Donald Trump | ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್​ ನೂತನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ 
ವಿದೇಶ

ಇರಾನ್ ನೂತನ ನಾಯಕ ಶಾಂತಿಯಿಂದ ಬದುಕಲಾರ!... ಮಾತುಕತೆಯ ಸೂಚನೆ ನೀಡುತ್ತಲೇ ಮೊಜ್ತಾಬಾ ಖಮೇನಿಗೆ ಟ್ರಂಪ್ ಖಡಕ್ ವಾರ್ನಿಂಗ್! | Donald Trump

ವಾಷಿಂಗ್ಟನ್: ಪರಿಸ್ಥಿತಿಗಳಿಗೆ ಅನುಗುಣವಾಗಿ ಇರಾನ್ ಜೊತೆ ಚರ್ಚೆಗೆ ಮುಕ್ತರಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump ) ತಿಳಿಸಿರುವುದಾಗಿ ವರದಿಯಾಗಿದ್ದು, ಟೆಹ್ರಾನ್ ಮಾತುಕತೆ ನಡೆಸಲು ಉತ್ಸುಕವಾಗಿದೆ ಎಂದು ಟ್ರಂಪ್​ ಹೇಳಿದ್ದಾರೆ.
ಸೋಮವಾರ ಸಂಜೆ ನೀಡಿದ ಸಂದರ್ಶನವೊಂದರಲ್ಲಿ ಈ ಹೇಳಿಕೆ ಬಂದಿದ್ದು, ಇದನ್ನು ಕೇಬಲ್ ನ್ಯೂಸ್ ನೆಟ್‌ವರ್ಕ್ ಮಂಗಳವಾರ ವರದಿ ಮಾಡಿದೆ. ಅದೇ ಸಂದರ್ಶನದಲ್ಲಿ, ಟ್ರಂಪ್ ಇರಾನ್‌ನ ಹೊಸದಾಗಿ ನೇಮಕಗೊಂಡ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿಯನ್ನು ಟೀಕಿಸಿದ್ದು, ನೂತನ ನಾಯಕ ಶಾಂತಿಯುತವಾಗಿ ಬದುಕಬಲ್ಲನು ಎನ್ನುವ ನಂಬಿಕೆ ನನಗೆ ಇಲ್ಲ ಎಂದಿದ್ದಾರೆ.

ಟ್ರಂಪ್ ಮಾತುಕತೆಯ ದಾಳ ಮತ್ತು ಹೊಸ ನಾಯಕನ ಟೀಕೆ

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಪರಿಸ್ಥಿತಿಗಳಿಗೆ ತಕ್ಕಂತೆ ನಾನು ಇರಾನ್ ಜೊತೆ ಚರ್ಚೆಗೆ ಮುಕ್ತನಾಗಿದ್ದೇನೆ, ಅವರು ಕೂಡ ಮಾತುಕತೆಗೆ ಉತ್ಸುಕರಾಗಿದ್ದಾರೆ ಎನ್ನುವ ಮಾತುಗಳನ್ನು ಕೇಳಿದ್ದೇನೆ, ಆದರೆ ಅಂತಿಮವಾಗಿ ಎಲ್ಲವೂ ನಮ್ಮ ಷರತ್ತುಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.

ಪೀಟ್ ಹೆಗ್ಸೆತ್ ಖಡಕ್ ಎಚ್ಚರಿಕೆ

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಂಗಳವಾರ ಮಾತನಾಡಿ, ಇರಾನ್ ವಿರುದ್ಧದ ಕಾರ್ಯಾಚರಣೆಯನ್ನು ಅಮೆರಿಕ ಪಡೆಗಳು ಇನ್ನು ತೀವ್ರಗೊಳಿಸಲಿವೆ ಎಂದು ಘೋಷಿಸಿದರು. ಇರಾನ್‌ನೊಳಗಿನ ನಮ್ಮ ದಾಳಿಗಳು ಇನ್ನೂ ಅತ್ಯಂತ ತೀವ್ರ ಮಟ್ಟವನ್ನು ತಲುಪಬೇಕಿದೆ. ಅವರ ಪ್ರತಿರೋಧವನ್ನು ಹತ್ತಿಕ್ಕುವವರೆಗೆ ಈ ಸಂಘರ್ಷ ನಿಲ್ಲದು ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನಿಂದ ಜಾಗತಿಕ ತೈಲ ಮಾರುಕಟ್ಟೆಗೆ ಪೆಟ್ಟು

ಇಸ್ರೇಲ್ ಮತ್ತು ಅಮೆರಿಕದ ಒತ್ತಡಕ್ಕೆ ಮಣಿಯದ ಇರಾನ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಯುಎಇಯ ಅತಿದೊಡ್ಡ ತೈಲ ಸಂಸ್ಕರಣಾಗಾರವಾದ ADNOC ರುವೈಸ್ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ. ದಿನಕ್ಕೆ 837,000 ಬ್ಯಾರೆಲ್ ಕಚ್ಚಾ ತೈಲ ನಿರ್ವಹಿಸುವ ಈ ಸಂಸ್ಕರಣಾಗಾರದ ಮೇಲಿನ ದಾಳಿಯು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್, ನಾವು ಕದನ ವಿರಾಮ ಬಯಸುತ್ತಿಲ್ಲ, ಪ್ರತಿರೋಧ ಮುಂದುವರಿಸುತ್ತೇವೆ ಎಂದು ಗುಡುಗಿದ್ದಾರೆ(ಏಜೆನ್ಸೀಸ್​).