಎಚ್1ಬಿ ವೀಸಾ ಯೋಜನೆ ಅತ್ಯಗತ್ಯ. ಅದು ಭಾರತೀಯರಂತಹ ಪ್ರತಿಭಾವಂತರನ್ನು ಆಕರ್ಷಿಸಿ, ಅಮೆರಿಕದ ಆರ್ಥಿಕತೆಯನ್ನು ಬಲಪಡಿಸಿದೆ ಎಂದು ಜೆರೋಧಾ ಸಹಸ್ಥಾಪಕ ನಿಖಿಲ್ ಕಾಮತ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಸ್ಕ್ ತಿಳಿಸಿದ್ದಾರೆ.

‘ಅಮೆರಿಕದಲ್ಲಿ ಪ್ರತಿಭಾವಂತರ ಕೊರತೆಯಿದೆ. ನಮ್ಮ ಕಂಪನಿಗಳಾದ ಟೆಸ್ಲಾ ಮತ್ತು ಸ್ಪೇಸ್​ಎಕ್ಸ್​ನಲ್ಲಿ ಹೆಚ್ಚು ಸಂಬಳ ನೀಡಿ ಜಾಗತಿಕ ಪ್ರತಿಭೆಗಳನ್ನು ಆಯ್ಕೆ ಮಾಡುತ್ತೇವೆ. ಹಾಗಾಗಿ ಎಚ್1ಬಿ ವೀಸಾ ನೀಡಿಕೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಅಮೆರಿಕದ ತಂತ್ರಜ್ಞಾನ ಕ್ಷೇತ್ರಕ್ಕೆ ಸತ್ಯ ನಾದೆಳ್ಲ, ಸುಂದರ್ ಪಿಚಾಯ್ ಮುಂತಾದ ಭಾರತೀಯರು ನೀಡಿದ ಕೊಡುಗೆ ಅನನ್ಯ. 

ಕೆಲವು ಹೊರಗುತ್ತಿಗೆ ಕಂಪನಿಗಳು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಕಡಿಮೆ ವೇತನ ನೀಡಿ ಉದ್ಯೋಗಿಗಳನ್ನು ಶೋಷಿಸುತ್ತಿವೆ. ಈ ದುರುಪಯೋಗದಿಂದಾಗಿ ಎಚ್1ಬಿಗೆ ವಿರೋಧ ಬೆಳೆದಿದೆ. ಈ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದರಿಂದ ಅಮೆರಿಕಕ್ಕೆ ಹಾನಿಯಾಗುತ್ತದೆ. ಅದರ ಬದಲು ದುರ್ಬಳಕೆಯನ್ನು ನಿಲ್ಲಿಸಿ ಹೊರ ದೇಶಗಳ ಪ್ರತಿಭೆಗಳನ್ನು ಅಮೆರಿಕಕ್ಕೆ ಆಕರ್ಷಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಗಡಿ ನಿಯಂತ್ರಣ ಇಲ್ಲದಿದ್ದರೆ ದೇಶ ಎನ್ನಿಸಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಬೈಡೆನ್ ಸರ್ಕಾರ ಹೆಚ್ಚಿನ ಸ್ವಾತಂತ್ರ್ಯ ನೀಡಿ ತಪ್ಪು ಮಾಡಿತು. ಅಕ್ರಮ ವಲಸೆಗೆ ಪ್ರೋತ್ಸಾಹ ನೀಡುವುದು ಸರಿಯಲ್ಲ. ಗಡಿ ಭದ್ರಪಡಿಸಿಕೊಳ್ಳದಿದ್ದರೆ ಮನುಷ್ಯರ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗೆ ದಾರಿಯಾಗುತ್ತದೆ’ ಎಂದು ಮಸ್ಕ್ ಹೇಳಿದರು.

ಕೃತಕ ಬುದ್ಧಿಮತ್ತೆ (ಎಐ) ಕುರಿತ ಪ್ರಶ್ನೆಗೆ, ‘ಯಾವುದೇ ಶಕ್ತಿಶಾಲಿ ತಂತ್ರಜ್ಞಾನವು ವಿನಾಶಕಾರಿ ಕೂಡ ಆಗಬಹುದು. ಆದರೆ ಯಾವ ತಂತ್ರಜ್ಞಾನವನ್ನೂ ನಿಲ್ಲಿಸಲು ಸಾಧ್ಯವಿಲ್ಲ. ನಿಯಂತ್ರಣ ಮಾಡಬಹುದು’ ಎಂದು ಉತ್ತರಿಸಿದರು. ‘ಅಮೆರಿಕದ ಸಾಲದ ಬಡ್ಡಿಗೆ ಮಾಡುವ ಖರ್ಚು ಈಗಲೇ ಸೇನಾ ಬಜೆಟ್​ಗಿಂತ ಜಾಸ್ತಿಯಾಗಿದೆ. ಎಐ ಮತ್ತು ರೋಬೋಟಿಕ್ಸ್ ಮಾತ್ರ ಅಮೆರಿಕದ ಸಾಲ ಸಂಕಟಕ್ಕೆ ಪರಿಹಾರ ಒದಗಿಸಬಲ್ಲವು’ ಎಂದು ಹೇಳಿದರು.

ಪತ್ನಿ ಶಿವಾನ್, ಮಗ ಶೇಖರ್!

ತಮ್ಮ ಒಬ್ಬ ಪತ್ನಿ ಭಾರತೀಯ ಮೂಲದವರು ಎಂಬುದನ್ನೂ ಮಸ್ಕ್ ಬಹಿರಂಗಪಡಿಸಿದ್ದಾರೆ. ‘ಶಿವಾನ್ ಜಿಲಿಸ್ ಹಾಫ್ ಇಂಡಿಯನ್. ಆಕೆಯಿಂದ ಹುಟ್ಟಿದ ಒಬ್ಬ ಮಗನ ಮಧ್ಯದ ಹೆಸರು ಶೇಖರ್. ಆತನಿಗೆ ಆ ಹೆಸರು ಇಡಲು ಸ್ಪೂರ್ತಿ- ನೊಬೆಲ್ ಪುರಸ್ಕೃತ ಭಾರತೀಯ ಅಮೆರಿಕನ್ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್. ಶಿವಾನ್​ಳ ತಂದೆ ವಿಶ್ವವಿದ್ಯಾಲಯವೊಂದರಲ್ಲಿ ವಿನಿಮಯ ವಿದ್ಯಾರ್ಥಿಯೋ ಏನೋ ಆಗಿದ್ದರಂತೆ. ಚಿಕ್ಕವಳಿದ್ದಾಗಲೇ ಆಕೆಯನ್ನು ಬೇರೆಯವರಿಗೆ ದತ್ತು ನೀಡಿದ್ದರು. 

ಯಾವ ಕಾರಣಕ್ಕೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಆಕೆ ಬೆಳೆದಿದ್ದು ಕೆನಡಾದಲ್ಲಿ...’ ಎಂದು ಮಸ್ಕ್ ವಿವರಿಸಿದ್ದಾರೆ. ಯೇಲ್ ವಿವಿಯಲ್ಲಿ ಎಕನಾಮಿಕ್ಸ್ ಬಿ.ಎ. ಮಾಡಿರುವ ಶಿವಾನ್ ಜಿಲಿಸ್ 2017ರಲ್ಲಿ ಮಸ್ಕ್ ಅವರ ನ್ಯೂರಾಲಿಂಕ್ ಕಂಪನಿಯನ್ನು ಸೇರಿದ್ದರು. ಈಗ ಅದರ ನಿರ್ದೇಶಕಿಯಾಗಿದ್ದಾರೆ. ಅವರಿಗೆ ಶೇಖರ್ ಸೇರಿ ನಾಲ್ವರು ಮಕ್ಕಳಿದ್ದಾರೆ. ಮಸ್ಕ್​ಗೆ ಮೂವರು ಪತ್ನಿಯರು ಮತ್ತು ಐವರು ಅಧಿಕೃತ ಜೀವನಸಂಗಾತಿಗಳಿದ್ದು, ಒಟ್ಟು ಮಕ್ಕಳ ಸಂಖ್ಯೆ 14.