ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ದ್ವೀಪ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡ ಯುಎಸ್ ಅಧ್ಯಕ್ಷ
- ಕ್ಯೂಬಾಗೆ ತೈಲ ಮಾರಾಟ ಮಾಡದಂತೆ ಟ್ರಂಪ್ ವಾರ್ನಿಂಗ್
- ಮಾರಾಟ ಮಾಡುವ ದೇಶಗಳಿಗೆ ಸುಂಕಾಸ್ತ್ರದ ಎಚ್ಚರಿಕೆ
ನ್ಯೂಯಾರ್ಕ್: ಸುಂಕ ಸಮರ ಸಾಧಿಸುವ ಏಕೈಕ ರಾಷ್ಟ್ರ ಎಂದರೆ ಅದು ಅಮೆರಿಕಾ. ಅದರಲ್ಲೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರು ಇನ್ನೊಂದು ರೀತಿಯಲ್ಲಿ ನಮಗೆಲ್ಲ ಬಹುಬೇಗನೆ ನೆನಪಾಗೋದು ಈ ಸುಂಕ ವಿಧಿಸುವುದರಿಂದ. ಇದಕ್ಕೆ ಹಲವರ ಮತ ಖಚಿತ ಎಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಟ್ರಂಪ್ ಅವರ ಸುಂಕದಾಟ ಜಾಗತಿಕವಾಗಿ ಸದ್ದು ಮಾಡಿದೆ ಹಾಗೂ ಮಾಡುತ್ತಲೇ ಇದೆ.
ಗ್ರೀನ್‌ಲ್ಯಾಂಡ್, ಮೆಕ್ಸಿಕೊ, ಕ್ಯೂಬಾ...
ಕಳೆದ ವರ್ಷ, ವೆನೆಜುವೆಲಾ ಅಧ್ಯಕ್ಷನನ್ನು ಅವರ ನಾಡಿಗೆ ಹೋಗಿ, ತಮ್ಮ ಸೇನೆಯ ಸಹಾಯದಿಂದ ಅಮೆರಿಕಕ್ಕೆ ಹೊತ್ತುಕೊಂಡು ಬಂದ ಟ್ರಂಪ್, ಇಡೀ ಜಗತ್ತಿಗೆ ತನ್ನ ಸೇನಾ ಬಲವನ್ನು ಪ್ರದರ್ಶಿಸಿದ್ದು ಗೊತ್ತೇ ಇದೆ. ಈ ಬಗ್ಗೆ ಸ್ವತಃ ಟ್ರಂಪ್ ಅವರೇ ಬಡಾಯಿ ಕೊಚ್ಚಿಕೊಂಡಿದ್ದು ಹೌದು. ಈಗ ದ್ವೀಪ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿದ್ದು, ವೆನೆಜುವೆಲಾ ನಂತರ, ಗ್ರೀನ್‌ಲ್ಯಾಂಡ್ ಅನ್ನು ಟಾರ್ಗೆಟ್ ಮಾಡಿದೆ. ಇದರೊಟ್ಟಿಗೆ, ಕ್ಯೂಬಾ ಮತ್ತು ಮೆಕ್ಸಿಕೊವನ್ನು ಅಮೆರಿಕ ಈ ಪಟ್ಟಿಗೆ ಸೇರಿಸಿರುವುದು ಗಮನಾರ್ಹ.
ಪ್ರತಿಬಾರಿ ಸುಂಕದ ಬೆದರಿಕೆ!
ಕ್ಯೂಬಾಗೆ ತೈಲ ಮಾರಾಟ ಮಾಡದಂತೆ ಟ್ರಂಪ್ ಇತರ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾರಾದರೂ ಮಾರಾಟ ಮಾಡಿದ್ರೆ, ಅವರಿಗೆ ಸುಂಕದ ಹೊರೆ ಬೀಳುವುದು ಖಚಿತ ಎಂದು ಎಚ್ಚರಿಸಿದ್ದಾರೆ. ಈ ಎಫೆಕ್ಟ್ ಜಾರಿಗೆ ತರಲು, ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಮೆಕ್ಸಿಕೊ ಹಲವು ವರ್ಷಗಳಿಂದ ಕ್ಯೂಬಾಗೆ ಕಚ್ಚಾ ತೈಲ ಮಾರಾಟ ಮಾಡುತ್ತಿದೆ. ಈ ಸಂದರ್ಭದಲ್ಲಿ, ಮೆಕ್ಸಿಕೊ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಟ್ರಂಪ್ ಈ ಬಹುಮುಖ್ಯ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
ಕ್ಯೂಬಾದ ಕುರಿತು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಆದೇಶವನ್ನು ಟ್ರಂಪ್ ಹೊರಡಿಸಿದ್ದಾರೆ. ಕ್ಯೂಬಾ ಸರ್ಕಾರವು ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದ್ದು, ಈ ಆದೇಶ ಶುಕ್ರವಾರ (ಜ.30) ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ದೇಶವು ಕ್ಯೂಬಾಗೆ ತೈಲ ಸಾಗಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಸಾರ್ವಭೌಮ ನಿರ್ಧಾರವಾಗಿದೆ ಮತ್ತು ಅಮೆರಿಕದ ಒತ್ತಡದಿಂದಲ್ಲ ಎಂದಿರುವುದು ಅಚ್ಚರಿ.
ಶೇ.50ರಷ್ಟು ಸುಂಕ
ಮತ್ತೊಂದೆಡೆ, ಅಮೆರಿಕ ಮತ್ತು ಕೆನಡಾ ನಡುವಿನ ಸಂಬಂಧಗಳು ಸಹ ಹದಗೆಟ್ಟಿವೆ. ಟ್ರಂಪ್ ಮತ್ತೊಮ್ಮೆ ಕೆನಡಾದ ಮೇಲೆ ಸುಂಕ ವಿಧಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಕೆನಡಾದ ವಿಮಾನಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಜಾರ್ಜಿಯಾದಲ್ಲಿ ನೆಲೆಗೊಂಡಿರುವ ಅಮೆರಿಕ ಮೂಲದ ಗಲ್ಫ್‌ಸ್ಟ್ರೀಮ್ ಏರೋಸ್ಪೇಸ್ ಜೆಟ್‌ಗಳನ್ನು ಪ್ರಮಾಣೀಕರಿಸಲು ಕೆನಡಾ ನಿರಾಕರಿಸಿದೆ ಎಂದು ಟ್ರಂಪ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಾದ ಟ್ರೂತ್ ಸೋಷಿಯಲ್‌ನಲ್ಲಿ ತಿಳಿಸಿದ್ದಾರೆ. ಇದನ್ನು ತಕ್ಷಣ ಸರಿಪಡಿಸದಿದ್ದರೆ, ಸುಂಕ ವಿಧಿಸುವುದಾಗಿ ವಾರ್ನಿಂಗ್ ನೀಡಿದ್ದಾರೆ,(ಏಜೆನ್ಸೀಸ್).