Japan Earthquake (ಸಾಂದರ್ಭಿಕ ಚಿತ್ರ) 
ವಿದೇಶ

ಜಪಾನ್‌ನಲ್ಲಿ ಭೀಕರ ಭೂಕಂಪ: ಈಶಾನ್ಯ ಕರಾವಳಿಯಲ್ಲಿ 7.4 ತೀವ್ರತೆಯ ಕಂಪನ, ಸುನಾಮಿ ಎಚ್ಚರಿಕೆ! Japan Earthquake

ಟೋಕಿಯೋ: ಸೋಮವಾರ ಸುಮಾರು 4:53ಕ್ಕೆ ಜಪಾನ್​ನ ಟೊಹೊಕು ಪ್ರದೇಶದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಜಪಾನ್ ಹವಾಮಾನ (Japan Earthquake) ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಈಶಾನ್ಯ ಜಪಾನ್‌ನ ಹಲವಾರು ಭಾಗಗಳಲ್ಲಿ ಕಂಪನವು ಅನುಭವಿಸುವಷ್ಟು ಪ್ರಬಲವಾಗಿತ್ತು. ಆದಾಗ್ಯೂ, ಹವಾಮಾನ ಸಂಸ್ಥೆಯ ಪ್ರಕಾರ ಭೂಕಂಪನದ 30 ನಿಮಿಷಗಳಲ್ಲಿ ಕರಾವಳಿ ಪ್ರದೇಶಗಳನ್ನು ಸುನಾಮಿ ಅಪ್ಪಳಿಸಬಹುದು. ಇದರಿಂದ ಅಲ್ಲಿನ ಪ್ರದೇಶಗಳು ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.

ಸುನಾಮಿ ಎಚ್ಚರಿಕೆ

ಭೂಕಂಪದ ನಂತರ, ಅಧಿಕಾರಿಗಳು ಈಶಾನ್ಯ ಜಪಾನ್‌ನ ಕೆಲವು ಭಾಗದಲ್ಲಿ ವಾಸಿಸುವ ಜನರಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಭೂಕಂಪದ ನಂತರ ತುರ್ತು ಎಚ್ಚರಿಕೆಗಳನ್ನು ಕಳುಹಿಸಲಾಗಿದೆ ಎಂದು ಜಪಾನ್​ನ ಸಾರ್ವಜನಿಕ ಪ್ರಸಾರಕ ವರದಿ ಮಾಡಿದೆ.

ಜಪಾನ್‌ನಲ್ಲಿ ಭೂಕಂಪ

ಜಪಾನ್ ವಿಶ್ವದಲ್ಲೇ ಅತಿ ಹೆಚ್ಚು ಭೂಕಂಪ ಪೀಡಿತ ದೇಶಗಳಲ್ಲಿ ಒಂದಾಗಿದೆ. ಇದು ನಾಲ್ಕು ಪ್ರಮುಖ ಟೆಕ್ಟೋನಿಕ್ ಪ್ಲೇಟ್‌ಗಳ ಮೇಲ್ಭಾಗದಲ್ಲಿರುವುದರಿಂದ ಇವು ನಿರಂತರವಾಗಿ ಚಲಿಸುತ್ತಿರುತ್ತವೆ. ಇದು ದೇಶವನ್ನು ಪೆಸಿಫಿಕ್ "ರಿಂಗ್ ಆಫ್ ಫೈರ್" ನ ಪ್ರಮುಖ ಭಾಗವಾಗಿಸುತ್ತದೆ. ಇದರಿಂದ ಆಗ್ಗಾಗ ಭೂಕಂಪಗಳು ಮತ್ತು ಜ್ವಾಲಾಮುಖಿಗಳು ಸಂಭವಿಸುತ್ತವೆ.
ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ 1,500 ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಇದರರ್ಥ ದೇಶದ ಯಾವುದಾದರೊಂದು ಭಾಗದಲ್ಲಿ ಪ್ರತಿದಿನವೂ ಭೂಮಿ ನಡುಗುತ್ತಲೇ ಇರುತ್ತದೆ. ಇಡೀ ವಿಶ್ವದಲ್ಲಿ ಸಂಭವಿಸುವ ಒಟ್ಟು ಭೂಕಂಪಗಳಲ್ಲಿ ಸುಮಾರು 18% ನಷ್ಟು ಪಾಲು ಜಪಾನ್ ಒಂದರದ್ದೇ ಆಗಿದೆ ಎನ್ನುವುದು ಗಮನಾರ್ಹ. ಇದು ಜಪಾನ್ ಅನ್ನು ವಿಶ್ವದ ಅತ್ಯಂತ ಸಕ್ರಿಯ ಭೂಕಂಪನ ಪ್ರದೇಶವನ್ನಾಗಿ ಮಾಡಿದೆ.

2011 ರ ಭೂಕಂಪ

ಜಪಾನ್ ಇತಿಹಾಸದಲ್ಲಿ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ 2011 ಕೂಡಾ ಒಂದು. 9.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುಮಾರು 18,500ಕ್ಕೂ ಹೆಚ್ಚು ಜನರು ಮೃತಪಟ್ಟರು. ಈ ಹಾನಿಯು ಫುಕುಶಿಮಾ ವಿದ್ಯುತ್ ಸ್ಥಾವರದಲ್ಲಿ ತೀವ್ರ ಪರಮಾಣು ಅಪಘಾತಕ್ಕೂ ಕಾರಣವಾಯಿತು (ಏಜೆನ್ಸೀಸ್).