ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ‘ರೆಸಿಪೋ›ಕಲ್’ (ಪರಸ್ಪರ) ಸುಂಕದ ನೀತಿಯನ್ನು ಅಲ್ಲಿನ ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ಜಾಗತಿಕ ಆರ್ಥಿಕ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ತುರ್ತು ಅಧಿಕಾರಗಳ ಕಾಯ್ದೆಯಡಿ ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳ ಮೇಲೆ ಹೇರಲಾಗಿದ್ದ ಈ ಭಾರಿ ಪ್ರಮಾಣದ ಆಮದು ಸುಂಕಗಳು ಟ್ರಂಪ್ ಅವರ ‘ಅಮೆರಿಕ ಫಸ್ಟ್’ ಆರ್ಥಿಕ ಅಜೆಂಡಾದ ಬೆನ್ನೆಲುಬಾಗಿದ್ದವು.
ನ್ಯಾಯಾಲಯದ ಈ ತೀರ್ಪು ಕೇವಲ ಟ್ರಂಪ್ ಅವರಿಗೆ ಎದುರಾದ ರಾಜಕೀಯ ಹಿನ್ನಡೆಯಲ್ಲ, ಬದಲಿಗೆ ಅನಿರ್ಬಂಧಿತ ಕಾರ್ಯಕಾರಿ ಅಧಿಕಾರ ಮತ್ತು ಸ್ವಾರ್ಥ ವ್ಯಾಪಾರ ನೀತಿಗಳ ವಿರುದ್ಧ ಸಂವಿಧಾನಾತ್ಮಕವಾಗಿ ಲಭಿಸಿದ ಜಯವಾಗಿದೆ.
ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ ನೇಮಿಸಿದ ಮೂವರು ಸಂಪ್ರದಾಯವಾದಿ ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠ, ಈ ತೀರ್ಪಿನ ಮೂಲಕ ನ್ಯಾಯಾಂಗದ ಸ್ವತಂತ್ರ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಅಧ್ಯಕ್ಷರು ‘ತುರ್ತ ಅಧಿಕಾರ’ಗಳನ್ನು ಅತಿರೇಕವಾಗಿ ಬಳಸಿ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರಗಳನ್ನು ಏಕಪಕ್ಷೀಯವಾಗಿ ನಿಯಂತ್ರಿಸುವುದಕ್ಕೆ ನ್ಯಾಯಾಲಯ ಲಗಾಮು ಹಾಕಿದೆ.
ಮುಕ್ತ ಮಾರುಕಟ್ಟೆ ಮತ್ತು ವ್ಯಾಪಾರ ಸ್ವಾತಂತ್ರ್ಯವನ್ನು ಬೆಂಬಲಿಸುವ ಉದ್ಯಮ ಸಮೂಹಗಳು ಕೂಡ ಟ್ರಂಪ್ ಅವರ ಈ ನೀತಿಯನ್ನು ವಿರೋಧಿಸಿದ್ದು ಗಮನಾರ್ಹ. ಏಕೆಂದರೆ, ಅತಿ ಹೆಚ್ಚಿನ ಸುಂಕಗಳು ಅಂತಿಮವಾಗಿ ಅಮೆರಿಕದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆಯ ಬಿಸಿ ಮುಟ್ಟಿಸುತ್ತಿದ್ದವು.
ಭಾರತದ ದೃಷ್ಟಿಕೋನದಿಂದ ನೋಡಿದರೆ, ಈ ತೀರ್ಪು ಅತ್ಯಂತ ಸಕಾರಾತ್ಮಕವಾದುದು. ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ರಫ್ತುದಾರರು, ವಿಶೇಷವಾಗಿ ಐಟಿ, ಜವಳಿ, ಚರ್ಮ ಉತ್ಪನ್ನ ಮತ್ತು ಔಷಧೀಯ ವಲಯದ ಉದ್ಯಮಿಗಳು ಅಮೆರಿಕ ವಿಧಿಸಿದ್ದ ಶೇ. 50ರಷ್ಟು ಭಾರಿ ಸುಂಕದ ಸಮಸ್ಯೆ ಎದುರಿಸುತ್ತಿದ್ದರು. ಈಗ ಆ ಆತಂಕ ದೂರವಾಗಿದೆ.
ಇದು ಭಾರತದಂತಹ ನೂರಾರು ರಾಷ್ಟ್ರಗಳ ಆರ್ಥಿಕತೆಗಳಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ಸಮಾನ ಸ್ಪರ್ಧಾತ್ಮಕತೆಯ ಅವಕಾಶವನ್ನು ಮರಳಿ ನೀಡಿದೆ. ಅಲ್ಲದೆ, ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿದ್ದ ಅನಿಶ್ಚಿತತೆ ಈಗ ತಿಳಿಯಾಗಿದೆ. ಒಂದು ದೇಶ ಸುಂಕ ವಿಧಿಸಿದರೆ, ಅದಕ್ಕೆ ಪ್ರತಿಯಾಗಿ ಮತ್ತೊಂದು ದೇಶವೂ ಸುಂಕ ವಿಧಿಸುವ ‘ವ್ಯಾಪಾರ ಸಮರ’ ಇಡೀ ವಿಶ್ವದ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿತ್ತು. ಸುಪ್ರೀಂ ಕೋರ್ಟ್ನ ಈ ಮಧ್ಯಪ್ರವೇಶದಿಂದ ಇಂತಹ ಸೇಡಿನ ಆರ್ಥಿಕ ಕ್ರಮಗಳಿಗೆ ತಡೆ ಒಡ್ಡಿದಂತಾಗಿದೆ.
ಇದು ಅಂತಾರಾಷ್ಟ್ರೀಯ ವ್ಯಾಪಾರ ಕೇವಲ ರಾಜಕೀಯ ಹಠಕ್ಕೆ ಬಲಿಯಾಗದೆ, ನಿಯಮಬದ್ಧ ಚೌಕಟ್ಟಿನಲ್ಲಿ ನಡೆಯಬೇಕು ಎಂಬ ಸಂದೇಶವನ್ನು ರವಾನಿಸಿದೆ. ಅಮೆರಿಕದ ಈ ನ್ಯಾಯಾಂಗ ತೀರ್ಪು ಜಾಗತಿಕ ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ಮುಕ್ತ ವ್ಯಾಪಾರವನ್ನು ಉತ್ತೇಜಿಸಲು ಪೂರಕವಾಗಿದೆ. ಟ್ರಂಪ್ ಅವರು ಇದನ್ನು ‘ಆರ್ಥಿಕ ಪೆಟ್ಟು’ ಎಂದು ಕರೆದಿದ್ದರೂ, ಜಗತ್ತಿನ ಇತರ ದೇಶಗಳಿಗೆ ಇದು ‘ಆರ್ಥಿಕ ಚೇತರಿಕೆ’ಯ ಸಂಕೇತವಾಗಿದೆ. ಭಾರತ ಮತ್ತು ಅಮೆರಿಕ ನಡುವೆ ಮುಂದಿನ ದಿನಗಳಲ್ಲಿ ಏರ್ಪಡುವ ವ್ಯಾಪಾರ ಒಪ್ಪಂದಗಳ ಮೇಲೆ ಈ ತೀರ್ಪು ಸಕಾರಾತ್ಮಕ ಪ್ರಭಾವ ಬೀರಲಿದ್ದು, ಭಾರತದ ರಫ್ತು ವಹಿವಾಟಿಗೆ ಹೊಸ ಚೈತನ್ಯ ನೀಡಲಿದೆ.