ಗ್ರೀನ್‌ಲ್ಯಾಂಡ್ ಖರೀದಿ ಕನಸು: ಟ್ರಂಪ್ ನಡೆಗೆ ರಷ್ಯಾ-ಚೀನಾ ಜಂಟಿ ಆಕ್ರೋಶ; ಸ್ವಾರ್ಥದ ಪರಮಾವಧಿ ಎಂದು ಕಿಡಿ
ಮಾಸ್ಕೋ: ವಿಶ್ವದ ಅತಿದೊಡ್ಡ ದ್ವೀಪವಾದ ಗ್ರೀನ್‌ಲ್ಯಾಂಡ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ನೀಡುತ್ತಿರುವ ಹೇಳಿಕೆಗಳು ಈಗ ಜಾಗತಿಕ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿವೆ. ಸೋಮವಾರ (ಜ.19) ಈ ಕುರಿತು ಜಂಟಿಯಾಗಿ ವಾಗ್ದಾಳಿ ನಡೆಸಿರುವ ರಷ್ಯಾ ಮತ್ತು ಚೀನಾ,(Russia-China) ಅಮೆರಿಕದ ಈ ನಡೆಯು ವಸಾಹತುಶಾಹಿ ಮಾನಸಿಕತೆ ಎಂದು ಟೀಕಿಸಿವೆ.
ಅಮೆರಿಕದ ಈ ಹಠಮಾರಿತನವು ಜಾಗತಿಕ ಶಾಂತಿಗೆ ಧಕ್ಕೆ ತರುತ್ತದೆ ಎಂದು ರಷ್ಯಾ ಎಚ್ಚರಿಸಿದ್ದರೆ, ತನ್ನ ಸ್ವಾರ್ಥಕ್ಕಾಗಿ ಅಮೆರಿಕ 'ಚೀನಾ ಭೀತಿಯನ್ನು ಒಂದು ಆಯುಧವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಬೀಜಿಂಗ್ ಕಿಡಿಕಾರಿದೆ.
ರಷ್ಯಾ ಎಚ್ಚರಿಕೆ: ಇತಿಹಾಸದಲ್ಲಿ ಕೆಟ್ಟದಾಗಿ ಗುರುತಿಸಲ್ಪಡುವಿರಿ
ಈ ಬಗ್ಗೆ ಕಿಡಿಕಾರಿರುವ ರಷ್ಯಾದ ವಿದೇಶಾಂಗ ಸಚಿವಾಲಯವು, ಟ್ರಂಪ್ ಅವರ ಈ ಮಹತ್ವಾಕಾಂಕ್ಷೆಯನ್ನು ಕಟುವಾಗಿ ಟೀಕಿಸಿದೆ. ಸಾರ್ವಭೌಮ ರಾಷ್ಟ್ರವೊಂದರ ಭಾಗವಾಗಿರುವ ಭೂಪ್ರದೇಶವನ್ನು ಖರೀದಿಸುವ ಅಥವಾ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಾತುಗಳು 21ನೇ ಶತಮಾನಕ್ಕೆ ಒಪ್ಪುವಂತದ್ದಲ್ಲ ಎಂದು ಮಾಸ್ಕೋ ಹೇಳಿದೆ.
ಒಂದು ವೇಳೆ ಅಮೆರಿಕ ಈ ಸಾಹಸಕ್ಕೆ ಕೈಹಾಕಿದರೆ, ಅಧ್ಯಕ್ಷ ಟ್ರಂಪ್ ಖಂಡಿತವಾಗಿಯೂ ಇತಿಹಾಸದಲ್ಲಿ ದಾಖಲಾಗುತ್ತಾರೆ. ಆದರೆ ಅದು ಉತ್ತಮ ಆಡಳಿತಗಾರನಾಗಿ ಅಲ್ಲ, ಬದಲಿಗೆ ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿದ ನಾಯಕನಾಗಿ ಎಂದು ರಷ್ಯಾ ವ್ಯಂಗ್ಯವಾಡಿದೆ.
ಚೀನಾ ಕಿಡಿ: ನಮ್ಮ ಹೆಸರಲ್ಲಿ ಅಮೆರಿಕದ ಸ್ವಾರ್ಥ
ಇತ್ತ ಬೀಜಿಂಗ್‌ನಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, ಗ್ರೀನ್‌ಲ್ಯಾಂಡ್‌ನಲ್ಲಿ ಚೀನಾದ ಹೂಡಿಕೆ ಹೆಚ್ಚುತ್ತಿದೆ ಎಂಬ ಕಾರಣ ನೀಡಿ ಅಮೆರಿಕ ಅಲ್ಲಿಗೆ ಲಗ್ಗೆ ಇಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಅಮೆರಿಕ ತನ್ನ ಸ್ವಾರ್ಥಕ್ಕಾಗಿ ಚೀನಾ ಭೀತಿ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸುತ್ತಿದೆ. ಗ್ರೀನ್‌ಲ್ಯಾಂಡ್‌ನ ಸಂಪನ್ಮೂಲಗಳನ್ನು ಲೂಟಿ ಮಾಡಲು ಚೀನಾವನ್ನು ನೆಪವಾಗಿ ಬಳಸಿಕೊಳ್ಳುತ್ತಿದೆ ಎಂದು ಚೀನಾ ಹೇಳಿದೆ. ಡೆನ್ಮಾರ್ಕ್‌ನ ಸಾರ್ವಭೌಮತ್ವಕ್ಕೆ ಅಮೆರಿಕ ಗೌರವ ನೀಡುತ್ತಿಲ್ಲ ಎಂಬುದು ಚೀನಾದ ಪ್ರಮುಖ ಆರೋಪವಾಗಿದೆ.
ಗ್ರೀನ್‌ಲ್ಯಾಂಡ್ ಏಕೆ ಇಷ್ಟೊಂದು ಮುಖ್ಯ?
ಗ್ರೀನ್‌ಲ್ಯಾಂಡ್ ಮಂಜುಗಡ್ಡೆಯಿಂದ ಕೂಡಿದ್ದರೂ, ಅಲ್ಲಿ ಅತಿ ಅಪರೂಪದ ಖನಿಜಗಳು ಮತ್ತು ತೈಲ ನಿಕ್ಷೇಪಗಳಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ, ಉತ್ತರ ಧ್ರುವದ ಮೇಲೆ ಕಣ್ಣಿಡಲು ಇದು ಆಯಕಟ್ಟಿನ ಪ್ರದೇಶವಾಗಿದೆ. ಈ ಕಾರಣಕ್ಕಾಗಿಯೇ ಅಮೆರಿಕ, ರಷ್ಯಾ ಮತ್ತು ಚೀನಾ ಈ ಪ್ರದೇಶದ ಮೇಲೆ ಪ್ರಭುತ್ವ ಸಾಧಿಸಲು ಪೈಪೋಟಿ ನಡೆಸುತ್ತಿವೆ.
ಪ್ರಸ್ತುತ ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್ ದೇಶದ ಅಧೀನದಲ್ಲಿದ್ದು, ಸ್ವಾಯತ್ತ ಆಡಳಿತವನ್ನು ಹೊಂದಿದೆ. ಡೆನ್ಮಾರ್ಕ್ ಈಗಾಗಲೇ ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಟ್ರಂಪ್ ಅವರ ಹೇಳಿಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ,(ಏಜೆನ್ಸೀಸ್).