ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಅಂತ್ಯಗೊಳಿಸಿದ ಡೊನಾಲ್ಡ್ ಟ್ರಂಪ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ! Donald Trump 
ವಿದೇಶ

ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಅಂತ್ಯಗೊಳಿಸಿದ ಡೊನಾಲ್ಡ್ ಟ್ರಂಪ್: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಭೀತಿ! Donald Trump

ಪ್ರಮುಖ ಮುಖ್ಯಾಂಶಗಳು

  • ಇರಾನ್ ಜತೆಗಿನ ಕದನ ವಿರಾಮ ಒಪ್ಪಂದ ಅಂತ್ಯಗೊಳಿಸಿದ ಡೊನಾಲ್ಡ್ ಟ್ರಂಪ್
  • ಅವರು (ಇರಾನ್​) ಅಸ್ವಸ್ಥರು, ಅವರೊಂದಿಗೆ ವ್ಯವಹರಿಸುವುದು ಸಮಯದ ವ್ಯರ್ಥ ಎಂದ ಅಮೆರಿಕ ಅಧ್ಯಕ್ಷ
  • ಟರ್ಕಿಯ ಅಂಕಾರದಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಇರಾನ್ ವಿರುದ್ಧ ಟ್ರಂಪ್ ಆಕ್ರೋಶ
  • ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಭೀಕರ ದಾಳಿಗೆ ಇರಾನ್‌ನ 60ಕ್ಕೂ ಹೆಚ್ಚು ದೋಣಿಗಳು, ರಾಡಾರ್‌ಗಳು ಧ್ವಂಸ
ಅಂಕಾರಾ (ಟರ್ಕಿ): ಇರಾನ್ ಮತ್ತು ಅಮೆರಿಕ ನಡುವೆ ಕಳೆದ ಕೆಲವು ದಿನಗಳಿಂದ ಸತತವಾಗಿ ನಡೆಯುತ್ತಿದ್ದ ವಾಗ್ದಾಳಿ ಹಾಗೂ ಪರಸ್ಪರ ಗುಂಡಿನ ದಾಳಿಗಳು ತೀವ್ರಗೊಂಡ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( Donald Trump ) , ಇರಾನ್ ಜತೆಗಿನ ಮಧ್ಯಂತರ ಕದನ ವಿರಾಮ ಒಪ್ಪಂದ ಅಂತ್ಯಗೊಂಡಿದೆ ಎಂದು ಇಂದು (ಜುಲೈ 08) ಅಧಿಕೃತವಾಗಿ ಘೋಷಿಸಿದ್ದಾರೆ.
ಇರಾನ್‌ನ ಪ್ರಸ್ತುತ ನಾಯಕತ್ವವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಟ್ರಂಪ್​, ಅಲ್ಲಿನ ಆಡಳಿತಗಾರರನ್ನು 'ಅಸ್ವಸ್ಥರು' ಎಂದು ತೆಗಳಿದ್ದಲ್ಲದೆ, ಅವರೊಂದಿಗೆ ಯಾವುದೇ ಮಾತುಕತೆ ನಡೆಸುವುದು ಕೇವಲ ಸಮಯದ ವ್ಯರ್ಥ ಎಂದು ಅತ್ಯಂತ ಕಠಿಣ ಶಬ್ದಗಳಲ್ಲಿ ಹರಿಹಾಯ್ದಿದ್ದಾರೆ. ಆದಾಗ್ಯೂ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮುಂದುವರಿಯಲು ತಾವು ಅನುಮತಿ ನೀಡುವುದಾಗಿ ಟ್ರಂಪ್ ಸ್ಪಷ್ಟಪಡಿಸಿದ್ದು, ಸದ್ಯ ಜಾಗತಿಕ ರಾಜಕೀಯ ವಲಯದಲ್ಲಿ ಈ ಮಹತ್ವದ ಬೆಳವಣಿಗೆ ಭಾರಿ ಸಂಚಲನ ಮೂಡಿಸಿದೆ.
ಟರ್ಕಿ ದೇಶದ ರಾಜಧಾನಿ ಅಂಕಾರಾದಲ್ಲಿ ನಡೆಯುತ್ತಿರುವ ಎರಡು ದಿನಗಳ ನ್ಯಾಟೋ (NATO) ಶೃಂಗಸಭೆಯ ಸಂದರ್ಭದಲ್ಲಿ ಇರಾನ್ ಜತೆಗಿನ ಕದನ ವಿರಾಮದ ಸ್ಥಿತಿಗತಿಯ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ನನ್ನ ಪ್ರಕಾರ ಇದು ಮುಗಿದ ಅಧ್ಯಾಯ. ಇನ್ಮುಂದೆ ಅವರೊಂದಿಗೆ ವ್ಯವಹರಿಸಲು ನನಗೆ ಇಷ್ಟವಿಲ್ಲ. ಅವರು ಅತ್ಯಂತ ಕೆಟ್ಟವರು ಮತ್ತು ಅವರ ದೇಶವನ್ನು ಅಸ್ವಸ್ಥ ಮನಸ್ಥಿತಿಯ ಜನರು ಮುನ್ನಡೆಸುತ್ತಿದ್ದಾರೆ. ನಾನು ನಮ್ಮ ಸಂಧಾನಕಾರರೊಂದಿಗೆ ಮಾತನಾಡುತ್ತೇನೆ, ಅವರು ಮಾತುಕತೆ ನಡೆಸಲು ಬಯಸುತ್ತಾರೆ ಮತ್ತು ಅವರು ಒಳ್ಳೆಯ ಜನರು ಕೂಡ ಹೌದು, ಆದರೆ ಅಂತಿಮವಾಗಿ ಯಾವುದೇ ನಿರ್ಧಾರಕ್ಕಾಗಿ ನನ್ನ ಬಳಿಯೇ ಬರಬೇಕಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಇರಾನ್ ಜೊತೆ ವ್ಯವಹರಿಸುವುದು ಕೇವಲ ಸಮಯದ ವ್ಯರ್ಥವಷ್ಟೇ ಎಂದು ಟ್ರಂಪ್​ ಗುಡುಗಿದ್ದಾರೆ.
ಜಾಗತಿಕ ಆರ್ಥಿಕತೆಗೆ ಅತ್ಯಂತ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ಇಂಧನ ಸಾಗಣೆಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್ ಮೇಲೆ ನಡೆಸಿದ ಪ್ರತಿಕಾರ ದಾಳಿಯ ಕೆಲವೇ ಗಂಟೆಗಳ ನಂತರ ಟ್ರಂಪ್​ ಈ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಕದನ ಕಾರ್ಮೋಡ ಆವರಿಸಿಕೊಂಡಿದೆ.
ಇನ್ನು ಫೆಬ್ರವರಿ 28 ರಂದು ಯುದ್ಧದ ಆರಂಭಿಕ ಕ್ಷಣಗಳಲ್ಲೇ ಹತರಾಗಿದ್ದ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹಲವು ದಿನಗಳ ಸುದೀರ್ಘ ಅಂತ್ಯಸಂಸ್ಕಾರದ ಪ್ರಕ್ರಿಯೆಯ ನಡುವೆಯೇ ಈ ಪರಸ್ಪರ ಗುಂಡಿನ ದಾಳಿಗಳು ನಡೆದಿವೆ. ಗುರುವಾರ ಮುಕ್ತಾಯಗೊಳ್ಳಲಿರುವ ಈ ಅಂತ್ಯಸಂಸ್ಕಾರದ ಅವಧಿಯಲ್ಲಿ ಉದ್ವಿಗ್ನತೆ ಕಡಿಮೆಯಾಗಬಹುದು ಎಂದು ಭಾವಿಸಲಾಗಿತ್ತು, ಆದರೆ, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದವರು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆಗೈಯುವಂತೆ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಹೀಗಾಗಿ, ಈ ಉದ್ವಿಗ್ನತೆ ಇಲ್ಲಿಗೆ ಕೊನೆಯಾಗುವುದಿಲ್ಲ ಎಂಬ ಸುಳಿವು ಸಿಕ್ಕಿದೆ.
ಬುಧವಾರ ಮುಂಜಾನೆ ಹೊರ್ಮುಜ್ ಜಲಸಂಧಿಯಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿಯಾದ ಬೆನ್ನಲ್ಲೇ, ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್ ಇರಾನ್ ವಿರುದ್ಧ ಸರಣಿ ಶಕ್ತಿಶಾಲಿ ದಾಳಿಗಳನ್ನು ನಡೆಸಿರುವುದಾಗಿ ತಿಳಿಸಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್‌ಗಳು ಮತ್ತು ಅಲ್ಲಿನ ಅರೆಸೇನಾ ರೆವಲ್ಯೂಷನರಿ ಗಾರ್ಡ್ ಬಳಸುತ್ತಿದ್ದ 60ಕ್ಕೂ ಹೆಚ್ಚು ಸಣ್ಣ ದೋಣಿಗಳು ಸೇರಿದಂತೆ ಹಲವು ಇರಾನಿ ಗುರಿಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಇತ್ತ ಇರಾನ್‌ನ ಸರ್ಕಾರಿ ಮಾಧ್ಯಮಗಳು ಬಂದರ್ ಮಹಶಹರ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ವರದಿ ಮಾಡಿದ್ದು, ಅಲ್ಲಿ ಗಾರ್ಡ್ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಇರಾನ್‌ನ ಪರಮಾಣು ವಿದ್ಯುತ್ ಸ್ಥಾವರ ಸಂಕೀರ್ಣವಿರುವ ಬುಶೆಹರ್ ಮೇಲೂ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಅಮೆರಿಕದ ಈ ದಾಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಇರಾನ್, ಬಹ್ರೇನ್ ಮತ್ತು ಕುವೈತ್ ದೇಶಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಬುಧವಾರ ಮುಂಜಾನೆ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಇರುವ ಬಹ್ರೇನ್ ಮತ್ತು ಅಮೆರಿಕ ಭೂಸೇನೆಯ ನೆಲೆಗಳಿರುವ ಕುವೈತ್ ಎರಡೂ ದೇಶಗಳಲ್ಲಿ ಕ್ಷಿಪಣಿ ದಾಳಿಯ ಮುನ್ಸೂಚನೆ ನೀಡುವ ಸೈರನ್ ಅಲರ್ಟ್‌ಗಳು ಮೊಳಗಿವೆ. ಈ ಎರಡೂ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ತಾವೇ ಗುರಿಯಾಗಿಸಿಕೊಂಡಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಅಧಿಕೃತ ಹೇಳಿಕೆಯಲ್ಲಿ ಒಪ್ಪಿಕೊಂಡಿದೆ.
ಹಡಗುಗಳ ಮೇಲಿನ ದಾಳಿಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡದ ಇರಾನ್ ಗಾರ್ಡ್, ಮಕ್ಕಳನ್ನು ಕೊಲ್ಲುವ ಮತ್ತು ಭಯೋತ್ಪಾದಕ ಅಮೆರಿಕ ಸೇನೆಯು ಹಾರ್ಮೋಜ್ಗನ್ ಮತ್ತು ಮಹಶಹರ್ ಪ್ರಾಂತ್ಯಗಳ ಕರಾವಳಿ ನೆಲೆಗಳು ಹಾಗೂ ನಾಗರಿಕ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಬಹಿರಂಗವಾಗಿ ಉಲ್ಲಂಘಿಸಿದೆ ಮತ್ತು ಇಸ್ಲಾಮಾಬಾದ್ ತಿಳುವಳಿಕೆಯನ್ನು ಗಾಳಿಗೆ ತೂರಿದೆ ಎಂದು ಗಂಭೀರವಾಗಿ ದೂಷಿಸಿದೆ, (ಏಜೆನ್ಸೀಸ್​).