ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶವು ಕಳೆದ ಒಂದು ತಿಂಗಳಿಂದ ಹಿಂಸಾಚಾರದಿಂದ ನಲುಗಿದೆ. ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನದ ಅರೆಸೇನಾ ಪಡೆ ಯೋಧರು ಹಾಗೂ ಸ್ಥಳೀಯ ಪೊಲೀಸರು ಪದೇಪದೆ ಗುಂಡಿನ ದಾಳಿ ನಡೆಸುತ್ತಿದ್ದು, ವಿವಿಧ ಘಟನೆಗಳಲ್ಲಿ 46ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಿಒಕೆ ಜನರ ಹಕ್ಕುಗಳನ್ನು ದಮನಿಸುತ್ತಿರುವ ಪಾಕ್ ಸರ್ಕಾರ, ಅಲ್ಲಿಯ ಜನರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದೆ. ನ್ಯಾಯಕ್ಕಾಗಿ ದನಿ ಎತ್ತಿದರೆ, ಗುಂಡಿನ ದಾಳಿಯ ಮೂಲಕ ಆತಂಕ ಮೂಡಿಸಲಾಗುತ್ತಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ಇಡೀ ಪ್ರಾಂತ್ಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಪ್ರವಾಸಿಗರು ಮತ್ತು ಹೊರಗಿನವರು ತಕ್ಷಣವೇ ಈ ಪ್ರದೇಶವನ್ನು ತೊರೆಯುವಂತೆ ಆದೇಶ ಹೊರಡಿಸಲಾಗಿದೆ. ಪಾಕಿಸ್ತಾನ ಸೇನೆ ಮತ್ತು ಅದರ ಅಧೀನದಲ್ಲಿರುವ ಅರೆಸೇನಾ ಪಡೆಗಳು (ಮುಖ್ಯವಾಗಿ ಪಂಜಾಬ್ ರೇಂಜರ್ಸ್) ಈ ಬಿಕ್ಕಟ್ಟನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಲು ಯತ್ನಿಸಿದ್ದು, ಪರಿಸ್ಥಿತಿ ಹದಗೆಡಲು ಕಾರಣ.
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಮನಗಂಡು ಪಿಒಕೆ ನಾಯಕರೊಬ್ಬರು ಸಹಾಯಕ್ಕಾಗಿ ಭಾರತದ ನೆರವನ್ನು ಕೋರಿದ್ದಾರೆ. ಅಲ್ಲಿನ ಶ್ರೀಸಾಮಾನ್ಯರು ಕೂಡ ಭಾರತದ ಆಡಳಿತಕ್ಕೆ ಒಳಪಡಲು ಒಲವು ತೋರಿದ್ದಾರೆ. ಪಿಒಕೆಯಲ್ಲಿ ಹಿಂಸಾಚಾರದ ಕೆಟ್ಟ ಹಾಗೂ ವಿಕೃತ ಸಂಸ್ಕೃತಿ ಬೆಳೆಯುತ್ತಲೇ ಸಾಗಿದ್ದು, ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಸವಾಲಾಗಿದೆ. ಅಂತಾರಾಷ್ಟ್ರೀಯ ಸಮುದಾಯದವು ಇಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಭಾರತ ಕೂಡ ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು.
ಈ ಭಾಗದಲ್ಲಿ ಉತ್ಪತ್ತಿಯಾಗುವ ಜಲವಿದ್ಯುತ್ಗೆ ಸ್ಥಳೀಯರಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಮತ್ತು ಗೋಧಿ ಹಿಟ್ಟು, ಖಾದ್ಯತೈಲ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನರು ದೀರ್ಘಕಾಲದಿಂದ ಆಕ್ರೋಶಗೊಂಡಿದ್ದಾರೆ. ಅಲ್ಲದೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (ಜೆಎಎಸಿ)ಯನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೊಷಿಸಿ, ನಿಷೇಧಿಸಲಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಜೆಎಎಸಿ ಕರೆಗೆ ಇಡೀ ಪ್ರಾಂತ್ಯದ ಮಾರುಕಟ್ಟೆಗಳು ಬಂದ್ ಆಗುತ್ತಿದ್ದವು, ಕರ ವಸೂಲಿ ನಿಲ್ಲುತ್ತಿತ್ತು. ನಾಗರಿಕರ ಈ ಅಭೂತಪೂರ್ವ ಒಗ್ಗಟ್ಟು ಪಾಕಿಸ್ತಾನಿ ಆಡಳಿತ ಮತ್ತು ಸ್ಥಳೀಯ ಸರ್ಕಾರದ ಅಸ್ತಿತ್ವಕ್ಕೇ ಸವಾಲಾಗಿತ್ತು.
ಇಷ್ಟು ದಿನಗಳ ಕಾಲ ಪಾಕಿಸ್ತಾನ ಪಿಒಕೆಯಲ್ಲಿನ ಜನರಿಗೆ ‘ಸ್ವಾತಂತ್ರ್ಯದ ಕನಸು ತೋರಿಸುತ್ತ ಅವರನ್ನು ಪ್ರಚೋದಿಸುತ್ತ ಬಂದಿದೆ. ಆದರೆ, ಜನರಿಗೆ ಈಗ ವಾಸ್ತವ ಅರ್ಥವಾಗುತ್ತಿದೆ. ಪಾಕಿಸ್ತಾನ ಎಂದಿಗೂ ತಮ್ಮ ಬಾಳನ್ನು ಬದಲಾಯಿಸುವುದಿಲ್ಲ. ಬದಲಿಗೆ ತಮ್ಮನ್ನು ಗಾಳವಾಗಿಸಿಕೊಂಡು ಭಯೋತ್ಪಾದನೆ, ಅಶಾಂತಿಯನ್ನು ಹರಡುತ್ತದೆ ಎಂಬ ಸಂಗತಿ ಮನದಟ್ಟಾಗುತ್ತಿದೆ. ಅದರ ಫಲವಾಗಿಯೇ ಕಳೆದ ನಾಲ್ಕೈದು ವರ್ಷಗಳಿಂದ ಪ್ರತಿಭಟನೆ, ಹೋರಾಟಗಳು ಆಗಾಗ ನಡೆಯುತ್ತಲೇ ಇವೆ. ಆದರೆ, ಈ ಪರಿಸ್ಥಿತಿಯನ್ನು ಭಾರತ ಜಾಣತನದಿಂದ ನಿರ್ವಹಿಸಬೇಕು. ಪಿಒಕೆಯ ವಾಸ್ತವ ಚಿತ್ರಣವನ್ನು ಅಂತಾರಾಷ್ಟ್ರೀಯ ಸಮುದಾಯದೆದುರು ತೆರೆದಿಡಲು ಭಾರತ ಯಶಸ್ವಿಯಾದಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದು.