ಕಿಲ್ಲರ್ ಎಲೆಕ್ಟ್ರಾನ್​ಗಳು WEB
ವಿದೇಶ

ಭೂಮಿಯ ಅಜೇಯ ರಕ್ಷಣಾ ಕವಚ ಭೇದಿಸಿದ 'ಕಿಲ್ಲರ್ ಎಲೆಕ್ಟ್ರಾನ್'ಗಳು! 5,000 ಪಟ್ಟು ಹೆಚ್ಚಳ ಕಂಡು ವಿಜ್ಞಾನಿಗಳಲ್ಲಿ ಅಚ್ಚರಿ....Earth Radiation Belt

ಭೂಮಿಯ ಸುತ್ತಲೂ ಅಪಾಯಕಾರಿ ವಿಕಿರಣ ಕಣಗಳನ್ನು ತಡೆಯುವ ನೈಸರ್ಗಿಕ ವ್ಯವಸ್ಥೆಯಿದೆ ಎಂಬುದು ವಿಜ್ಞಾನಿಗಳ ತಿಳುವಳಿಕೆ. ಅದರಲ್ಲೂ ಅತ್ಯಂತ ವೇಗದ ಎಲೆಕ್ಟ್ರಾನ್‌ಗಳು ಒಳಪ್ರದೇಶಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯಿತ್ತು. ಆದರೆ 2024ರ ಮೇ ತಿಂಗಳಲ್ಲಿ ಸಂಭವಿಸಿದ ಪ್ರಬಲ ಸೌರ ಬಿರುಗಾಳಿಯೊಂದು ಈ ತಿಳುವಳಿಕೆಗೆ ಸವಾಲು ಹಾಕಿದೆ. ಭೂಮಿಯ ಒಳಗಿನ ವಿಕಿರಣ ವಲಯದಲ್ಲೇ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಾನ್‌ಗಳ ಪ್ರಮಾಣ ಬರೋಬ್ಬರಿ 5,000 ಪಟ್ಟು ಹೆಚ್ಚಾಗಿರುವುದು ಹೊಸ ಅಧ್ಯಯನದಲ್ಲಿ ಪತ್ತೆಯಾಗಿದೆ...Earth Radiation Belt

Earth Radiation Belt: ಭೂಮಿಯ ಸುತ್ತಲೂ ಅಪಾಯಕಾರಿ ವಿಕಿರಣ ಕಣಗಳನ್ನು ತಡೆಯುವ ನೈಸರ್ಗಿಕ ವ್ಯವಸ್ಥೆಯಿದೆ ಎಂಬುದು ವಿಜ್ಞಾನಿಗಳ ತಿಳುವಳಿಕೆ. ಅದರಲ್ಲೂ ಅತ್ಯಂತ ವೇಗದ ಎಲೆಕ್ಟ್ರಾನ್‌ಗಳು ಒಳಪ್ರದೇಶಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯಿತ್ತು. ಆದರೆ 2024ರ ಮೇ ತಿಂಗಳಲ್ಲಿ ಸಂಭವಿಸಿದ ಪ್ರಬಲ ಸೌರ ಬಿರುಗಾಳಿಯೊಂದು ಈ ತಿಳುವಳಿಕೆಗೆ ಸವಾಲು ಹಾಕಿದೆ. ಭೂಮಿಯ ಒಳಗಿನ ವಿಕಿರಣ ವಲಯದಲ್ಲೇ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಾನ್‌ಗಳ ಪ್ರಮಾಣ ಬರೋಬ್ಬರಿ 5,000 ಪಟ್ಟು ಹೆಚ್ಚಾಗಿರುವುದು ಹೊಸ ಅಧ್ಯಯನದಲ್ಲಿ ಪತ್ತೆಯಾಗಿದೆ.

ಭೂಮಿಯ ಸುತ್ತಲೂ ವ್ಯಾನ್ ಅಲೆನ್ ವಿಕಿರಣ ವಲಯಗಳು ಎಂಬ ಎರಡು ಬೃಹತ್ ಪ್ರದೇಶಗಳಿವೆ. ಭೂಮಿಯ ಕಾಂತಕ್ಷೇತ್ರದ ಪ್ರಭಾವದಿಂದ ವಿದ್ಯುದಾವೇಶ ಹೊಂದಿರುವ ಕಣಗಳು ಇಲ್ಲಿ ಸಿಲುಕಿಕೊಂಡಿರುತ್ತವೆ. ಒಳಗಿನ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ಶಕ್ತಿಶಾಲಿ ಪ್ರೋಟಾನ್‌ಗಳಿದ್ದರೆ, ಹೊರಗಿನ ವಲಯದಲ್ಲಿ ಎಲೆಕ್ಟ್ರಾನ್‌ಗಳು ಹೆಚ್ಚಾಗಿರುತ್ತವೆ. ಇವುಗಳನ್ನು ಭೂಮಿಯ ಸುತ್ತಲಿನ ವಿಕಿರಣ ಪರಿಸರದ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ ಇದೇ ಕಣಗಳು ಬಾಹ್ಯಾಕಾಶದಲ್ಲಿರುವ ಉಪಗ್ರಹಗಳು ಮತ್ತು ಗಗನಯಾನಿಗಳಿಗೆ ಅಪಾಯ ಉಂಟುಮಾಡಬಲ್ಲವು.

ಇದನ್ನೂ ಓದಿ : ಮೆದುಳಿನ ಯಾವ ಭಾಗ ನಿಜಕ್ಕೂ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ? ಮಾನವನ ಅರಿವಿನ ಹಿಂದಿನ ರಹಸ್ಯ ಬಯಲು! Brain science

ಒಡೆಯಲಾಗದ ಗೋಡೆ ಎಂಬ ನಂಬಿಕೆಗೆ ಸವಾಲು

ಒಳಗಿನ ವಿಕಿರಣ ವಲಯವು ಅತ್ಯಂತ ವೇಗದ ಎಲೆಕ್ಟ್ರಾನ್‌ಗಳನ್ನು ಒಳಗೆ ಪ್ರವೇಶಿಸದಂತೆ ತಡೆಯುವ ಅಡೆತಡೆಯಂತೆ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಒಂದು ದಶಕಕ್ಕೂ ಹೆಚ್ಚು ಕಾಲ ಭಾವಿಸಿದ್ದರು. ಇದನ್ನು 'ಇಂಪೆನೆಟ್ರೇಬಲ್ ಬ್ಯಾರಿಯರ್' ಅಥವಾ ಭೇದಿಸಲಾಗದ ತಡೆಗೋಡೆ ಎಂದು ಕರೆಯಲಾಗುತ್ತಿತ್ತು. ಆದರೆ 2024ರ ಮೇನಲ್ಲಿ ಸಂಭವಿಸಿದ ಜಿ5 (G5) ಮಟ್ಟದ ಪ್ರಬಲ ಭೂಕಾಂತೀಯ ಬಿರುಗಾಳಿಯ ಸಂದರ್ಭದಲ್ಲಿ ಈ ತಡೆಗೋಡೆಯ ಒಳಭಾಗದಲ್ಲೂ ಅತಿ ಹೆಚ್ಚು ಶಕ್ತಿಯ ಎಲೆಕ್ಟ್ರಾನ್‌ಗಳು ಕಾಣಿಸಿಕೊಂಡಿವೆ.

ಜಪಾನ್‌ನ ಅರಾಸೆ ಉಪಗ್ರಹವು ದಾಖಲಿಸಿದ ದತ್ತಾಂಶವನ್ನು ವಿಶ್ಲೇಷಿಸಿದ ಸಂಶೋಧಕರು ಈ ಬೆಳವಣಿಗೆಯನ್ನು ಪತ್ತೆಹಚ್ಚಿದ್ದಾರೆ. ಸುಮಾರು 3 ಮೆಗಾ ಎಲೆಕ್ಟ್ರಾನ್ ವೋಲ್ಟ್ ಶಕ್ತಿಯ ಎಲೆಕ್ಟ್ರಾನ್‌ಗಳ ಪ್ರಮಾಣ, ಬಿರುಗಾಳಿಗೂ ಮುನ್ನ ದಾಖಲಾಗಿದ್ದ ಮಟ್ಟಕ್ಕೆ ಹೋಲಿಸಿದರೆ 5,000 ಪಟ್ಟು ಹೆಚ್ಚಾಗಿತ್ತು. ಈ ಕಣಗಳು ಹೊರಗಿನಿಂದ ಒಳಗೆ ಬಂದಿದ್ದಷ್ಟೇ ಅಲ್ಲ, ಭೂಮಿಯ ಒಳಗಿನ ವಿಕಿರಣ ವಲಯದಲ್ಲೇ ವೇಗ ಪಡೆದು ರೂಪುಗೊಂಡಿವೆ ಎಂಬುದಕ್ಕೆ ಅಧ್ಯಯನದಲ್ಲಿ ಸಾಕ್ಷ್ಯ ದೊರೆತಿದೆ.

ಇದನ್ನೂ ಓದಿ: ನೀವು ಕೂಡ ಏಕಾಂತವಾಗಿರುವುದನ್ನು ಪ್ರೀತಿಸುತ್ತೀರಾ? ಇದರ ಹಿಂದೆ ಇರುವ ಸತ್ಯ ಗೊತ್ತಾ? ಅಂತರ್ಮುಖಿಗಳ ಅಚ್ಚರಿ ಲೋಕ...Loneliness

ಕಣಗಳಿಗೆ ಶಕ್ತಿ ನೀಡಿದ ಬಾಹ್ಯಾಕಾಶದ ಅಲೆಗಳು

ಸೌರ ಬಿರುಗಾಳಿಯಿಂದ ಭೂಮಿಯ ಸುತ್ತಲಿನ ಪ್ಲಾಸ್ಮಾಸ್ಫಿಯರ್ ಪ್ರದೇಶದಲ್ಲಿದ್ದ ತಂಪಾದ ಪ್ಲಾಸ್ಮಾದ ಪ್ರಮಾಣ ಗಣನೀಯವಾಗಿ ಕಡಿಮೆಯಾಯಿತು. ಇದರಿಂದ 'ಕೋರಸ್ ಅಲೆಗಳು' ಎಂಬ ವಿದ್ಯುತ್ಕಾಂತೀಯ ಅಲೆಗಳು ಎಲೆಕ್ಟ್ರಾನ್‌ಗಳಿಗೆ ಅಪಾರ ಶಕ್ತಿ ನೀಡಲು ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಯಿತು. ಆರಂಭದಲ್ಲಿ ಕಡಿಮೆ ಶಕ್ತಿಯ ಕಣಗಳು ಕಾಣಿಸಿಕೊಂಡು, ಮುಂದಿನ 24 ಗಂಟೆಗಳಲ್ಲಿ ಹೆಚ್ಚು ಶಕ್ತಿಯ ಕಣಗಳ ಪ್ರಮಾಣ ಹೆಚ್ಚಾಗಿರುವುದನ್ನೂ ಸಂಶೋಧಕರು ಗಮನಿಸಿದ್ದಾರೆ.

ಈ ಎಲೆಕ್ಟ್ರಾನ್‌ಗಳು ಬೆಳಕಿನ ವೇಗಕ್ಕೆ ಸಮೀಪದಲ್ಲಿ ಚಲಿಸಬಲ್ಲವು. ಇವು ಉಪಗ್ರಹಗಳ ರಕ್ಷಣಾತ್ಮಕ ಹೊದಿಕೆಯನ್ನು ಭೇದಿಸಿ ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ ಉಂಟುಮಾಡಬಹುದು. ಗಗನಯಾನಿಗಳ ವಿಕಿರಣದ ಅಪಾಯವನ್ನೂ ಹೆಚ್ಚಿಸಬಹುದು. ಈ ಪರಿಣಾಮ 2024ರ ಅಕ್ಟೋಬರ್‌ವರೆಗೂ ದಾಖಲಾಗಿತ್ತು.

ನಗೋಯಾ ವಿಶ್ವವಿದ್ಯಾಲಯದ ಯೋಶಿಜುಮಿ ಮಿಯೋಷಿ ನೇತೃತ್ವದ ಸಂಶೋಧಕರ ಅಧ್ಯಯನವು ಅಕ್ಟೋಬರ್ 26, 2026ರಂದು ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಸಂಶೋಧನೆಯು ಸೌರ ಬಿರುಗಾಳಿಗಳ ಪರಿಣಾಮವನ್ನು ಮುಂಚಿತವಾಗಿ ಅಂದಾಜಿಸುವುದಕ್ಕೂ, ಉಪಗ್ರಹಗಳು ಮತ್ತು ಬಾಹ್ಯಾಕಾಶ ಯಾನಿಗಳ ಸುರಕ್ಷತೆಯನ್ನು ಸುಧಾರಿಸುವುದಕ್ಕೂ ನೆರವಾಗಬಹುದು.( ಏಜೇನ್ಸಿಸ್​)