Earth Science : ನಾವು ವಾಸಿಸುವ ಭೂಮಿ ಇಂದು ಸಾಗರಗಳು, ಪರ್ವತಗಳು, ಕಾಡುಗಳು ಮತ್ತು ಜೀವಜಗತ್ತಿನಿಂದ ಕೂಡಿದೆ. ಆದರೆ ಸುಮಾರು 450 ಕೋಟಿ ವರ್ಷಗಳ ಹಿಂದೆ ಅದರ ಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಅಂದು ಭೂಮಿಯ ಮೇಲ್ಮೈ ಬಹುತೇಕ ಕರಗಿದ ಶಿಲೆಗಳಿಂದ ಆವೃತವಾಗಿದ್ದ ಬೃಹತ್ ಅಗ್ನಿಗೋಳದಂತಿತ್ತು. ಬಾಹ್ಯಾಕಾಶದಿಂದ ಅಪ್ಪಳಿಸುತ್ತಿದ್ದ ಶಿಲಾಖಂಡಗಳು ಮತ್ತು ತೀವ್ರ ಉಷ್ಣತೆಯ ನಡುವೆ ಭೂಮಿ ನಿಧಾನವಾಗಿ ರೂಪುಗೊಳ್ಳುತ್ತಿತ್ತು. ಕಾಲಕ್ರಮೇಣ ಅದು ತಣ್ಣಗಾಗಿ ವಿವಿಧ ಪದರಗಳಾಗಿ ರೂಪುಗೊಂಡಿತು. ಆದರೆ, ಅದರ ಜನ್ಮಕಾಲದ ಕೆಲವು ರಾಸಾಯನಿಕ ಅಂಶಗಳು ಇಂದಿಗೂ ಒಳಭಾಗದಲ್ಲಿ ಉಳಿದಿರಬಹುದು ಎಂಬುದು ವಿಜ್ಞಾನಿಗಳ ಗಮನ ಸೆಳೆದಿದೆ.
ಭೂಮಿಯ ಆರಂಭಿಕ ರಚನೆಯ ಸಂದರ್ಭದಲ್ಲಿ ಸೂರ್ಯನನ್ನು ರೂಪಿಸಿದ ಅನಿಲ ಮತ್ತು ಧೂಳಿನ ಬೃಹತ್ ಮೋಡಗಳಿಂದ ಜಲಜನಕವೂ ಭೂಮಿಯೊಳಗೆ ಸೇರಿಕೊಂಡಿರಬಹುದು. ಅದರ ಒಂದು ಭಾಗ ಭೂಮಿಯ ಲೋಹಗಳಿಂದ ಕೂಡಿದ ಕೇಂದ್ರಭಾಗದಲ್ಲಿ ಬಂಧಿತವಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಜಲಜನಕವು ಭೂಮಿಯ ಒಳಪದರಗಳ ಮೂಲಕ ಮೇಲಕ್ಕೆ ಚಲಿಸಿ, ಮ್ಯಾಂಟಲ್ ಮತ್ತು ಭೂಪದರದಲ್ಲಿರುವ ಖನಿಜಗಳೊಳಗೆ ನೀರಿನ ಅಂಶವಾಗಿ ಉಳಿಯುವ ಸಾಧ್ಯತೆಯಿದೆ. ಇದು ನದಿಗಳು ಅಥವಾ ಸಾಗರಗಳಲ್ಲಿರುವ ನೀರಿನಂತೆ ದ್ರವ ರೂಪದಲ್ಲಿರುವುದಿಲ್ಲ. ಖನಿಜಗಳ ರಚನೆಯೊಳಗೆ ಬಂಧಿತವಾಗಿರುತ್ತದೆ.
ಚೀನಾದ ಹೆಫೈ ನಗರದಲ್ಲಿರುವ ಯೂನಿವರ್ಸಿಟಿ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಸಂಶೋಧಕರ ತಂಡ ಈ ವಿಷಯದ ಕುರಿತು ಅಧ್ಯಯನ ನಡೆಸಿದೆ. ಭೂಮಿಯ ಆರಂಭಿಕ ಕಾಲದಲ್ಲಿ ಕರಗಿದ ಶಿಲೆಗಳ ಸಾಗರ ತಣ್ಣಗಾಗಿ ಗಟ್ಟಿಯಾದಾಗಲೇ ಒಳಪದರಗಳ ರಾಸಾಯನಿಕ ವ್ಯತ್ಯಾಸಗಳು ಉಂಟಾದವೇ ಅಥವಾ ನಂತರ ಕೇಂದ್ರಭಾಗ ಮತ್ತು ಮ್ಯಾಂಟಲ್ ನಡುವೆ ರಾಸಾಯನಿಕ ವಿನಿಮಯ ನಡೆದಿದೆಯೇ ಎಂಬುದನ್ನು ತಿಳಿಯುವುದು ಅವರ ಉದ್ದೇಶವಾಗಿತ್ತು.
ಇದಕ್ಕಾಗಿ ಸಂಶೋಧಕರು ಯಂತ್ರಕಲಿಕೆ ಆಧಾರಿತ ಗಣನಾ ವಿಧಾನಗಳು ಹಾಗೂ ಕ್ವಾಂಟಮ್ ಅನುಕರಣಾ ತಂತ್ರಜ್ಞಾನವನ್ನು ಬಳಸಿದ್ದಾರೆ. ವಿಶೇಷವಾಗಿ ಜಲಜನಕ ಮತ್ತು ಅದರ ಭಾರವಾದ ಸಮಸ್ಥಾನಿಯಾದ ಡ್ಯೂಟೇರಿಯಂ ನಡುವಿನ ಅನುಪಾತವನ್ನು ಪರಿಶೀಲಿಸಿದ್ದಾರೆ.ಸಾಮಾನ್ಯ ಜಲಜನಕದಲ್ಲಿ ಒಂದು ಪ್ರೋಟಾನ್ ಇರುತ್ತದೆ. ಆದರೆ ಡ್ಯೂಟೇರಿಯಂನಲ್ಲಿ ಒಂದು ಪ್ರೋಟಾನ್ ಮತ್ತು ಒಂದು ನ್ಯೂಟ್ರಾನ್ ಇರುತ್ತವೆ. ಈ ಎರಡರ ಅನುಪಾತದಲ್ಲಿನ ಬದಲಾವಣೆಗಳನ್ನು ಅಧ್ಯಯನ ಮಾಡುವುದರಿಂದ ಭೂಮಿಯ ಆಳದ ಪದರಗಳಲ್ಲಿ ಜಲಜನಕ ಹೇಗೆ ವರ್ತಿಸಿದೆ ಎಂಬುದರ ಕುರಿತು ಮಾಹಿತಿ ಪಡೆಯಬಹುದು.
ಸಂಶೋಧನೆಯ ಪ್ರಕಾರ, ಭೂಮಿಯ ಆರಂಭಿಕ ಕಾಲದಲ್ಲಿ ಕರಗಿದ ಶಿಲೆಗಳು ತಣ್ಣಗಾಗಿ ಖನಿಜಗಳಾಗಿ ರೂಪುಗೊಳ್ಳುವ ಸಂದರ್ಭದಲ್ಲಿ ಜಲಜನಕದ ಸಮಸ್ಥಾನಿಗಳ ನಡುವೆ ದೊಡ್ಡ ಪ್ರಮಾಣದ ವ್ಯತ್ಯಾಸ ಉಂಟಾಗಿರಲಿಲ್ಲ. ಹೀಗಾಗಿ ಇಂದು ಆಳದ ಮ್ಯಾಂಟಲ್‌ನಲ್ಲಿ ಕಂಡುಬರುವ ರಾಸಾಯನಿಕ ವ್ಯತ್ಯಾಸಗಳಿಗೆ ನಂತರದ ಅವಧಿಯಲ್ಲಿ ಭೂಮಿಯ ಕೇಂದ್ರಭಾಗ ಮತ್ತು ಮ್ಯಾಂಟಲ್ ನಡುವಿನ ರಾಸಾಯನಿಕ ವಿನಿಮಯವೂ ಕಾರಣವಾಗಿರಬಹುದೇ ಎಂಬ ಪ್ರಶ್ನೆ ಮೂಡಿದೆ. ಆದರೆ ಭೂಮಿಯ ಕೇಂದ್ರಭಾಗದಿಂದ ಜಲಜನಕ ನಿರಂತರವಾಗಿ ಹೊರಬರುತ್ತಿದೆ ಎಂಬುದನ್ನು ಈ ಅಧ್ಯಯನ ನೇರವಾಗಿ ಸಾಬೀತುಪಡಿಸಿಲ್ಲ. ಇದು ಭೂಮಿಯ ಒಳಪದರಗಳ ನಡುವಿನ ರಾಸಾಯನಿಕ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಹೊಸ ಸುಳಿವು ನೀಡಿದೆ.
ಸುಮಾರು 450 ಕೋಟಿ ವರ್ಷಗಳ ಹಿಂದೆ ರೂಪುಗೊಂಡ ಭೂಮಿಯಲ್ಲಿನ ಕೆಲವು ಮೂಲಭೂತ ಅಂಶಗಳು ಇಂದಿಗೂ ಅದರ ಆಳದಲ್ಲಿ ಅಡಗಿರಬಹುದು ಎಂಬುದೇ ಅಚ್ಚರಿಯ ಸಂಗತಿ. ಭೂಮಿಯ ಮೇಲ್ಮೈಯಲ್ಲಿ ನಾವು ಕಾಣುವ ಬದಲಾವಣೆಗಳಿಗಿಂತ ಅದರ ಒಳಭಾಗದಲ್ಲಿ ನಡೆಯುವ ಪ್ರಕ್ರಿಯೆಗಳು ಎಷ್ಟು ಸಂಕೀರ್ಣವಾಗಿವೆ ಎಂಬುದಕ್ಕೆ ಈ ಸಂಶೋಧನೆ ಸಾಕ್ಷಿಯಾಗಿದೆ, (ಏಜೆನ್ಸೀಸ್).