ಡೊನಾಲ್ಡ್ ಟ್ರಂಪ್​ಗೆ ಸಿಕ್ಕಿರುವ ವಿಶೇಷ ಉಂಗುರ 
ವಿದೇಶ

ಟ್ರಂಪ್​ಗೆ ಅತ್ಯಂತ ದುಬಾರಿ ಉಂಗುರ ಗಿಫ್ಟ್! ಇದರ ಹಿಂದಿರುವ ಕಾರಣ, ಬೆಲೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಪ್ರಮುಖ ಮುಖ್ಯಾಂಶಗಳು

  • ಡೊನಾಲ್ಡ್ ಟ್ರಂಪ್​ಗೆ ಅತ್ಯಂತ ದುಬಾರಿ ಉಂಗುರ ಗಿಫ್ಟ್​
  • ಅಮೆರಿಕದ 250ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಡುಗೊರೆ
  • ಬೆಲ್ಜಿಯಂ AWDC ಘೋಷಿಸಿರುವ ಅತ್ಯಂತ ದುಬಾರಿ ಉಂಗುರವಿದು
Donald Trump: ಇರಾನ್ ಜೊತೆ ಶಾಂತಿ ಒಪ್ಪಂದಕ್ಕೆ ಅಸ್ತು ಎಂದಮೇಲೆ ಸಖತ್​ ಆರಾಮ್​ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಬೆಲ್ಜಿಯಂನಿಂದ ಅತ್ಯಂತ ಬೆಲೆಬಾಳುವ ಉಂಗುರವೊಂದು ಉಡುಗೊರೆಯಾಗಿ ಬಂದಿದೆ.
ಬೆಲ್ಜಿಯಂ ವಜ್ರ ಉದ್ಯಮವು ಡೊನಾಲ್ಡ್ ಟ್ರಂಪ್​ಗೆ ಇದುವರೆಗಿನ ಅತ್ಯಂತ ದುಬಾರಿ ವಜ್ರದ ಉಂಗುರವನ್ನು ಗಿಫ್ಟ್​ ಆಗಿ ನೀಡಿರುವುದು ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವವನ್ನು ಗುರುತಿಸಲು ಬ್ರಸೆಲ್ಸ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ವಿಶೇಷ ಹಾಗೂ ವಿಶಿಷ್ಟ ಉಂಗುರವನ್ನು ಅನಾವರಣಗೊಳಿಸಲಾಗಿದೆ.
ಬೆಲ್ಜಿಯಂನ ಆಂಟ್ವೆರ್ಪ್ ವರ್ಲ್ಡ್ ಡೈಮಂಡ್ ಸೆಂಟರ್ (AWTC) ಅಮೆರಿಕದ 250ನೇ ವಾರ್ಷಿಕೋತ್ಸವವನ್ನು ಗುರುತಿಸಲು ಅಧ್ಯಕ್ಷರಿಗೆ ಉಡುಗೊರೆಯನ್ನು ಕೊಡುತ್ತಿರುವುದಾಗಿ ಘೋಷಿಸಿದೆ. AWDCಯಿಂದ ಅಮೆರಿಕಕ್ಕೆ ಪ್ರತಿ ವರ್ಷ 16,800 ಕೋಟಿ ರೂ. ಮೌಲ್ಯದ ಪಾಲಿಶ್ ಮಾಡಿದ ವಜ್ರಗಳ ಮೇಲಿನ ಸುಂಕವನ್ನು ತೆಗೆದುಹಾಕುವ ನಿಟ್ಟಿನಲ್ಲಿ ಗೌರವಾರ್ಥವಾಗಿ ಈ ಗಿಫ್ಟ್​ ನೀಡಲಾಗಿದೆ ಎಂಬುದು ಗಮನಾರ್ಹ.

ರಿಂಗ್​ನ ವಿಶೇಷತೆ, ಬೆಲೆ ಎಷ್ಟು?

'ಫ್ರೀಡಮ್ 250' ಎಂಬ ಹೆಸರಿನ ಈ ಉಂಗುರವನ್ನು 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಇದು ಒಟ್ಟು 321 ವಜ್ರ, 56 ನೀಲಮಣಿ, 13 ಪಚ್ಚೆ ಮತ್ತು 6 ಮಾಣಿಕ್ಯಗಳನ್ನು ಹೊಂದಿದೆ. ಈ ಉಂಗುರವು ಅಮೆರಿಕದ ರಾಷ್ಟ್ರೀಯ ಧ್ವಜವನ್ನು ಪ್ರತಿನಿಧಿಸುವ ಡಿಸೈನ್​ನಲ್ಲಿ ಮಾಡಲಾಗಿದೆ. ಇದರೊಟ್ಟಿಗೆ 1776 – 2026 ಮತ್ತು 250 YEARS USA ಎಂಬ ಆಂಗ್ಲ ಪದಗಳನ್ನು ಅದರ ಮೇಲೆ ಕೆತ್ತಲಾಗಿದೆ. ಅಲ್ಲದೆ, ಟ್ರಂಪ್ ಅವರ ಅಧ್ಯಕ್ಷತೆಯನ್ನು ಪ್ರತಿನಿಧಿಸುವ 45 ಮತ್ತು 47 ಸಂಖ್ಯೆಗಳಿವೆ.

ಸುಂಕ ಕಡಿತಕ್ಕೆ ಹೀಗೊಂದು ಉಡುಗೊರೆ

ಈ ಆಕರ್ಷಕ ಉಂಗುರದ ಮೌಲ್ಯ ಎಷ್ಟು ಎಂಬುದನ್ನು ಸದ್ಯದ ಮಟ್ಟಿಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಆಭರಣ ತಜ್ಞರು ಅಂದಾಜಿಸಿರುವ ಪ್ರಕಾರ, ಇದರ ಬೆಲೆ 25,000ದಿಂದ 35,000 ಅಮೇರಿಕನ್ ಡಾಲರ್‌ಗಳು ಇರಬಹುದು (ಸರಿಸುಮಾರು 21 ಲಕ್ಷದಿಂದ 30 ಲಕ್ಷ ರೂ.) ಎನ್ನಲಾಗಿದೆ. ಆಂಟ್ವೆರ್ಪ್ ಮೂಲದ ಪ್ರಮುಖ ಆಭರಣ ವ್ಯಾಪಾರಿ ಡೇವಿಡ್ ಗಾಟ್ಲೀಬ್ ಅವರು, ಆಂಟ್ವೆರ್ಪ್ ವರ್ಲ್ಡ್ ಡೈಮಂಡ್ ಸೆಂಟರ್ (AWDC) ಪರವಾಗಿ ಈ ಉಂಗುರವನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದಾರೆ.
AWDC ಅಧ್ಯಕ್ಷ ಇಸಿಡೋರ್ ಮೋರ್ಸೆಲ್ ಮಾತನಾಡಿ, ಈ ಉಂಗುರವು ಯುಎಸ್ ಮತ್ತು ಬೆಲ್ಜಿಯಂ ವಜ್ರ ಕೈಗಾರಿಕೆಗಳ ನಡುವಿನ ದೀರ್ಘಕಾಲದ ಪಾಲುದಾರಿಕೆಯನ್ನು ಸಂಕೇತಿಸುತ್ತದೆ ಎಂದಿದ್ದಾರೆ. ಶ್ವೇತಭವನದ ಅಧಿಕಾರಿಯೊಬ್ಬರು ವಜ್ರದ ಉಂಗುರವನ್ನು ಇನ್ನೂ ಅಧ್ಯಕ್ಷ ಟ್ರಂಪ್‌ ಅವರಿಗೆ ಹಸ್ತಾಂತರಿಸಿಲ್ಲ. ಆದರೆ, ಇದನ್ನು ಬೆಲ್ಜಿಯಂನ ಅಮೆರಿಕದ ರಾಯಭಾರಿ ಬಿಲ್ ವೈಟ್ ಅವರಿಗೆ ನೀಡಲಾಗಿದೆ. ಅವರ ಮೂಲಕ ವಿಶೇಷ ವಿನ್ಯಾಸದ ಉಂಗುರ ಟ್ರಂಪ್ ಅವರನ್ನು ಸೇರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಟ್ರಂಪ್​ಗೆ ದುಬಾರಿ ಉಡುಗೊರೆಗಳು

ಈ ಸಂದರ್ಭದಲ್ಲಿ, ಅತ್ಯಂತ ದುಬಾರಿ ಉಂಗುರವು ಅಮೆರಿಕದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್ ಈ ಹಿಂದೆ ಕತಾರ್ ಸರ್ಕಾರದಿಂದ 3,360 ಕೋಟಿ ರೂ. ಮೌಲ್ಯದ ವಿಮಾನವನ್ನು ಗಿಫ್ಟ್​ ಆಗಿ ಸ್ವೀಕರಿಸಿದರು. ಆದಾಗ್ಯೂ, ಟ್ರಂಪ್ ಅವರ ನಡವಳಿಕೆಯ ಬಗ್ಗೆ ಆ ಸಮಯದಲ್ಲಿ ಟೀಕೆಗಳು ವ್ಯಕ್ತವಾಗಿತ್ತು. ಇನ್ನೂ ಅಧ್ಯಕ್ಷ ಸ್ಥಾನದಲ್ಲಿರುವ ಟ್ರಂಪ್ ಅಂತಹ ಉಡುಗೊರೆಗಳನ್ನು ಸ್ವೀಕರಿಸುವುದು ನೈತಿಕ ಮಾನದಂಡಗಳಿಗೆ ವಿರುದ್ಧ ಎಂದು ಅನೇಕರು ಅಭಿಪ್ರಾಯಿಸುತ್ತಾರೆ.
ಅಷ್ಟಕ್ಕೂ ಅಮೆರಿಕದ ನಿಯಮಗಳ ಪ್ರಕಾರ, ವಿದೇಶಿ ಸರ್ಕಾರಗಳಿಂದ ಬರುವ ಉಡುಗೊರೆಗಳಿಗೆ ವಿಶೇಷ ನಿಯಮಗಳು ಅನ್ವಯಿಸುತ್ತವೆ. ಆದಾಗ್ಯೂ, ಈ ಉಂಗುರವನ್ನು ಅಧಿಕೃತವಾಗಿ ಟ್ರಂಪ್‌ಗೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿಲ್ ವೈಟ್ ಈ ಉಂಗುರವನ್ನು ಧರಿಸಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಬಳಿಕ ತಕ್ಷಣವೇ ಅದನ್ನು ಡಿಲೀಟ್ ಮಾಡಿದರು. ಇದು ಹಲವರ ಅನುಮಾನಗಳಿಗೆ ಕಾರಣವಾಗಿದೆ,(ಏಜೆನ್ಸೀಸ್).