‘9/11 ಮಾದರಿಯ ಭೀಕರ ಭಯೋತ್ಪಾದಕ ದಾಳಿ ನಡೆಯಬಹುದು’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, ವೈಮಾನಿಕ ಉಗ್ರ ದಾಳಿಯ ಭಯಂಕರ ಸಂಚು ವಿಫಲಗೊಂಡಿದೆ. ಈ ಮೂಲಕ ಜಾಗತಿಕ ಸಮುದಾಯ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಬುಧವಾರ ಬೆಳಗ್ಗೆ ದುಬೈನಿಂದ ಇಸ್ರೇಲ್ನ ಟೆಲ್ ಅವೀವ್ಗೆ ತೆರಳುತ್ತಿದ್ದ ‘ಫ್ಲೈ ದುಬೈ’ನ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸಹ ಪೈಲಟ್ ನೆಲಕ್ಕೆ ಅಥವಾ ಕಟ್ಟಡಕ್ಕೆ ಅಪ್ಪಳಿಸುವ ಪ್ರಯತ್ನ ಮಾಡಿದ್ದ. ವೈಮಾನಿಕ ಉಗ್ರ ದಾಳಿಯ ಈ ಭಯಾನಕ ಸಂಚನ್ನು ವಿಫಲಗೊಳಿಸುವಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಪ್ರದರ್ಶಿಸಿದ ಸಮಯಪ್ರಜ್ಞೆ, ಅಪ್ರತಿಮ ಧೈರ್ಯ ಮತ್ತು ವೃತ್ತಿಪರತೆ ನೂರಾರು ಮುಗ್ಧ ಜೀವಗಳನ್ನು ಉಳಿಸಿದೆ. ಈ ವಿಮಾನದಲ್ಲಿ 27 ಮಕ್ಕಳು ಸೇರಿದಂತೆ 180 ಮಕ್ಕಳು ಪ್ರಯಾಣಿಸುತ್ತಿದ್ದರು. ಸಂಕಷ್ಟದ ಕ್ಷಣದಲ್ಲಿ ಎದೆಗುಂದದೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಈ ದಿಟ್ಟತನ ಕೇವಲ ಕರ್ತವ್ಯನಿಷ್ಠೆಯಷ್ಟೇ ಅಲ್ಲ, ಜಾಗತಿಕ ನಾಗರಿಕ ವಿಮಾನಯಾನ ಇತಿಹಾಸದಲ್ಲೇ ಮಹತ್ವದ ಮಾನವೀಯ ಸಾಹಸ. ಸಹ ಪೈಲಟ್ನಿಂದ ಚಾಕುವಿನಿಂದ ದಾಳಿಗೊಳಗಾದರೂ ಕೆಚ್ಚೆದೆಯಿಂದ ಹೋರಾಡಿದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ವಿಮಾನ ಪತನಗೊಳ್ಳುವುದನ್ನು ತಡೆದಿದ್ದಾರೆ. ಬಳಿಕ ವಿಮಾನದಲ್ಲಿದ್ದ ಇತರ ಪೈಲಟ್ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಮಚ್ಚಾರ್ ನಡೆಸಿದ ರೋಚಕ ಹಾಗೂ ದಿಟ್ಟ ಕಾರ್ಯಾಚರಣೆಗೆ ಜಾಗತಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ‘ಸ್ಮಿತ್ ಮಚ್ಚಾರ್ ಅಸಾಧಾರಣ ತಾಳ್ಮೆ, ಸಮಯಪ್ರಜ್ಞೆ, ಧೈರ್ಯ ಪ್ರದರ್ಶಿಸಿದ್ದಾರೆ’ ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಸ್ಮಿತ್ ಕುಟುಂಬವರ್ಗದವರೊಂದಿಗೂ ಮಾತನಾಡಿದ್ದಾರೆ. ‘ಪೈಲಟ್ ಸ್ಥಿತಿ ಬಹಳ ಗಂಭೀರವಾಗಿತ್ತು, ತೀವ್ರ ರಕ್ತಸ್ರಾವದ ನಡುವೆಯೂ ಅವರು ತೋರಿದ ಸಮಯಪ್ರಜ್ಞೆ ಅದ್ಭುತ. ಕಾಕ್ಪಿಟ್ ಬಾಗಿಲು ತೆರೆದ ಅವರು ನೆರವಿಗಾಗಿ ಕೂಗಿಕೊಂಡರು. ಅವರು ನಿಜವಾದ ಹೀರೋ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ಆದರೆ, ಈ ಘಟನೆಯು ಜಗತ್ತಿಗೆ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ. ವಿಮಾನಯಾನ ಸುರಕ್ಷತೆಯ ಅತ್ಯುನ್ನತ ತಂತ್ರಜ್ಞಾನಗಳು ಲಭ್ಯವಿರುವ ಇಂದಿನ ದಿನಗಳಲ್ಲೂ ಉಗ್ರ ಸಂಘಟನೆಗಳು ಆಕಾಶ ಮಾರ್ಗದಲ್ಲೇ ವಿನಾಶ ಸೃಷ್ಟಿಸಲು ಹೊಂಚು ಹಾಕುತ್ತಿರುವುದು ತೀವ್ರ ಆತಂಕಕಾರಿ. ಕೇವಲ ನೆಲದ ಮೇಲಿನ ಗುಪ್ತಚರ ನಿಗಾ ಸಾಕಾಗುವುದಿಲ್ಲ, ವಾಯುಪ್ರದೇಶ ಮತ್ತು ವಿಮಾನ ನಿಲ್ದಾಣಗಳ ಕಣ್ಗಾವಲಿನಲ್ಲಿ ಲೋಪಕ್ಕೆ ಆಸ್ಪದವಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಭಯೋತ್ಪಾದನೆಯು ಯಾವ ಕ್ಷಣದಲ್ಲಿ, ಯಾವ ರೂಪದಲ್ಲಿ ಎದುರಾಗಬಹುದೆಂಬ ಊಹೆಯೂ ಅಸಾಧ್ಯವೆಂಬ ವಾಸ್ತವ ಮತ್ತೆ ಎದುರಾಗಿದೆ.
ಭಯೋತ್ಪಾದನೆ ಯಾವುದೇ ಗಡಿಯಾಗಲಿ, ಧರ್ಮವಾಗಲಿ ಅಥವಾ ದೇಶವಾಗಲಿ ನೋಡುವುದಿಲ್ಲ. ಅದರ ಏಕೈಕ ಗುರಿ ಭಯ ಮತ್ತು ವಿನಾಶ. ಹೀಗಾಗಿ, ಇದರ ವಿರುದ್ಧದ ಹೋರಾಟ ಕೇವಲ ಒಂದೆರಡು ದೇಶಗಳ ಜವಾಬ್ದಾರಿಯಾಗಲು ಸಾಧ್ಯವಿಲ್ಲ. ಜಾಗತಿಕ ಸಮುದಾಯವು ಗುಪ್ತಚರ ಮಾಹಿತಿ ವಿನಿಮಯ, ಕಠಿಣ ಅಂತಾರಾಷ್ಟ್ರೀಯ ನೀತಿಗಳು ಹಾಗೂ ರಾಜತಾಂತ್ರಿಕ ಒಗ್ಗಟ್ಟಿನ ಮೂಲಕ ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಬೇಕಿದೆ. ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮುದಾಯ ಒಂದಾಗಿ ಹೋರಾಡಬೇಕು ಎಂದು ಭಾರತ ಹಲವು ಬಾರಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಗಟ್ಟಿದನಿಯಲ್ಲಿ ಹೇಳಿದ್ದು, ಇನ್ನಾದರೂ ಈ ಇಚ್ಛಾಶಕ್ತಿಯನ್ನು ಇಡೀ ವಿಶ್ವ ಪ್ರದರ್ಶಿಸಬೇಕಿದೆ.