Train Collision Near London  
ವಿದೇಶ

ಲಂಡನ್ ಬಳಿ ಭೀಕರ ರೈಲು ಅಪಘಾತ: ಚಾಲಕ ಸಾವು, 80ಕ್ಕೂ ಹೆಚ್ಚು ಜನರಿಗೆ ಗಾಯ!..Train Collision Near London

ಪ್ರಮುಖ ಮುಖ್ಯಾಂಶಗಳು

  • ಲಂಡನ್‌ನ ಬೆಡ್‌ಫೋರ್ಡ್ ಬಳಿ ಎರಡುರೈಲುಗಳ ನಡುವೆ ಮುಖಾಮುಖಿ ಡಿಕ್ಕಿ.
  • ಅಪಘಾತದಲ್ಲಿ ಓರ್ವ ರೈಲು ಚಾಲಕ ಸಾವು, 80 ಜನರಿಗೆ ಗಂಭೀರ ಗಾಯ.
  • ಸೇಂಟ್ ಪ್ಯಾನ್‌ಕ್ರಾಸ್ ನಿಲ್ದಾಣದ ಎಲ್ಲಾ ರೈಲು ಸಂಚಾರಗಳು ಸದ್ಯಕ್ಕೆ ರದ್ದು.
ಲಂಡನ್: ಎರಡು ಪ್ಯಾಸೆಂಜರ್​​ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಜೂ.19ರ ಸಂಜೆ ಯುಕೆಯ ಉತ್ತರ ಲಂಡನ್‌ನ ಉತ್ತರ ಭಾಗದ ಬೆಡ್‌ಫೋರ್ಡ್‌ ಪ್ರದೇಶದ ಬಳಿ ಭೀಕರ ಅಪಘಾತವೊಂದು ನಡೆದಿದೆ. ಈ ದುರಂತದಲ್ಲಿ ಚಾಲಕ ಸಾವನ್ನಪ್ಪಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ 80ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದಾರೆ.
ರೈಲ್ವೆ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳ ಮಾಹಿತಿಯ ಪ್ರಕಾರ, ಎರಡೂ ರೈಲುಗಳು ದಕ್ಷಿಣದ ಲಂಡನ್ ಸೇಂಟ್ ಪ್ಯಾನ್‌ಕ್ರಾಸ್ ನಿಲ್ದಾಣದ ಕಡೆಗೆ ಚಲಿಸುತ್ತಿದ್ದವು. ಸಂಜೆ ಸುಮಾರು 5:15 ರ ಸುಮಾರಿಗೆ ಬೆಡ್‌ಫೋರ್ಡ್ ಪಟ್ಟಣದ ಹೊರವಲಯದಲ್ಲಿ ಮುಖಾಮುಖಿಯಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ರಾಷ್ಟ್ರೀಯ ರೈಲು, ಕಡಲ ಮತ್ತು ಸಾರಿಗೆ ಕಾರ್ಮಿಕರ ಒಕ್ಕೂಟದ (RMT) ಪ್ರಧಾನ ಕಾರ್ಯದರ್ಶಿ ಎಡ್ಡಿ ಡೆಂಪ್ಸೆ ಮೃತಪಟ್ಟ ರೈಲು ಚಾಲಕ ಎಂದು ಖಚಿತಪಡಿಸಲಾಗಿದೆ.
ಅಪಘಾತದ ಭೀಕರತೆ ಬಗ್ಗೆ ಮಾಹಿತಿ ಸಿಗುತ್ತಲೇ ಸ್ಥಳಕ್ಕೆ ಏರ್ ಅಂಬುಲೆನ್ಸ್ ಹಾಗೂ ಈಸ್ಟ್ ಆಫ್ ಇಂಗ್ಲೆಂಡ್ ಅಂಬುಲೆನ್ಸ್ ಸೇವೆಯ ಅಪಾಯಕಾರಿ ಘಟನಾ ನಿರ್ವಹಣಾ ತಂಡ ಸೇರಿದಂತೆ ಭಾರಿ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ರಭಸಕ್ಕೆ ಪ್ರಯಾಣಿಕರು ಮುಂಭಾಗದ ಸೀಟುಗಳಿಗೆ ಅಪ್ಪಳಿಸಿದ್ದು, ಕೆಲವು ಪ್ರಯಾಣಿಕರ ದೇಹದ ಮೂಳೆ ಮುರಿದು ರಕ್ತಸಿಕ್ತ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ

ಪೊಲೀಸರು ಏನಂದ್ರು?

ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಚಾಲಕ ಮೃತಪಟ್ಟಿದ್ದಾರೆ. ಬೆಡ್‌ಫೋರ್ಡ್‌ಶೈರ್ ಪೊಲೀಸ್, ಸ್ಥಳೀಯ ಅಗ್ನಿಶಾಮಕ ಮತ್ತು ರಕ್ಷಣಾ ದಳ ಹಾಗೂ ಅಂಬುಲೆನ್ಸ್ ಸಿಬ್ಬಂದಿಯೊಂದಿಗೆ ನಮ್ಮ ಅಧಿಕಾರಿಗಳು ಜಂಟಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಷ್ಟು ಜನರು ಗಾಯಗೊಂಡಿದ್ದಾರೆ?

ಈಸ್ಟ್ ಆಫ್ ಇಂಗ್ಲೆಂಡ್ ಅಂಬುಲೆನ್ಸ್ ಸೇವೆಯು ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಒಟ್ಟು 11 ಜನರಿಗೆ ಅತ್ಯಂತ ತೀವ್ರವಾದ ಗಾಯಗಳಾಗಿದ್ದು, 22 ಜನರು ಸ್ಥಿತಿ ಗಂಭೀರವಾಗಿದೆ.56 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪ್ರತ್ಯಕ್ಷದರ್ಶಿಗಳು ಏನಂದ್ರು?

ಇದ್ದಕ್ಕಿದ್ದಂತೆ ದೊಡ್ಡ ಶಬ್ಧ ಕೇಳಿಸಿತು. ಏನು ಎಂದು ನೋಡುವಾಗ ಅಪಘಾತ ಸಂಭವಿಸಿತ್ತು. ರೈಲಿನ ಸುತ್ತ ಸುತ್ತಲೂ ಹೊಗೆ ಆವರಿಸಿತು. ಜನರು ಜೋರಾಗಿ ಅಳುತ್ತಿದ್ದರು, ಕಿರುಚುತ್ತಿದ್ದರು. ಎಲ್ಲರೂ ತೀವ್ರ ಗಾಯಗೊಂಡು ಆತಂಕದಲ್ಲಿದ್ದರು. ನಾನು ಎದ್ದು ನೋಡಿದಾಗ ಹಲವರು ಮಾತನಾಡಲಾಗದ ಸ್ಥಿತಿಯಲ್ಲಿದ್ದರು, ಕೆಲವರ ಕಾಲುಗಳು ಮುರಿದಿದ್ದವು. ನಾನು ತೀರ ಸಣ್ಣಗಿದ್ದ ಕಾರಣ ಹೇಗೋ ಕಷ್ಟಪಟ್ಟು ಹೊರ ಬಂದೆ ಎಂದು ಭೀಕರತೆ ಬಿಚ್ಚಿಟ್ಟರು.
ರೈಲು ಅಪಘಾತದ ವಿಡಿಯೋಗಳು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭೀಕರತೆ ಎಷ್ಟರ ಮಟ್ಟಿಗೆ ನಡೆದಿತ್ತು ಎನ್ನುವುದು ವಿಡಿಯೋಗಳು ಮತ್ತು ಫೋಟೋ ಮೂಲಕ ನೋಡಬಹುದಾಗಿದೆ. ತುರ್ತು ವಾಹನಗಳ ಸುತ್ತ ನೂರಾರು ಜನರು ಬ್ಯಾಂಡೇಜ್‌ಗಳೊಂದಿಗೆ ಹಾಗೂ ಗಾಯಗೊಳ್ಳದ ಹಲವರು ಆತಂಕದಿಂದ ನಿಂತಿರುವುದು ಕಂಡುಬಂದಿದೆ, (ಏಜೆನ್ಸೀಸ್).