Donald Trump 
ವಿದೇಶ

ವೆನೆಜುವೆಲಾ ಬೆನ್ನಲ್ಲೇ ಗ್ರೀನ್‌ಲ್ಯಾಂಡ್ ವಶಕ್ಕೆ ಟ್ರಂಪ್ ತಂತ್ರ? ಸಾರ್ವಭೌಮತ್ವದ ರಕ್ಷಣೆಗೆ ನಿಂತ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಪ್ರಧಾನಿಗಳು! Donald Trump

ಪ್ರಮುಖ ಮುಖ್ಯಾಂಶಗಳು

  • ಗ್ರೀನ್‌ಲ್ಯಾಂಡ್‌ನ ಮೇಲೆ ವಾಷಿಂಗ್ಟನ್ ಹಿಡಿತ ಸಾಧಿಸುವ ಅಗತ್ಯವಿದೆ : ಡೊನಾಲ್ಡ್ ಟ್ರಂಪ್
  • ಡ್ಯಾನಿಶ್ ಸಾಮ್ರಾಜ್ಯದ ದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕು ಅಮೆರಿಕಕ್ಕೆ ಇಲ್ಲ : ಮೆಟ್ಟೆ ಫ್ರೆಡೆರಿಕ್ಸೆನ್
  • ಗ್ರೀನ್​ಲ್ಯಾಂಡ್​ನ್ನು ನಾವು ಮಾರಾಟಕ್ಕೆ ಇಟ್ಟಿಲ್ಲ : ಜೆನ್ಸ್-ಫ್ರೆಡೆರಿಕ್ ನೀಲ್ಸನ್
ಡೆನ್ಮಾರ್ಕ್‌: ಗ್ರೀನ್‌ಲ್ಯಾಂಡ್‌ನ ಮೇಲೆ ವಾಷಿಂಗ್ಟನ್ ಹಿಡಿತ ಸಾಧಿಸುವ ಅಗತ್ಯವಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಯನ್ನು ಡೆನ್ಮಾರ್ಕ್‌ನ ಪ್ರಧಾನಿ ಮತ್ತು ಗ್ರೀನ್‌ಲ್ಯಾಂಡ್ ಪ್ರಧಾನಿಗಳು ತೀವ್ರವಾಗಿ ವಿರೋಧಿಸಿದ್ದಾರೆ.
ಸಂದರ್ಶನವೊಂದರಲ್ಲಿ ಟ್ರಂಪ್ ಆರ್ಕ್ಟಿಕ್ ದ್ವೀಪಗಳ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸುವ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿ, ಅಮೆರಿಕಾದ ರಕ್ಷಣೆಗಾಗಿ ಗ್ರೀನ್‌ಲ್ಯಾಂಡ್​ನಲ್ಲಿ ತಮ್ಮ ಪ್ರಭುತ್ವ ಹೊಂದುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅಮೆರಿಕ ಗ್ರೀನ್‌ಲ್ಯಾಂಡ್​ನ್ನು ವಶಪಡಿಸಿಕೊಳ್ಳುವ ಅಗತ್ಯವಿದೆ ಎಂದು ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಡ್ಯಾನಿಶ್ ಸಾಮ್ರಾಜ್ಯದ ಮೂರು ದೇಶಗಳಲ್ಲಿ ಯಾವುದನ್ನೂ ಸ್ವಾಧೀನಪಡಿಸಿಕೊಳ್ಳುವ ಹಕ್ಕು ಅಮೆರಿಕಕ್ಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಮೆರಿಕವು ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ವಶಪಡಿಸಿಕೊಂಡ ನಂತರ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ವಾಷಿಂಗ್ಟನ್ ಲ್ಯಾಟಿನ್ ಅಮೇರಿಕನ್ ದೇಶಗಳನ್ನು ನಡೆಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಡೆನ್ಮಾರ್ಕ್ ಸಾಮ್ರಾಜ್ಯದೊಳಗಿನ ಸ್ವಾಯತ್ತ ಪ್ರದೇಶವಾಗಿರುವ ಗ್ರೀನ್‌ಲ್ಯಾಂಡ್‌ಗೆ ಇದೇ ರೀತಿಯ ತರ್ಕವನ್ನು ಅನ್ವಯಿಸಬಹುದು ಎಂಬ ಬಗ್ಗೆ ಆ ಹೇಳಿಕೆಗಳು ಡೆನ್ಮಾರ್ಕ್‌ನಲ್ಲಿ ಎಚ್ಚರಿಕೆಯನ್ನು ಹುಟ್ಟುಹಾಕಿವೆ.
ಐತಿಹಾಸಿಕವಾಗಿ ನಿಕಟ ಮಿತ್ರರಾಷ್ಟ್ರ ಹಾಗೂ ಇನ್ನೊಂದು ದೇಶ ಮತ್ತು ಜನರ ವಿರುದ್ಧ ಬೆದರಿಕೆ ನೀಡುವುದನ್ನು ಅಮೆರಿಕ ಮೊದಲು ನಿಲ್ಲಿಸಬೇಕು. ಹಾಗೆಯೇ ಗ್ರೀನ್​ಲ್ಯಾಂಡ್​ನ್ನು ನಾವು ಮಾರಾಟಕ್ಕೆ ಇಟ್ಟಿಲ್ಲ ಎಂದು ಫ್ರೆಡೆರಿಕ್ಸೆನ್ ಹೇಳಿದರು. ವೆನೆಜುವೆಲಾದ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಟ್ರಂಪ್​ ನಮಗೆ ಗ್ರೀನ್‌ಲ್ಯಾಂಡ್ ಬೇಕು ಎಂಬ​ ಹೇಳಿಕೆ ಸಾರ್ವಭೌಮತ್ವವುಳ್ಳ ದೇಶಕ್ಕೆ ಕೊಡುವ ಅಗೌರವ ಎಂದು ಗ್ರೀನ್‌ಲ್ಯಾಂಡ್‌ನ ಪ್ರಧಾನಿ ಜೆನ್ಸ್-ಫ್ರೆಡೆರಿಕ್ ನೀಲ್ಸನ್ ಹೇಳಿದ್ದಾರೆ.
ಟ್ರಂಪ್ ದ್ವೀಪವನ್ನು ಖರೀದಿಸುವ ಆಸಕ್ತಿಯನ್ನು ಬಹಳ ಹಿಂದಿನಿಂದ ಹೊದಿದ್ದು, ಈ ಮೊದಲು ಅವರು ಈ ಕುರಿತು ಮಾತುಕತೆಗೆ ಮುಂದಾಗಿದ್ದರು. ಆದರೆ ಗ್ರೀನ್‌ಲ್ಯಾಂಡ್ ಯುನೈಟೆಡ್ ಸ್ಟೇಟ್ಸ್‌ನ ಭಾಗವಾಗಲು ಯಾವುದೇ ಆಸಕ್ತಿಯನ್ನು ಹೊಂದಿಲ್ಲ ಎಂದು ನಾವು ಸ್ಪಷ್ಟ ಪಡಿಸಿದ್ದೇವೆ ಎಂದು ಅವರು ಹೇಳಿದರು.

ಜೆಫ್ರಿ ಸ್ಯಾಚ್ಸ್ ಎಚ್ಚರಿಕೆ

ಇದರ ನಡುವೆ ಕೊಲಂಬಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ಇತ್ತೀಚಿನ ಯುಎಸ್ ಕ್ರಮಗಳು ಅಂತರರಾಷ್ಟ್ರೀಯ ಕಾನೂನಿನ ವಿಫಲತೆಯನ್ನು ಸೂಚಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕಾವು ಉದ್ದೇಶಪೂರ್ವಕವಾಗಿ ಅಂತರರಾಷ್ಟ್ರೀಯ ಕಾನೂನಿನ ಕಟ್ಟಲೆಗಳನ್ನು ಮುರಿಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅಮೆರಿಕ ಗ್ರೀನ್‌ಲ್ಯಾಂಡ್​ನ್ನು ಆಕ್ರಮಿಸಿದಾಗ ಅದನ್ನು ಯುರೋಪ್ ಹೇಗೆ ನೋಡುತ್ತದೆ ಎಂದು ನನಗೆ ತಿಳಿದಿಲ್ಲ ಆದರೆ ಒಂದು ವೇಳೆ ಆಕ್ರಮಣ ನಡೆದರೆ ಆಶ್ಚರ್ಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಗ್ರೀನ್‌ಲ್ಯಾಂಡ್ ಅಮೆರಿಕಾಗೆ ಏಕೆ ಮುಖ್ಯ?

ಯುರೋಪ್ ಮತ್ತು ಉತ್ತರ ಅಮೆರಿಕದ ನಡುವಿನ ಗ್ರೀನ್‌ಲ್ಯಾಂಡ್‌ನ ಸ್ಥಳವು ಯುಎಸ್ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ದ್ವೀಪವು ಅಪಾರ ಖನಿಜಗಳಿಂದ ಕೂಡಿದ್ದು, ವಾಷಿಂಗ್ಟನ್ ಚೀನಾದ ಪೂರೈಕೆಗಳ ಅವಲಂಬನೆಯನ್ನು ಕಡಿಮೆ ಮಾಡಲು ಇದು ಅವಶ್ಯಕವಾಗಿದೆ.
ಗ್ರೀನ್‌ಲ್ಯಾಂಡ್ ಹಿಂದೆ ಡ್ಯಾನಿಶ್ ವಸಾಹತುವಾಗಿದ್ದರೂ, ಅದು ಸ್ವ-ಆಡಳಿತವನ್ನು ಗಳಿಸಿತು ಮತ್ತು 2009 ರ ಒಪ್ಪಂದದ ಅಡಿಯಲ್ಲಿ, ಸ್ವಾತಂತ್ರ್ಯ ಘೋಷಿಸುವ ಹಕ್ಕನ್ನು ಹೊಂದಿದೆ. ಆದಾಗ್ಯೂ, ಈ ಪ್ರದೇಶವು ಡೆನ್ಮಾರ್ಕ್‌ನಿಂದ ವಾರ್ಷಿಕ ಸಬ್ಸಿಡಿಗಳ ಮೇಲೆ ಅವಲಂಬಿತವಾಗಿದೆ,(ಏಜನ್ಸೀಸ್).