Iran-US Ceasefire 
ವಿದೇಶ

Iran-US Ceasefire; ಟ್ರಂಪ್ ಬೆದರಿಕೆಗೆ ಬಗ್ಗದ ಇರಾನ್: ಯುದ್ಧ ಅಂತ್ಯವಾಡಲು 10 ಅಂಶಗಳ ಬೇಡಿಕೆ ಮುಂದಿಟ್ಟ ಟೆಹ್ರಾನ್!

ವಾಷಿಂಗ್ಟನ್/ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಮೆರಿಕ ನೀಡಿದ್ದ 45 ದಿನಗಳ ಕದನ ವಿರಾಮದ (Iran-US Ceasefire) ಪ್ರಸ್ತಾವನೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಬದಲಿಗೆ, ಶಾಶ್ವತವಾಗಿ ಯುದ್ಧ ಕೊನೆಗೊಳಿಸಬೇಕು ಎಂಬ 10 ಅಂಶಗಳ ಬೇಡಿಕೆಯನ್ನು ಅಮೆರಿಕದ ಮುಂದಿಟ್ಟಿದೆ. ಇದರಿಂದ ಕೆರಳಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಅತ್ಯಂತ ಕಠಿಣ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ 10 ಅಂಶಗಳ ಪ್ಲಾನ್ ಏನು?

ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ (IRNA) ವರದಿ ಮಾಡಿರುವಂತೆ, ಪಾಕಿಸ್ತಾನದ ಮಧ್ಯಸ್ಥಿಕೆಯ ಮೂಲಕ ಇರಾನ್ ತನ್ನ ಉತ್ತರವನ್ನು ಅಮೆರಿಕಕ್ಕೆ ರವಾನಿಸಿದೆ.
ಇರಾನ್ ಕೇವಲ ತಾತ್ಕಾಲಿಕ ಕದನ ವಿರಾಮವನ್ನು ಒಪ್ಪಲು ಸಿದ್ಧವಿಲ್ಲ.
ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಪ್ರತ್ಯೇಕ ಪ್ರೋಟೋಕಾಲ್ ಇರಬೇಕು.
ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳನ್ನು (Sanctions) ತೆರವುಗೊಳಿಸಬೇಕು.
ಯುದ್ಧ ಪೀಡಿತ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಬದ್ಧತೆ ತೋರಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇರಾನ್ ಇಟ್ಟಿದೆ.

ಟ್ರಂಪ್ ಕೆಂಗಣ್ಣು: "ಹಾರ್ಮುಜ್ ತೆರೆಯಿರಿ ಇಲ್ಲವೇ ನರಕ ಅನುಭವಿಸಿ"

ಇರಾನ್‌ನ ಈ ಉದ್ಧಟತನಕ್ಕೆ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಅತ್ಯಂತ ಆಕ್ರೋಶಭರಿತವಾಗಿ ಬರೆದುಕೊಂಡಿರುವ ಅವರು, "ಮಂಗಳವಾರ ರಾತ್ರಿ 8 ಗಂಟೆಯೊಳಗೆ (ಅಮೆರಿಕ ಕಾಲಮಾನ) ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಮಂಗಳವಾರ ಇರಾನ್ ಪಾಲಿಗೆ ಪವರ್ ಪ್ಲಾಂಟ್ ಮತ್ತು ಸೇತುವೆಗಳ ವಿನಾಶದ ದಿನವಾಗಲಿದೆ. ನರಕವನ್ನು ನೋಡಲು ಸಿದ್ಧರಾಗಿ" ಎಂದು ಬಹಿರಂಗ ಬೆದರಿಕೆ ಹಾಕಿದ್ದಾರೆ.
ವೈಟ್ ಹೌಸ್‌ನಲ್ಲಿ ನಡೆದ ಈಸ್ಟರ್ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, "ಇರಾನ್ ದೊಡ್ಡ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಎರಡು ಆಡಳಿತಗಳನ್ನು ನಾವು ಅಂತ್ಯಗೊಳಿಸಿದ್ದೇವೆ, ಈಗಿನ ಗುಂಪು ಸ್ಮಾರ್ಟ್ ಆಗಿದೆ ಅಂದುಕೊಂಡಿದ್ದೆವು, ಆದರೆ ಅವರು ತಪ್ಪು ಮಾಡುತ್ತಿದ್ದಾರೆ" ಎಂದು ಗುಡುಗಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ

ಒಂದು ವೇಳೆ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಅಮೆರಿಕವು ಇರಾನ್‌ನ ಇಂಧನ ಮೂಲಗಳ (Energy Infrastructure) ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು, ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರುವ ಭೀತಿ ಎದುರಾಗಿದೆ. ಅತ್ತ ಇರಾನ್ ತನ್ನ 10 ಅಂಶಗಳ ಬೇಡಿಕೆಗೆ ಅಂಟಿಕೊಂಡಿದ್ದರೆ, ಇತ್ತ ಟ್ರಂಪ್ ತಮ್ಮ ಡೆಡ್‌ಲೈನ್ ಮೇಲೆ ಕಣ್ಣಿಟ್ಟಿದ್ದಾರೆ,(ಏಜೆನ್ಸೀಸ್​).