ನಮ್ಮ ಮಾತು ಕೇಳದಿದ್ದರೆ ಇರಾನ್‌ನ ಪ್ರತಿಯೊಂದು ವಿದ್ಯುತ್ ಸ್ಥಾವರ, ಸೇತುವೆ ಧ್ವಂಸ ಮಾಡುತ್ತೇವೆ! ಇರಾನ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಗೆ ಬಂದು ತಲುಪಿದೆ. ಇಸ್ಲಾಮಾಬಾದ್‌ನಲ್ಲಿ ಸೋಮವಾರ ಸಂಜೆ ನಡೆಯಲಿರುವ ಎರಡನೇ ಸುತ್ತಿನ ರಾಜತಾಂತ್ರಿಕ ಮಾತುಕತೆಗೂ ಮುನ್ನವೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಇರಾನ್ ವಿರುದ್ಧ ಕೆಂಡ ಕಾರಿದ್ದಾರೆ. ಇನ್ನು ಮುಂದೆ ಮೃದು ಧೋರಣೆ ಇಲ್ಲ ಎಂದು ಘೋಷಿಸಿರುವ ಟ್ರಂಪ್, ಇರಾನ್‌ನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಭಾರಿ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಹೈ-ವೋಲ್ಟೇಜ್ ಮಾತುಕತೆ
ಕಳೆದ ವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯು ಇರಾನ್ ಯುರೇನಿಯಂ ಪುಷ್ಟೀಕರಣವನ್ನು ಮಿತಿಗೊಳಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ವಿಫಲವಾಗಿತ್ತು. ಈಗ ಎರಡನೇ ಪ್ರಯತ್ನವಾಗಿ ಟ್ರಂಪ್ ಅವರ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಸೋಮವಾರ ರಾತ್ರಿ ಇಸ್ಲಾಮಾಬಾದ್‌ಗೆ ತಲುಪಲಿದ್ದಾರೆ. ಆದರೆ, ಈ ಬಾರಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾಗವಹಿಸುತ್ತಿಲ್ಲ ಎಂದು ಟ್ರಂಪ್ ಖಚಿತಪಡಿಸಿದ್ದಾರೆ.
ನ್ಯಾಯಯುತ ಒಪ್ಪಂದ ಒಪ್ಪದಿದ್ದರೆ ಸರ್ವನಾಶ": ಟ್ರಂಪ್ ಘರ್ಜನೆ
ಈ ಬಗ್ಗೆ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ ಎದುರು ಅತ್ಯಂತ ನ್ಯಾಯಯುತವಾದ ಒಪ್ಪಂದವನ್ನು ಇಟ್ಟಿರುವುದಾಗಿ ಹೇಳಿದ್ದಾರೆ. ಒಂದು ವೇಳೆ ಇರಾನ್ ಈ ಒಪ್ಪಂದವನ್ನು ಸ್ವೀಕರಿಸದಿದ್ದರೆ, ಅಮೆರಿಕವು ಇರಾನ್‌ನ ಪ್ರತಿಯೊಂದು ಪವರ್ ಪ್ಲಾಂಟ್ ಮತ್ತು ಪ್ರತಿಯೊಂದು ಸೇತುವೆಯನ್ನು ನೆಲಸಮ ಮಾಡಲಿದೆ. ಇರಾನ್‌ನ ಕೊಲೆಗಡುಕ ಯಂತ್ರಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ ಎಂದು ಎಚ್ಚರಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿ: ಕದನ ವಿರಾಮ ಉಲ್ಲಂಘನೆ!
ಶನಿವಾರ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಪಡೆಗಳು ಬ್ರಿಟನ್ ಮತ್ತು ಫ್ರಾನ್ಸ್‌ನ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ್ದನ್ನು ಟ್ರಂಪ್ ತೀವ್ರವಾಗಿ ಖಂಡಿಸಿದ್ದಾರೆ. ಇದು ನಮ್ಮ ಕದನ ವಿರಾಮ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗಿದೆ. ಇರಾನ್ ಈ ರೀತಿ ಮಾಡುವ ಮೂಲಕ ತನ್ನ ಸ್ವಂತ ಆರ್ಥಿಕತೆಯನ್ನೇ ಹಾಳು ಮಾಡಿಕೊಳ್ಳುತ್ತಿದೆ. ಜಲಮಾರ್ಗ ಬಂದ್ ಆಗಿರುವುದರಿಂದ ಇರಾನ್‌ಗೆ ಪ್ರತಿದಿನ 500 ಮಿಲಿಯನ್ ಡಾಲರ್ ನಷ್ಟವಾಗುತ್ತಿದೆ, ಆದರೆ ಅಮೆರಿಕಕ್ಕೆ ಇದರಿಂದ ನಷ್ಟವಿಲ್ಲ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ಅಮೆರಿಕದ ತೈಲ ಸಂಗ್ರಹಕ್ಕೆ ಲಾಭ..?
ಇರಾನ್‌ನ ಐಆರ್‌ಜಿಸಿ (IRGC) ವರ್ತನೆಯಿಂದಾಗಿ ಜಾಗತಿಕ ಹಡಗುಗಳು ಈಗ ಅಮೆರಿಕದ ಟೆಕ್ಸಾಸ್, ಲೂಯಿಸಿಯಾನ ಮತ್ತು ಅಲಾಸ್ಕಾ ಬಂದರುಗಳತ್ತ ಮುಖ ಮಾಡಿವೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಇಂಧನ ಮಾರುಕಟ್ಟೆ ಈಗ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಈ ಮೂಲಕ ಸೂಚಿಸಿದ್ದಾರೆ.
ಏಪ್ರಿಲ್ 22: ನಿರ್ಣಾಯಕ ಗಡುವು
ಪ್ರಸ್ತುತ ಇರುವ ಕದನ ವಿರಾಮದ ಅವಧಿ ಏಪ್ರಿಲ್ 22ಕ್ಕೆ ಮುಕ್ತಾಯವಾಗಲಿದೆ. ಇಸ್ಲಾಮಾಬಾದ್ ಮಾತುಕತೆ ವಿಫಲವಾದರೆ, ಅಮೆರಿಕವು ಇರಾನ್‌ನ ಪರಮಾಣು ಕೇಂದ್ರಗಳು ಮತ್ತು ಮಿಲಿಟರಿ ತಾಣಗಳ ಮೇಲೆ ನೇರ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಇರಾನ್ ಮೇಲೆ ಅತ್ಯಂತ ಕಠಿಣವಾದ ಹೊಸ ನಿರ್ಬಂಧಗಳನ್ನು ಹೇರಲು ವಾಷಿಂಗ್ಟನ್ ಸಿದ್ಧತೆ ನಡೆಸಿದೆ.
ಟ್ರಂಪ್ ಅವರ ಈ ನಡೆ ಇರಾನ್ ಅನ್ನು ಸಂಧಾನದ ಮೇಜಿಗೆ ತರುವ ತಂತ್ರವೇ ಅಥವಾ ನಿಜಕ್ಕೂ ಯುದ್ಧಕ್ಕೆ ನಾಂದಿಯೇ ಎಂಬ ಕುತೂಹಲ ಮೂಡಿದೆ. ನೋ ಮೋರ್ ಮಿಸ್ಟರ್ ನೈಸ್ ಗೈ ಎಂಬ ಅವರ ಹೇಳಿಕೆ ಪಶ್ಚಿಮ ಏಷ್ಯಾದಲ್ಲಿ ದೊಡ್ಡ ಮಟ್ಟದ ರಕ್ತಪಾತದ ಮುನ್ಸೂಚನೆ ನೀಡುತ್ತಿದೆ. ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಇಂದಿನ ಮಾತುಕತೆಯ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ,(ಏಜೆನ್ಸೀಸ್).