ಸಾಂದರ್ಭಿಕ ಚಿತ್ರ 
ವಿದೇಶ

ನೇಪಾಳದಲ್ಲಿ ಭೀಕರ ಪ್ರವಾಹದ ಬಳಿಕ ಭೂಕಂಪನ: ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲು | Earthquake

ಕಠ್ಮಂಡು: ನೇಪಾಳದ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ ನೂರಾರು ಜನ ಮೃತಪಟ್ಟು, ಸಾವಿರಾರು ಜನ ಕಣ್ಮರೆಯಾದ ಕೆಲವು ದಿನಗಳ ಬಳಿಕ ನಿನ್ನೆ(ಸೆ. 08) ರಾತ್ರಿ ದೇಶದ ವಾಯುವ್ಯ ಮುಸ್ತಾಂಗ್ ಜಿಲ್ಲೆಯಲ್ಲಿ 5.3 ತೀವ್ರತೆಯ ಭೂಕಂಪ (Earthquake) ಸಂಭವಿಸಿದ್ದು, ನೆರೆಯ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ರಾತ್ರಿ 9.53 ಕ್ಕೆ ಭೂಕಂಪ ಸಂಭವಿಸಿದ್ದು, ಕಠ್ಮಂಡುವಿನಿಂದ ವಾಯುವ್ಯಕ್ಕೆ 375 ಕಿ.ಮೀ ದೂರದಲ್ಲಿರುವ ಮುಸ್ತಾಂಗ್‌ನ ಲೋಮಂಥಂಗ್‌ನಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಗಳು ಬಂದಿಲ್ಲ.


ಮನಾಂಗ್, ಡೋಲ್ಪಾ ಮತ್ತು ಮಯಾಗ್ಡಿ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದ ನೇಪಾಳ ಚೇತರಿಸಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಭೂಕಂಪನ ಸಂಭವಿಸಿದ್ದು ಕಳವಳವನ್ನು ಹೆಚ್ಚಿಸಿದೆ. ಮತ್ತು ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದಾರೆ.

ಇನ್ನೂ ಪ್ರತ್ಯೇಕ ಘಟನೆಯಲ್ಲಿ ಗಂಡಕಿ ಪ್ರಾಂತ್ಯದ ಪರ್ಬತ್ ಜಿಲ್ಲೆಯ ಕಿಮ್ರುಂಗ್ ನದಿಯು ಭೂಕುಸಿತದಿಂದಾಗಿ ಮುಚ್ಚಿಹೋಗಿದ್ದು, ಕಾಲಿಗಂಡಕಿ ಸಂಗಮದವರೆಗಿನ ಎಲ್ಲಾ ಕೆಳಮಟ್ಟದ ಸಮುದಾಯಗಳು ಹೆಚ್ಚಿನ ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಲಾಗಿದೆ. ಮಂಗಳವಾರ ರಾತ್ರಿ 8 ಗಂಟೆಗೆ ನೋಟಿಸ್ ಜಾರಿ ಮಾಡಿದ ಪ್ರವಾಹ ಮುನ್ಸೂಚನಾ ವಿಭಾಗವು, ಕಿಮ್ರುಂಗ್ ನದಿಯ ಅಡಚಣೆಯಿಂದಾಗಿ ಪ್ರವಾಹದ ಅಪಾಯವಿದೆ ಎಂದು ತಿಳಿಸಿದೆ (ಏಜೆನ್ಸೀಸ್).