ಸೇನಾಶಕ್ತಿಯ ಮೂಲಕ ಇರಾನ್ ಅನ್ನು ಮಣಿಸಲು ಯತ್ನಿಸುತ್ತಿರುವ ಅಮೆರಿಕ, ಈಗ ಆರ್ಥಿಕ ಯುದ್ಧದ ಮೂಲಕ ಪ್ರಸಕ್ತ ಸಮರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಇರಾನ್ ವಿರುದ್ಧ ಆರ್ಥಿಕ ಯುದ್ಧ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ಗೆ ಯಾವುದೇ ರೀತಿಯ ನೆರವು ನೀಡುವ ದೇಶಗಳು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಭಾರತ ಮತ್ತು ಇರಾನ್ ನಡುವೆ ಹಲವು ದಶಕಗಳಿಂದಲೂ ಗಾಢವಾದ ವ್ಯಾಪಾರ ಹಾಗೂ ರಾಜತಾಂತ್ರಿಕ ಬಾಂಧವ್ಯವಿದೆ. ಆದರೆ, ಟ್ರಂಪ್ ಹೊಸ ವರಸೆ ಭಾರತದ ರಫ್ತು ವಲಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ದಶಕಗಳ ಇತಿಹಾಸವನ್ನು ಹೊಂದಿದ್ದು, ಇದು ಕೇವಲ ಎರಡು ದೇಶಗಳ ನಡುವಿನ ವಿವಾದವಾಗಿರದೆ ಜಾಗತಿಕ ಇಂಧನ ಮಾರುಕಟ್ಟೆ, ಹಣಕಾಸು ವ್ಯವಸ್ಥೆ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಇರಾನ್ ವಿರುದ್ಧ ಅಮೆರಿಕ ಹೇರುತ್ತಿರುವ ಕಠಿಣ ಆರ್ಥಿಕ ನಿರ್ಬಂಧಗಳು ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ. ಅಮೆರಿಕ-ಇರಾನ್ ನಡುವಿನ ಈ ಆರ್ಥಿಕ ಸಂಘರ್ಷವು ಭಾರತದ ಮೇಲೂ ಹಲವು ಆಯಾಮಗಳಲ್ಲಿ ನೇರ ಹಾಗೂ ಪರೋಕ್ಷ ಪ್ರಭಾವ ಬೀರುತ್ತದೆ. ಇರಾನ್ ಆರ್ಥಿಕತೆಯ ಬೆನ್ನೆಲುಬಾಗಿರುವ ಕಚ್ಚಾ ತೈಲ ರಫ್ತನ್ನು ಕಡಿತಗೊಳಿಸುವುದು ಅಮೆರಿಕದ ಪ್ರಬಲವಾದ ಆರ್ಥಿಕ ಅಸ್ತ್ರವಾಗಿದೆ. ಇರಾನ್ ಸರ್ಕಾರದ ವಾರ್ಷಿಕ ಬಜೆಟ್ ಮತ್ತು ವಿದೇಶಿ ವಿನಿಮಯ ಗಳಿಕೆಯ ಬಹುಪಾಲು ತೈಲ ಮಾರಾಟದಿಂದಲೇ ಬರುತ್ತದೆ. ಇದನ್ನು ತಡೆದರೆ ದೇಶದ ಬೊಕ್ಕಸಕ್ಕೆ ನೇರ ಹೊಡೆತ ಬೀಳುತ್ತದೆ ಎಂಬುದು ಅಮೆರಿಕದ ಲೆಕ್ಕಾಚಾರ. ಅಲ್ಲದೆ, ಇರಾನ್ ತನ್ನ ರಕ್ಷಣಾ ಯೋಜನೆಗಳು ಮತ್ತು ಪ್ರಾದೇಶಿಕ ಮಿತ್ರಪಡೆಗಳಿಗೆ ನೀಡುವ ಆರ್ಥಿಕ ಬೆಂಬಲವನ್ನು ನಿಲ್ಲಿಸಲು ಆದಾಯದ ಮೂಲವನ್ನು ಮುಚ್ಚುವುದು ಅಮೆರಿಕದ ಗುರಿ.
ಸಾರಿಗೆ ಮತ್ತು ವಿಮಾ ನಿರ್ಬಂಧಗಳು: ಕಚ್ಚಾ ತೈಲ ಒಯ್ಯುವ ಹಡಗುಗಳಿಗೆ ಜಾಗತಿಕ ಸಮುದ್ರ ವಿಮೆ ಅಮೆರಿಕ ಅಥವಾ ಯುರೋಪಿಯನ್ ಕಂಪನಿಗಳಿಂದಲೇ ದೊರೆಯಬೇಕು. ನಿರ್ಬಂಧಗಳಿಂದಾಗಿ ಈ ಹಡಗುಗಳಿಗೆ ವಿಮೆ ಹಾಗೂ ರೇಟಿಂಗ್ ಸಿಗದಂತೆ ಮಾಡಲಾಗುತ್ತಿದೆ.
ಅಮೆರಿಕದ ನಿರ್ಬಂಧಗಳ ಮುಖ್ಯ ಉದ್ದೇಶಗಳು
ಇರಾನ್ನ ಪ್ರಮುಖ ಆದಾಯದ ಮೂಲವಾದ ಕಚ್ಚಾ ತೈಲ ರಫ್ತನ್ನು ಸಂಪೂರ್ಣವಾಗಿ ಕಡಿತಗೊಳಿಸುವುದು.
ಜಾಗತಿಕ ಮಟ್ಟದಲ್ಲಿ ಡಾಲರ್ ಆಧಾರಿತ ವಹಿವಾಟು ನಡೆಸದಂತೆ ಇರಾನ್ನ ಬ್ಯಾಂಕಿಂಗ್ ಜಾಲವನ್ನು ಅಂತಾರಾಷ್ಟ್ರೀಯ ವ್ಯವಸ್ಥೆಯಿಂದ ಪ್ರತ್ಯೇಕಿಸುವುದು.
ಇರಾನ್ ಜೊತೆ ವ್ಯಾಪಾರ ಮುಂದುವರಿಸುವ ಮೂರನೇ ದೇಶಗಳ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳ ಮೇಲೂ ಅಮೆರಿಕದ ಮಾರುಕಟ್ಟೆಯಲ್ಲಿ ನಿರ್ಬಂಧ ಹೇರುವ ಎಚ್ಚರಿಕೆ.
ಇರಾನ್ ಭಾರತಕ್ಕೆ ಕಡಿಮೆ ದರದಲ್ಲಿ ಮತ್ತು ಸಾಲದ ಸೌಲಭ್ಯದೊಂದಿಗೆ ಕಚ್ಚಾ ತೈಲವನ್ನು ಪೂರೈಸುವ ಪ್ರಮುಖ ದೇಶಗಳಲ್ಲಿ ಒಂದು. ನಿರ್ಬಂಧಗಳ ಕಾರಣದಿಂದ ಭಾರತವು ಇರಾನ್ನಿಂದ ತೈಲ ಆಮದನ್ನು ಕಡಿತಗೊಳಿಸಿ, ಸೌದಿ ಅರೇಬಿಯಾ, ಇರಾಕ್ ಅಥವಾ ರಷ್ಯಾದಂತಹ ಪರ್ಯಾಯ ಮಾರುಕಟ್ಟೆಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕಾಗುತ್ತದೆ. ಇದು ಆಮದು ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಬಹುದು. ಇದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಬಹುದು.
ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾ ದೇಶಗಳಿಗೆ ಸಂಪರ್ಕ ಸಾಧಿಸಲು ಭಾರತವು ಇರಾನ್ನ ಚಾಬಹಾರ್ ಬಂದರಿನಲ್ಲಿ ಹೂಡಿಕೆ ಮಾಡಿದೆ. ಅಮೆರಿಕ ಈ ಯೋಜನೆಗೆ ವಿನಾಯಿತಿ ನೀಡಿದ್ದರೂ, ನಿರ್ಬಂಧಗಳ ಬಿಗಿಗೊಳಿಸುವಿಕೆಯಿಂದಾಗಿ ಅಲ್ಲಿನ ಲಾಜಿಸ್ಟಿಕ್ಸ್, ಹಣಕಾಸು ವರ್ಗಾವಣೆ ಮತ್ತು ಕಾಮಗಾರಿಗಳ ವೇಗಕ್ಕೆ ಅಡ್ಡಿಯಾಗುವ ಅಪಾಯ ತಲೆದೋರಿದೆ.
ಭಾರತವು ಇರಾನ್ಗೆ ಬಾಸ್ಮತಿ ಅಕ್ಕಿ, ಚಹಾ, ಔಷಧಗಳು, ಸಕ್ಕರೆ ಮತ್ತು ಯಂತ್ರೋಪಕರಣಗಳನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಡಾಲರ್ ಅಥವಾ ಯೂರೋ ಮೂಲಕ ಹಣ ಪಾವತಿಸಲು ಸಾಧ್ಯವಾಗದ ಕಾರಣ, ಭಾರತೀಯ ರಫ್ತುದಾರರಿಗೆ ಹಣ ವಾಪಸಾತಿ ವಿಳಂಬವಾಗುವ ಮತ್ತು ವ್ಯಾಪಾರ ಪ್ರಮಾಣ ಕುಸಿಯುವ ಆತಂಕ ಸೃಷ್ಟಿಯಾಗಿದೆ.
ಅಮೆರಿಕದೊಂದಿಗೆ ಬೆಳೆಯುತ್ತಿರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಅದೇ ಸಮಯದಲ್ಲಿ ಪಶ್ಚಿಮ ಏಷ್ಯಾದಲ್ಲಿ ತನ್ನ ಹಿತಾಸಕ್ತಿ ಹೊಂದಿರುವ ಇರಾನ್ ಜೊತೆಗಿನ ಐತಿಹಾಸಿಕ ಸಂಬಂಧವನ್ನು ಸಮತೋಲನದಲ್ಲಿಡುವುದು ಭಾರತಕ್ಕೆ ರಾಜತಾಂತ್ರಿಕ ಸವಾಲಿನ ಕೆಲಸವಾಗಿದೆ.
1. ಡಾಲರ್ ಅವಲಂಬನೆ ತಪ್ಪಿಸಲು ಸ್ಥಳೀಯ ಕರೆನ್ಸಿಗಳಲ್ಲಿ (ರೂಪಾಯಿ-ರಿಯಾಲ್) ವಹಿವಾಟು ನಡೆಸುವ ಕಾರ್ಯವಿಧಾನ ಬಳಸುವುದು ಸೂಕ್ತ ಎಂಬುದು ತಜ್ಞರ ನಿಲುವು.
2. ಚಾಬಹಾರ್ನಂತಹ ಆಯಕಟ್ಟಿನ ಯೋಜನೆಗಳು ಹಾಗೂ ಅಗತ್ಯ ವಾಣಿಜ್ಯ ಸರಕುಗಳಿಗೆ ಅಮೆರಿಕದಿಂದ ನಿರ್ಬಂಧ ವಿನಾಯಿತಿಗಳನ್ನು ಪಡೆಯುವುದು.
1. ಅಮೆರಿಕನ್ ಡಾಲರ್ ಬದಲಿಗೆ ಚೀನೀ ಯುವಾನ್, ರಷ್ಯನ್ ರೂಬಲ್ ಅಥವಾ ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು ನಡೆಸುವುದು.
2. ಕಡಲಿನಲ್ಲಿ ಹಡಗುಗಳಿಂದ ಹಡಗಿಗೆ ತೈಲ ವರ್ಗಾವಣೆ ಮಾಡುವ ಮೂಲಕ ಟ್ರ್ಯಾಕಿಂಗ್ ತಪ್ಪಿಸಿ ಏಷ್ಯಾದ ದೇಶಗಳಿಗೆ ಕಚ್ಚಾ ತೈಲ ರಫ್ತು ಮಾಡುವುದು.
3. ವಿದೇಶಿ ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ದೇಶೀಯ ಉತ್ಪಾದನೆಗೆ ಒತ್ತು ನೀಡುವುದು.
1. ಇರಾನ್ನ ಪರಮಾಣು ಕಾರ್ಯಕ್ರಮವನ್ನು ತಡೆಯಲು 2015ರಲ್ಲಿ ಆದ ಜಂಟಿ ಸಮಗ್ರ ಕ್ರಿಯಾ ಯೋಜನೆ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಬಳಿಕ ಸಂಘರ್ಷ ತೀವ್ರಗೊಂಡಿದೆ.
2. ಪಶ್ಚಿಮ ಏಷ್ಯಾದಲ್ಲಿ ಇರಾನ್ನ ಮಿಲಿಟರಿ ಮತ್ತು ಪ್ರಾಕ್ಸಿ ಗುಂಪುಗಳ ಪ್ರಭಾವ ನಿಯಂತ್ರಿಸಲು ಅಮೆರಿಕ ಆರ್ಥಿಕ ನಿರ್ಬಂಧಗಳನ್ನು ಅಸ್ತ್ರವಾಗಿ ಬಳಸುತ್ತಿದೆ.
3. ಇರಾನ್ನ ಪ್ರಮುಖ ಬ್ಯಾಂಕುಗಳನ್ನು ಜಾಗತಿಕ ಹಣಕಾಸು ಸಂದೇಶ ವ್ಯವಸ್ಥೆಯಿಂದ ಪ್ರತ್ಯೇಕಿಸಿ, ವಿದೇಶಿ ಕರೆನ್ಸಿ ವಹಿವಾಟು ನಡೆಸದಂತೆ ತಡೆಯುವುದು.
4. ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ಮೂರನೇ ದೇಶದ ಕಂಪನಿಗಳು ಅಮೆರಿಕದ ಮಾರುಕಟ್ಟೆಯಲ್ಲಿ ಅಥವಾ ಡಾಲರ್ ಮೂಲಕ ವಹಿವಾಟು ನಡೆಸದಂತೆ ನಿರ್ಬಂಧಿಸುವುದು.
5. ವಿದೇಶಗಳಲ್ಲಿರುವ ಇರಾನ್ ಸರ್ಕಾರದ ಮತ್ತು ಅದರ ಪ್ರಮುಖ ನಾಯಕರ ನೂರಾರು ಕೋಟಿ ಡಾಲರ್ ಮೌಲ್ಯದ ಹಣಕಾಸು ಆಸ್ತಿಗಳನ್ನು ಫ್ರೀಜ್ ಮಾಡುವುದು.
ಇರಾನ್ನ ಇಸ್ಲಾಮಿಕ್ ಗಣರಾಜ್ಯಕ್ಕೆ ಒಪ್ಪಂದ ಮಾಡಿಕೊಳ್ಳಲು ನನ್ನಷ್ಟು ದೊಡ್ಡ ಅವಕಾಶವನ್ನು ಯಾರೂ ನೀಡಿಲ್ಲ. ಆದರೆ, ದುರಂತವೆಂದರೆ ಅವರು ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ, ಯಾವುದೇ ದೇಶದ ವಿರುದ್ಧ ಇದುವರೆಗೆ ಕೈಗೊಳ್ಳದ ಅತ್ಯಂತ ಕಠಿಣ ಆರ್ಥಿಕ ಕಾರ್ಯಾಚರಣೆಯನ್ನು ಘೋಷಿಸುತ್ತಿದ್ದೇನೆ. ಇದು ಹಿಂದೆಂದೂ ಕಾಣದ "ಆರ್ಥಿಕ ಸಮರ' ಹಾಗೂ "ಪ್ರತ್ಯೇಕಿಕರಣ'ವಾಗಲಿದೆ. ಇರಾನ್ನ ಹಣಕಾಸು ಸಂಸ್ಥೆಗಳು, ವ್ಯಾಪಾರ-ವಹಿವಾಟು, ವಿಮಾನ ನಿಲ್ದಾಣಗಳು ಅಥವಾ ಸರ್ಕಾರಿ ಸಂಸ್ಥೆಗಳಿಗೆ ಯಾವುದೇ ರೀತಿಯ ನೆರವು ನೀಡುವ ದೇಶಗಳ ಮೇಲೆಯೂ ಕಠಿಣ ಆರ್ಥಿಕ ಕ್ರಮಗಳನ್ನು ಕೈಗೊಳ್ಳಲಾಗುವುದು.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಇರಾನ್ ವಿರುದ್ಧದ ಕ್ರಮವನ್ನು ಟ್ರಂಪ್ "ಎಕನಾಮಿಕ್ ಡಿ-ಡೇ' ಎಂದು ಉಲ್ಲೇಖಿಸಿದ್ದಾರೆ. ಎಕನಾಮಿಕ್ ಡಿ-ಡೇ ಎಂದರೆ ಒಂದು ನಿರ್ದಿಷ್ಟ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಲು ಹಾಗೂ ಜಾಗತಿಕ ಮಟ್ಟದಲ್ಲಿ ಅದನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಕೈಗೊಳ್ಳುವ ಸರ್ವಾಂಗೀಣ, ಸಂಘಟಿತ ಮತ್ತು ಅತ್ಯಂತ ಕಠಿಣ ಆರ್ಥಿಕ ದಿಗ್ಬಂಧನವಾಗಿದೆ. ಈ ಪದಪ್ರಯೋಗವು ಎರಡನೇ ಮಹಾಯುದ್ಧದ ಪ್ರಸಿದ್ಧ "ಡಿ-ಡೇ' ಪರಿಕಲ್ಪನೆಯನ್ನು ಆಧರಿಸಿದೆ.
ಇರಾನ್ಗೆ ಒಟ್ಟು ಆದಾಯದಲ್ಲಿ ಶೇಕಡ 25ರಷ್ಟು ತೈಲ ರಫ್ತಿನಿಂದಲೇ ಬರುತ್ತದೆ. ಆದರೆ ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ನೌಕಾಪಡೆಯ ದಿಗ್ಬಂಧನ ಹಾಗೂ ಹೊಮುರ್ಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಇರಾನ್ನ ತೈಲ ರಫ್ತು ಬಹುತೇಕ ಶೂನ್ಯಕ್ಕೆ ತಲುಪಿದೆ. ದಿನಕ್ಕೆ ನೂರಾರು ಕೋಟಿ ರೂಪಾಯಿಯಷ್ಟು ಆದಾಯದ ನಷ್ಟವಾಗುತ್ತಿದೆ. ಯುದ್ಧದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಿಗೆ ಕೊರತೆ ಉಂಟಾಗಿದ್ದು, ಕೆಲವು ಆಹಾರ ಪದಾರ್ಥಗಳ ಬೆಲೆ ಶೇಕಡ 100ರಷ್ಟು ಹೆಚ್ಚಾಗಿದೆ. ಗೋಧಿ, ಬ್ರೆಡ್ ಮತ್ತು ಧಾನ್ಯಗಳ ಬೆಲೆ ಶೇ.140ರಷ್ಟು ಹಾಗೂ ಮಾಂಸ ಮತ್ತು ಡೇರಿ ಉತ್ಪನ್ನಗಳ ಬೆಲೆ ಶೇ.115ಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ. ಇರಾನ್ನ ಕರೆನ್ಸಿಯಾದ ರಿಯಾಲ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಪ್ರಸ್ತುತ ಒಂದು ಅಮೆರಿಕನ್ ಡಾಲರ್ಗೆ ಇರಾನಿ ರಿಯಾಲ್ ಮೌಲ್ಯ ಅಂದಾಜು 1.8ರಿಂದ 1.9 ಮಿಲಿಯನ್ (18ರಿಂದ 19 ಲಕ್ಷ ರಿಯಾಲ್) ದಾಟಿದೆ. ಇದರಿಂದಾಗಿ ಜನರ ಕೈಲಿದ್ದ ಹಣಕ್ಕೆ ಮೌಲ್ಯವೇ ಇಲ್ಲದಂತಾಗಿದೆ.