Editorial 
ವಿದೇಶ

ಸಂಪಾದಕೀಯ; ಅಮೆರಿಕ ಆತುರದ ಕ್ರಮ

ಅಮೆರಿಕ ಮತ್ತು ಇರಾನ್​ ನಡುವಿನ ಕದನವಿರಾಮ ಒಪ್ಪಂದ ಅತ್ಯಲ್ಪ ಅವಧಿಯಲ್ಲೇ ಅಂತ್ಯಗೊಂಡಿರುವುದು ನಿಜಕ್ಕೂ ದುರ್ದೈವಕರ. ಈ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆತುರದ ಕ್ರಮ ಕೈಗೊಂಡಿದ್ದು, ಇದರ ಪರಿಣಾಮವನ್ನು ಈ ಎರಡು ರಾಷ್ಟ್ರಗಳು ಮಾತ್ರವಲ್ಲ, ಜಾಗತಿಕ ವಲಯವೇ ಅನುಭವಿಸಬೇಕಾಗುತ್ತದೆ ಎಂಬುದು ಕಟುವಾಸ್ತವ. ಶಾಂತಿಸ್ಥಾಪನೆಯ ದಾರಿಯಲ್ಲಿ ಒಂದಿಷ್ಟು ಸಂಯಮದಿಂದ ಕ್ರಮಿಸಿ, ವಿವೇಚನೆಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆದರೆ, ಅಮೆರಿಕ ಮತ್ತು ಇರಾನ್​ ನಾಯಕರು ತಮ್ಮ ಹಠಮಾರಿ ಧೋರಣೆಯನ್ನು ಸಡಿಲಿಸಲು ಒಪ್ಪದ ಕಾರಣ, ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಈಗಲೂ ಕಾಲ ಮಿಂಚಿಲ್ಲ. ದಾಳಿಗಳನ್ನು ನಿಲ್ಲಿಸಿ, ಮಾತುಕತೆಯ ಮೂಲಕ ಪರಿಹಾರದ ದಾರಿಯನ್ನು ಕಂಡುಕೊಳ್ಳುವುದು ಉತ್ತಮ. ಯುದ್ಧದಿಂದ ಏನೂ ಸಾಧಿಸಲಾಗುವುದಿಲ್ಲ ಎಂಬ ಅರಿವಿದ್ದರೂ, ಮತ್ತೆ ಮತ್ತೆ ಇಂಥ ಹೊಣೆಗೇಡಿ ನಿರ್ಣಯ ತಳೆಯುವುದು ಜಾಗತಿಕ ಶಾಂತಿ ನಿಟ್ಟಿನಲ್ಲಿ ಮಾರಕವೇ ಹೌದು.
ಫೆಬ್ರವರಿ 28ರಂದು ಇರಾನ್​ ವಿರುದ್ಧ ಅಮೆರಿಕ ಯುದ್ಧ ಆರಂಭಿಸಿತ್ತು ಮತ್ತು ಇದರಲ್ಲಿ ಅಮೆರಿಕಕ್ಕೆ ಅಲ್ಪಾವಧಿಯಲ್ಲೇ ಗೆಲುವು ದೊರೆಯಲಿದೆ ಎಂದು ಟ್ರಂಪ್​ ಭಾವಿಸಿದ್ದರು. ಆದರೆ, ಇರಾನ್​ ತೀವ್ರ ಪ್ರತಿಕ್ರಿಯೆ ನೀಡಿದ್ದರಿಂದ ವಿವಿಧ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾನೆಲೆಗಳು ಧ್ವಂಸಗೊಂಡವು. ಹೀಗಾಗಿ, ಹೇಗಾದರೂ ಮಾಡಿ ಯುದ್ಧ ನಿಲ್ಲಿಸಬೇಕು ಎಂದು ಬಯಸಿದ್ದ ಟ್ರಂಪ್​ ಕದನವಿರಾಮ ಒಪ್ಪಂದವಾಗುತ್ತಿದ್ದಂತೆ, "ಸಹಿ ಆಗಿದೆ" ಎಂದು ಭಾವೋದ್ವೇಗದಿಂದ ಹೇಳಿದ್ದರು. ಈಗ ಅದೇ ಟ್ರಂಪ್​, ಇರಾನ್​ ವಿರುದ್ಧದ ದಾಳಿಗಳನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
ಅಮೆರಿಕ ಮತ್ತು ಇರಾನ್​ ನಡುವಿನ ಯುದ್ಧದಿಂದಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಇಡೀ ಜಗತ್ತು ಆತಂಕದಲ್ಲೇ ದಿನದೂಡಿತ್ತು. ಈ ಅವಧಿಯಲ್ಲಿ ಯುದ್ಧದಿಂದಾಗಿ ಅಮೆರಿಕ 36 ಲಕ್ಷ ಕೋಟಿ ರೂ., ಇರಾನ್​ 25 ಲಕ್ಷ ಕೋಟಿ ರೂ., ಸೌದಿ ಅರೇಬಿಯಾ 4 ಲಕ್ಷ ಕೋಟಿ ರೂ., ಇರಾಕ್​ 1.8 ಲಕ್ಷ ಕೋಟಿ ರೂ., ಯುಎಇ 1.4 ಲಕ್ಷ ಕೋಟಿ ರೂ., ಕತಾರ್​ 1.3 ಲಕ್ಷ ಕೋಟಿ ರೂ., ಕುವೈತ್​ 1.3 ಲಕ್ಷ ಕೋಟಿ ರೂ., ಇಸ್ರೇಲ್​ 1.1 ಲಕ್ಷ ಕೋಟಿ ರೂ. ಆರ್ಥಿಕ ನಷ್ಟವನ್ನು ಅನುಭವಿಸಿವೆ. ಇಡೀ ಸಂಘರ್ಷದಲ್ಲಿ 7000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 40 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಅಲ್ಲದೆ, ಜೂನ್​ 8ರಿಂದ 11ರ ನಡುವೆ ಒಮನ್​ ಗಲ್ಫ್​ನಲ್ಲಿ ಭಾರತೀಯ ಸಿಬ್ಬಂದಿ ಇದ್ದ 3 ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ದುರ್ಮರಣ ಹೊಂದಿದರು.
ಯುದ್ಧದ ಅತಿ ದೊಡ್ಡ ಹೊಡೆತವು, ಈಗಾಗಲೇ ಕಡಿಮೆ ಆದಾಯ ಹೊಂದಿರುವ ದೇಶಗಳು ಹಾಗೂ ಇಂತಹ ಆರ್ಥಿಕ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಇಲ್ಲದ ಜನಸಾಮಾನ್ಯರ ಮೇಲೆ ಬಿದ್ದಿದೆ. ಈ ವಾಸ್ತವಗಳೆಲ್ಲ ಕಣ್ಣೆದುರಿಗೆ ಇದ್ದರೂ, ಮತ್ತೆ ಯುದ್ಧೋನ್ಮಾದಕ್ಕೆ ಮುಂದಾಗಿರುವುದು ಸಮರ್ಥನೀಯವಲ್ಲ. ಅಷ್ಟಕ್ಕೂ, ಇತಿಹಾಸವು ಶಾಂತಿ ಮತ್ತು ಸಹಬಾಳ್ವೆಯನ್ನು ಸ್ಥಾಪಿಸಿದ ನಾಯಕರನ್ನು ಸ್ಮರಿಸಿಕೊಳ್ಳುತ್ತದೆಯೇ ಹೊರತು, ಯುದ್ಧೋನ್ಮಾದದ ನಾಯಕರನ್ನಲ್ಲ ಎಂಬ ಸತ್ಯವನ್ನು ಟ್ರಂಪ್​ ಸೇರಿದಂತೆ ಜಾಗತಿಕ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.