ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಇರಾನ್ ಮೇಲಿನ ಯುದ್ಧವನ್ನು ನಿಲ್ಲಿಸುವ ಯಾವ ಲಕ್ಷಣಗಳೂ ಇಲ್ಲ
- ಕೊಟ್ಟ ಡೀಲ್ ಕೈಬಿಟ್ಟ ಇರಾನ್ ಸೇತುವೆಗಳು, ವಿದ್ಯುತ್ ಸ್ಥಾವರಗಳನ್ನು ಉಡೀಸ್ಗೆ ಟ್ರಂಪ್ ಪಣ
ಅಮೆರಿಕ: ಫೆ.28ರಂದು ಆರಂಭಗೊಂಡ ಇರಾನ್ ಮತ್ತು ಅಮೆರಿಕ ನಡುವಿನ ಭೀಕರ ಯುದ್ಧವು ಅದ್ಯಾಕೋ ಕೊನೆಗಾಣುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರಾಚ್ಯ ಸಂಘರ್ಷ ಕುರಿತಂತೆ ನೀಡಿರುವ ಹೇಳಿಕೆಗಳು ಇಡೀ ಜಗತ್ತಿಗೆ ದೊಡ್ಡ ತಲೆಬಿಸಿ ತಂದೊಡ್ಡಿದೆ.
ವಯೋನ್ ವರದಿ ಪ್ರಕಾರ, ಇಂದು (ಜೂ.10) ಫಾಕ್ಸ್ ನ್ಯೂಸ್‌ನ ಟ್ರೇ ಯಿಂಗ್ಸ್ಟ್ ಜತೆಗೆ ಮಾತನಾಡಿದ ಟ್ರಂಪ್, ನಾವು ಕೊಟ್ಟಿದ್ದ ಡೀಲ್ ಅನ್ನು ಇರಾನ್ ಕೈಬಿಟ್ಟಿದೆ. ನಮ್ಮನ್ನು ಬೆನ್ನಟ್ಟುತ್ತಿರುವ ಇರಾನಿನ ವಿದ್ಯುತ್ ಸ್ಥಾವರಗಳು, ಪ್ರಮುಖ ಸೇತುವೆಗಳನ್ನು ಉಡೀಸ್ ಮಾಡುವುದೇ ನಮ್ಮ ಮುಂದಿನ ಟಾರ್ಗೆಟ್. ಇದನ್ನು ಛಿದ್ರಗೊಳಿಸುವ ಕೆಲಸ ಮುಂದುವರಿಯಬಹುದು ಎಂದರು.
ರಾಜತಾಂತ್ರಿಕ ಪ್ರಯತ್ನಗಳು ಸ್ಥಗಿತಗೊಂಡರೆ ಅಮೆರಿಕ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಇನ್ನೂ ತೀವ್ರಗೊಳಿಸಬಹುದು. ಇದಕ್ಕೂ ಮೊದಲೇ ಅವರಿಗೆ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶವಿತ್ತು. ಪ್ರಾಣಪಾಯದಿಂದ ಬದುಕುಳಿಯುವ ಚಾನ್ಸ್ ಕೂಡ ಇತ್ತು. ಆದರೆ, ಇರಾನ್ ಅದನ್ನು ಕಳೆದುಕೊಂಡಿದೆ ಎಂದು ಹೇಳಿದರು. ಟ್ರಂಪ್ರ ಈ ಮಾತುಗಳು ಇತ್ತೀಚೆಗೆ ಇರಾನ್ ಹೊರ್ಮುಜ್ ಜಲಸಂಧಿ ಬಳಿ ಅಮೆರಿಕದ ಅಪಾಚೆ ಮಿಲಿಟರಿ ಕಾಪ್ಟರ್ ಹೊಡೆದುರುಳಿಸಿದ ಬೆನ್ನಲ್ಲೇ ಬಂದಿವೆ ಎಂಬುದು ಗಮನಾರ್ಹ.
ಇಬ್ಬರೂ ಪೈಲಟ್ ಸುರಕ್ಷಿತ!
ಇನ್ನೂ ಅಪಾಚೆ ಹೆಲಿಕಾಪ್ಟರ್ ಮೇಲಿನ ಇರಾನ್ ದಾಳಿಗೆ ಸ್ಪಷ್ಟನೆ ನೀಡಿದ ಟ್ರಂಪ್, ಹೊರ್ಮುಜ್ ಬಳಿ ನಮ್ಮ ಕಾಪ್ಟರ್ ಸ್ವಲ್ಪ ಕೆಳಮಟ್ಟದಲ್ಲಿ ಹಾರಾಡಿದ ಪರಿಣಾಮ ಅವರ ಡ್ರೋನ್ ತುದಿಯಲ್ಲಿ ಸಿಕ್ಕಿಕೊಂಡಿತು. ಇದರಿಂದ ಯಾವುದೇ ಸ್ಫೋಟ ಆಗಲಿಲ್ಲ. ಬದಲಿಗೆ ಆ ಡ್ರೋನ್ ಜೊತೆಗೆ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇಬ್ಬರೂ ಪೈಲಟ್ಗಳು ಬದುಕುಳಿದಿದ್ದಾರೆ ಎಂದು ಹೇಳಿದರು,(ಏಜೆನ್ಸೀಸ್).