ಡೊನಾಲ್ಡ್ ಟ್ರಂಪ್ ಹಂಚಿಕೊಂಡ ನಕ್ಷೆ 
ವಿದೇಶ

ಹೊರ್ಮುಜ್​ ಜಲಸಂಧಿ ಅಮೆರಿಕದ ಹೊಸ ಪ್ರದೇಶ ಎಂದು ಮತ್ತೊಮ್ಮೆ ನಕ್ಷೆ ಹಂಚಿಕೊಂಡ ಡೊನಾಲ್ಡ್ ಟ್ರಂಪ್ | Donald Trump

ನವದೆಹಲಿ: ಜಾಗತಿಕ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಸರಬರಾಜುಗಳಿಗೆ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಹೊಸ ಪ್ರದೇಶ ಎಂದು ತೋರಿಸುವ ನಕ್ಷೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಾನುವಾರ(ಆ. 23) ಮತ್ತೊಮ್ಮೆ ಹಂಚಿಕೊಂಡಿದ್ದಾರೆ.
ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ ಅಧ್ಯಕ್ಷ ಟ್ರಂಪ್ ಪೋಸ್ಟ್ ಮಾಡಿದ್ದು, ಫೆಬ್ರವರಿ 28ರಂದು ಯುದ್ಧ ಪ್ರಾರಂಭವಾದಾಗಿನಿಂದ ಇರಾನ್‌ನಿಂದ ಮುಚ್ಚಲ್ಪಟ್ಟಿರುವ ನಿರ್ಣಾಯಕ ಚಾಕ್‌ಪಾಯಿಂಟ್ ಅನ್ನು ಹೊಸ ಯುಎಸ್ ಪ್ರದೇಶ ಎಂದು ಸುತ್ತುವರೆದಿರುವ ನಕ್ಷೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇದೇ ರೀತಿ ಆಗಸ್ಟ್ 18 ಮತ್ತು ಆಗಸ್ಟ್ 15ರಂದು ಹಾರ್ಮುಜ್ ಜಲಸಂಧಿ ಅಮೆರಿಕದ ಪ್ರದೇಶ ಎಂದು ಘೋಷಿಸುವ ಪ್ರಸ್ತಾಪವನ್ನು ಹಂಚಿಕೊಂಡಿದ್ದರು. ನಾವು ಇರಾನ್ ಅನ್ನು ಬಹಳ ಹೀನಾಯವಾಗಿ ಸೋಲಿಸುತ್ತೇವೆ. ಶೀಘ್ರದಲ್ಲೇ ನಾನು ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ಪ್ರದೇಶವೆಂದು ಘೋಷಿಸುತ್ತೇನೆ ಎಂದು ನ್ಯೂಯಾರ್ಕ್​ನ ಸಭೆಯೊಂದರಲ್ಲಿ ಹೇಳಿದ್ದರು. 
ಇನ್ನೂ ಯುದ್ಧದ ಮೊದಲು ವಿಶ್ವದ ತೈಲ ಮತ್ತು ಎಲ್‌ಎನ್‌ಜಿ ರಫ್ತಿನ ಸುಮಾರು ಐದನೇ ಒಂದು ಭಾಗವು ಸಾಗಾಟವಾಗುತ್ತಿದ್ದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಯುದ್ಧದ ಬಳಿಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಜಲಮಾರ್ಗವನ್ನು ಬಳಸುವ ಮೊದಲು ಹಡಗುಗಳು ಅನುಮತಿ ಪಡೆಯುವುದು ಮತ್ತು ಸಾರಿಗೆ ಶುಲ್ಕವನ್ನು ಪಾವತಿಸುವುದು ಕಡ್ಡಾಯಗೊಳಿಸಿದೆ.

ಇರಾನ್ ಹೇಳಿದ್ದೇನು? 

ಅಮೆರಿಕ ತನ್ನ ವರ್ತನೆಯನ್ನು ಸರಿಪಡಿಸಿಕೊಳ್ಳುವವರೆಗೂ ಹಾರ್ಮುಜ್ ತೆರೆಯುವುದಿಲ್ಲ ಎಂದು ಇರಾನ್ ಹೇಳಿದೆ. ಈ ಕುರಿತು ರಾಜ್ಯ ದೂರದರ್ಶನದಲ್ಲಿ ಮಾತನಾಡಿರುವ ರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಮೊಹ್ಸೆನ್ ರೆಜೈ, ಅಮೆರಿಕದ ಹೇಳಿಕೆಗಳ ಹೊರತಾಗಿಯೂ, ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಮತ್ತು ಅಮೆರಿಕ ತನ್ನ ನಡವಳಿಕೆಯನ್ನು ಸರಿಪಡಿಸಿಕೊಳ್ಳುವವರೆಗೆ ಅದು ತೆರೆಯುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಇರಾನ್ ವಿರುದ್ಧ ಟ್ರಂಪ್ ಘೋಷಿಸಿರುವ ಆರ್ಥಿಕ ಯುದ್ಧದಲ್ಲಿ ಭಾಗವಹಿಸದಂತೆ ಇತರೆ ದೇಶಗಳಿಗೆ ಎಚ್ಚರಿಕೆ ನೀಡಿರುವ ಅವರು, ಅಮೆರಿಕ ನಡೆಸುತ್ತಿರುವ ಆರ್ಥಿಕ ಯುದ್ಧಕ್ಕೆ ಸೇರಬೇಡಿ ಎಂದು  ನಾವು ಎಲ್ಲಾ ದೇಶಗಳಿಗೆ ಹೇಳುತ್ತೇವೆ. ಒಂದು ವೇಳೆ ಅದಕ್ಕೆ ಸೇರಿದ್ರೆ ಅಂತಹ ದೇಶಗಳನ್ನು ಶತ್ರುಗಳೆಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).