ದುಬೈ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಮಹಾಯುದ್ಧವು 15ನೇ ದಿನಕ್ಕೆ ಕಾಲಿಟ್ಟಿದ್ದು, ಯುದ್ಧದ ತೀವ್ರತೆ ಈಗ ಗಲ್ಫ್ ರಾಷ್ಟ್ರಗಳತ್ತ ಹರಡುತ್ತಿದೆ. ವಿಶ್ವದ ಪ್ರಮುಖ ಹಣಕಾಸು ಕೇಂದ್ರವಾದ ದುಬೈ ಮತ್ತು ಇರಾಕ್‌ನ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಭೀಕರ ದಾಳಿಗಳು(Drone attacks) ನಡೆದಿವೆ ಎಂದು ಶನಿವಾರ ವರದಿಯಾಗಿದೆ.
ದುಬೈ ಅಂತರಾಷ್ಟ್ರೀಯ ಹಣಕಾಸು ಕೇಂದ್ರದ (DIFC) ಹೃದಯಭಾಗದಲ್ಲಿರುವ ಕಟ್ಟಡವೊಂದಕ್ಕೆ ಆಕಾಶದಲ್ಲಿ ಹೊಡೆದುರುಳಿಸಲಾದ ಕ್ಷಿಪಣಿಯ ಅವಶೇಷಗಳು ಬಂದು ಬಡಿದಿವೆ. ಕಳೆದ 24 ಗಂಟೆಗಳಲ್ಲಿ ದುಬೈ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಅಥವಾ ಬೆಂಕಿ ಅವಘಡ ಸಂಭವಿಸಿಲ್ಲ ಎಂದು ದುಬೈ ಮಾಧ್ಯಮ ಕಚೇರಿ ಖಚಿತಪಡಿಸಿದೆ.
"ನಾನು ಹಾಸಿಗೆಯಿಂದ ಹಾರಿಬಿದ್ದೆ, ನನ್ನ ಜೀವನದಲ್ಲಿ ಕೇಳಿದ ಅತ್ಯಂತ ಭೀಕರ ಶಬ್ದವಿದು. ಕಿಟಕಿಯಿಂದ ಹೊರಗೆ ನೋಡಿದಾಗ ಏನೋ ಮಹಾ ದುರಂತ ಸಂಭವಿಸಿದೆ ಎಂದೇ ಭಾವಿಸಿದ್ದೆ, ಭೂಮಿ ನಡುಗಿದ ಅನುಭವವಾಯಿತು," ಎಂದು ಪ್ರತ್ಯಕ್ಷದರ್ಶಿಯೊಬ್ಬರು ಆತಂಕ ಹಂಚಿಕೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಇಡೀ ನಗರದ ಆಕಾಶದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು.
ಬಾಗ್ದಾದ್‌ನ ಅಮೆರಿಕ ಕಚೇರಿ ಮೇಲೆ ಡ್ರೋನ್ ದಾಳಿ
ಇತ್ತ ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಂಕೀರ್ಣವನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ. ದಾಳಿಯ ನಂತರ ರಾಯಭಾರ ಕಚೇರಿಯ ಆವರಣದಿಂದ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಅಸೋಸಿಯೇಟೆಡ್ ಪ್ರೆಸ್ (AP) ವರದಿಯ ಪ್ರಕಾರ, ರಾಯಭಾರ ಕಚೇರಿಯ ಒಳಗಿರುವ ಹೆಲಿಪ್ಯಾಡ್ ಮೇಲೆ ಕ್ಷಿಪಣಿಯೊಂದು ನೇರವಾಗಿ ಬಂದು ಅಪ್ಪಳಿಸಿದೆ. ಈ ದಾಳಿಯು ಅಮೆರಿಕ ಮತ್ತು ಇರಾನ್ ಬೆಂಬಲಿತ ಗುಂಪುಗಳ ನಡುವಿನ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
ಇರಾನ್ ಬೆಂಬಲಿತ ಪಡೆಯ ಕಮಾಂಡರ್ ಹತ್ಯೆ
ಈ ದಾಳಿಗಳ ಬೆನ್ನಲ್ಲೇ ಅಮೆರಿಕದ ಪಡೆಗಳು ಇರಾನ್ ಬೆಂಬಲಿತ 'ಕಟೈಬ್ ಹಿಜ್ಬುಲ್ಲಾ' ಗುಂಪಿನ ಮೇಲೆ ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿವೆ. ಈ ದಾಳಿಯಲ್ಲಿ ಗುಂಪಿನ ಪ್ರಮುಖ ನಾಯಕ ಸೇರಿದಂತೆ ಇಬ್ಬರು ಹತ್ಯೆಗೀಡಾಗಿದ್ದಾರೆ. ಶನಿವಾರ ಮುಂಜಾನೆ 2:15ರ ಸುಮಾರಿಗೆ ನಡೆದ ಕ್ಷಿಪಣಿ ದಾಳಿಯು ಕಟೈಬ್ ಹಿಜ್ಬುಲ್ಲಾ ಬಳಸುತ್ತಿದ್ದ ಮನೆಯೊಂದನ್ನು ಗುರಿಯಾಗಿಸಿಕೊಂಡಿತ್ತು ಎಂದು ಭದ್ರತಾ ಮೂಲಗಳು ತಿಳಿಸಿವೆ,(ಏಜೆನ್ಸೀಸ್).