ನಮ್ಮ ಶತ್ರುಗಳಿಗೆ ನಿಮ್ಮ ನೆಲ ನೀಡಬೇಡಿ! ಇರಾನ್ ಅಧ್ಯಕ್ಷರ ಎಚ್ಚರಿಕೆಗೆ ನಡುಗಿದ ಗಲ್ಫ್ ರಾಷ್ಟ್ರಗಳು
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ದಿನದಿಂದ ದಿನಕ್ಕೆ ಭೀಕರವಾಗುತ್ತಿರುವ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್(Masoud Pezeshkian) ತಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ನಿಮ್ಮ ದೇಶದ ಅಭಿವೃದ್ಧಿ ಮತ್ತು ಭದ್ರತೆ ನಿಮಗೆ ಮುಖ್ಯವಾಗಿದ್ದರೆ, ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧವನ್ನು ನಿಮ್ಮ ನೆಲದಿಂದ ನಿಯಂತ್ರಿಸಲು ಅವಕಾಶ ನೀಡಬೇಡಿ ಎಂದು ಗುಡುಗಿದ್ದಾರೆ. ಇದು ಕೇವಲ ವಿನಂತಿಯಲ್ಲ, ಬದಲಿಗೆ ಮುಂಬರುವ ಅಪಾಯದ ಮುನ್ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರತೀಕಾರದ ಜ್ವಾಲೆ: ಇರಾನ್‌ನಿಂದ ಎಚ್ಚರಿಕೆ
ಸೌದಿ ಅರೇಬಿಯಾ, ಯುಎಇ, ಓಮನ್, ಕುವೈತ್ ಮತ್ತು ಕತಾರ್‌ನಂತಹ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಬಳಸಿ ಇರಾನ್ ಮೇಲೆ ದಾಳಿ ನಡೆಸಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಆಯಕಟ್ಟಿನ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.
ಈ ಬಗ್ಗೆ ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಪೆಜೆಶ್ಕಿಯಾನ್, ಇರಾನ್ ಎಂದಿಗೂ ಮೊದಲು ದಾಳಿ ಮಾಡುವುದಿಲ್ಲ. ಆದರೆ ನಮ್ಮ ದೇಶದ ಮೂಲಸೌಕರ್ಯ ಅಥವಾ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡರೆ ನಾವು ಸುಮ್ಮನಿರುವುದಿಲ್ಲ, ಅತ್ಯಂತ ಕಠಿಣವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಸಂಧಾನ ಹಾದಿ: ಶಾಂತಿಗಾಗಿ ಕಸರತ್ತು
ಮಧ್ಯಪ್ರಾಚ್ಯದ ಈ ಬೆಂಕಿಯನ್ನು ಆರಿಸಲು ಪಾಕಿಸ್ತಾನ ಈಗ ಪ್ರಮುಖ ಸಂಧಾನಕಾರನಾಗಿ ಹೊರಹೊಮ್ಮಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಮಾತನಾಡಿರುವ ಪೆಜೆಶ್ಕಿಯಾನ್, ಅಮೆರಿಕದ ಜೊತೆ ಮಾತುಕತೆ ನಡೆಸಲು ಪರಸ್ಪರ ನಂಬಿಕೆ ಅತಿ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ಪರಿಸ್ಥಿತಿಯನ್ನು ತಿಳಿಗೊಳಿಸಲು ಪಾಕಿಸ್ತಾನವು ಭಾನುವಾರ ಮತ್ತು ಸೋಮವಾರ ಮಹತ್ವದ ಸಭೆಯನ್ನು ಆಯೋಜಿಸಿದೆ.
ಪ್ರಮುಖ ಭೇಟಿ: ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಟರ್ಕಿ ದೇಶಗಳ ವಿದೇಶಾಂಗ ಸಚಿವರು ಇಸ್ಲಾಮಾಬಾದ್‌ಗೆ ಆಗಮಿಸಲಿದ್ದಾರೆ.
ಮಧ್ಯಸ್ಥಿಕೆ: ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ನೆರೆರಾಷ್ಟ್ರಗಳ ಜೊತೆ ಚರ್ಚಿಸಿ, ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಿದ್ದಾರೆ.
ಗಲ್ಫ್ ರಾಷ್ಟ್ರಗಳ ಇಕ್ಕಟ್ಟು
ಇರಾನ್‌ನ ಈ ಎಚ್ಚರಿಕೆಯು ಸೌದಿ ಅರೇಬಿಯಾ ಮತ್ತು ಯುಎಇ ಅಂತಹ ರಾಷ್ಟ್ರಗಳನ್ನು ಸಂದಿಗ್ಧತೆಗೆ ತಳ್ಳಿದೆ. ಒಂದೆಡೆ ಅಮೆರಿಕದ ಜೊತೆಗಿನ ರಕ್ಷಣಾ ಒಪ್ಪಂದಗಳು, ಮತ್ತೊಂದೆಡೆ ಇರಾನ್‌ನ ಕ್ಷಿಪಣಿ ದಾಳಿಯ ಭೀತಿಯು ಈ ಎರಡರ ನಡುವೆ ಅರಬ್ ರಾಷ್ಟ್ರಗಳು ಸಿಲುಕಿಕೊಂಡಿವೆ. ಇರಾನ್‌ನ ಆರ್ಥಿಕ ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ನಡೆಸಿದರೆ, ಅರಬ್ ರಾಷ್ಟ್ರಗಳಲ್ಲಿರುವ ತೈಲ ಕೇಂದ್ರಗಳ ಮೇಲೂ ದಾಳಿ ಮಾಡುವುದಾಗಿ ಇರಾನ್ ಈಗಾಗಲೇ ಸೂಚನೆ ನೀಡಿದೆ,(ಏಜೆನ್ಸೀಸ್).