ಅಣ್ವಸ್ತ್ರ ಒಪ್ಪಂದದ ಮೇಲೆ ಡೊನಾಲ್ಡ್ ಟ್ರಂಪ್ ಪಟ್ಟು! ನಮ್ಮ ಹಕ್ಕು ಸಿಗದಿದ್ದರೆ ಒಪ್ಪಂದವೇ ಇಲ್ಲ ಎಂದ ಇರಾನ್!
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯ ಹೆಸರಿನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ರಹಸ್ಯ ಮಾತುಕತೆಗಳು ಈಗ ಜಗತ್ತಿನ ಅತ್ಯಂತ ಭೀಕರ ರಾಜತಾಂತ್ರಿಕ ಸಮರವಾಗಿ ಮಾರ್ಪಟ್ಟಿವೆ. ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರಗಳನ್ನು ಹೊಂದುವುದಿಲ್ಲ ಎಂದು ತಮಗೆ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US - Iran Conflict) ಬಾಂಬ್ ಸಿಡಿಸಿದ್ದಾರೆ. ಆದರೆ, ಟ್ರಂಪ್ ಅವರ ಈ ಬಿಗ್ ಸ್ಟೇಟ್‌ಮೆಂಟ್ ಅನ್ನು ತಕ್ಷಣವೇ ತಳ್ಳಿಹಾಕಿರುವ ಇರಾನ್, ಇಸ್ಲಾಮಿಕ್ ದೇಶದ ಹಕ್ಕುಗಳು ಮತ್ತು ಆಸ್ತಿಗಳು ಸಂಪೂರ್ಣವಾಗಿ ಮುಕ್ತವಾಗದ ಹೊರತು ಅಮೆರಿಕದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಖಡಕ್ ಆಗಿ ಘೋಷಿಸಿದೆ.
ಉಭಯ ದೇಶಗಳ ನಡುವಿನ ಈ ಹಗ್ಗಜಗ್ಗಾಟವು ಗಲ್ಫ್ ವಲಯದಲ್ಲಿ ಮತ್ತೊಮ್ಮೆ ಯುದ್ಧದ ಕಿಡಿಯನ್ನು ಹೊತ್ತಿಸಿದೆ.
ಶತ್ರುಗಳ ಮಾತನ್ನು ನಾವು ನಂಬಲ್ಲ! ಇರಾನ್ ಮುಖ್ಯ ಸಂಧಾನಕಾರನ ಘರ್ಜನೆ
ಇರಾನ್‌ನ ದೂರದರ್ಶನದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಇರಾನ್ ಸಂಸತ್ತಿನ ಸ್ಪೀಕರ್ ಹಾಗೂ ಆ ದೇಶದ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಗೇರ್ ಘಾಲಿಬಾಫ್, ಅಮೆರಿಕದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಟೆಹ್ರಾನ್‌ನ ಸಂಧಾನಕಾರರು ಶತ್ರುವಿನ ಮಾತುಗಳನ್ನಾಗಲಿ ಅಥವಾ ಅವರ ಸುಳ್ಳು ಭರವಸೆಗಳನ್ನಾಗಲಿ ಯಾವುದೇ ಕಾರಣಕ್ಕೂ ನಂಬುವುದಿಲ್ಲ. ಇರಾನ್ ಜನತೆಯ ಹಕ್ಕುಗಳನ್ನು ಸಂಪೂರ್ಣವಾಗಿ ಎತ್ತಿಹಿಡಿಯಲಾಗಿದೆ ಎಂಬ ಖಚಿತತೆ ಸಿಗುವವರೆಗೂ ನಾವು ಯಾವುದೇ ಅರೆಬರೆ ಒಪ್ಪಂದಕ್ಕೆ ಅನುಮೋದನೆ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ತಮ್ಮ ದೇಶದ ಮೇಲಿರುವ ಎಲ್ಲಾ ಜಾಗತಿಕ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸಬೇಕು ಮತ್ತು ವಿದೇಶಿ ಬ್ಯಾಂಕ್‌ಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ಶತಕೋಟಿ ಡಾಲರ್ ಮೌಲ್ಯದ ಆಸ್ತಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಇರಾನ್ ಪಟ್ಟು ಹಿಡಿದಿದೆ. ಇದರೊಂದಿಗೆ, ಜಾಗತಿಕ ಕಚ್ಚಾ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಕಂಪ್ಲೀಟ್ ಸುರಕ್ಷತೆಯ ನಿಯಂತ್ರಣವನ್ನು ತನಗೇ ಬಿಡಬೇಕು ಎಂದು ಟೆಹ್ರಾನ್ ಬಿಗ್ ಡಿಮ್ಯಾಂಡ್ ಇಟ್ಟಿದೆ.
ಒಪ್ಪಂದವಾಗದಿದ್ದರೆ ಯುದ್ಧ ಮಂಡಳಿ ಸಿದ್ಧ!; ಡೊನಾಲ್ಡ್ ಟ್ರಂಪ್ ಭೀಕರ ಎಚ್ಚರಿಕೆ
ಇನ್ನೊಂದೆಡೆ, ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೇರ ಮಿಲಿಟರಿ ವಾರ್ನಿಂಗ್ ನೀಡಿದ್ದಾರೆ. ನಾವು ಇರಾನ್ ಜೊತೆಗೆ ಅತ್ಯಂತ ಪ್ರಮುಖ ಒಪ್ಪಂದದ ಹಂತಕ್ಕೆ ತಲುಪಿದ್ದೇವೆ. ನಾವು ನಿಧಾನವಾಗಿ ಆದರೆ ಅತ್ಯಂತ ಗಟ್ಟಿಯಾಗಿ ನಮಗೆ ಬೇಕಾದುದನ್ನು ಸಾಧಿಸುತ್ತಿದ್ದೇವೆ. ಒಂದೊಮ್ಮೆ ನಮಗೆ ಬೇಕಾದ ಒಪ್ಪಂದ ಸಿಗದಿದ್ದರೆ, ನಾವು ಈ ಬಿಕ್ಕಟ್ಟನ್ನು ಬೇರೆ ರೀತಿಯಲ್ಲೇ ಅಂತ್ಯಗೊಳಿಸುತ್ತೇವೆ. ಆಗ ನಾವು ‘ಯುದ್ಧ ಇಲಾಖೆ’ ಮೂಲಕ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಆರಂಭಿಸುತ್ತೇವೆ ಎಂದು ಟ್ರಂಪ್ ಗುಡುಗಿದ್ದಾರೆ.
ಮಾಧ್ಯಮ ಸಂಸ್ಥೆ ‘ಆಕ್ಸಿಯೋಸ್’ (Axios) ವರದಿಯ ಪ್ರಕಾರ, ಹೊರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತವಾಗಿ ತೆರೆಯುವ ವಿಷಯದಲ್ಲಿ ಟ್ರಂಪ್ ಕೆಲವು ಮಹತ್ವದ ತಿದ್ದುಪಡಿಗಳನ್ನು ಬಯಸಿದ್ದು, ಇದಕ್ಕೆ ಪ್ರತಿಕ್ರಿಯಿಸಲು ಇರಾನ್‌ಗೆ ೩ ದಿನಗಳ ಕಠಿಣ ಗಡುವು ನೀಡಲಾಗಿದೆ ಎನ್ನಲಾಗಿದೆ.
ಫೆಬ್ರವರಿ ೨೮ ರಿಂದ ಹೊತ್ತಿಕೊಂಡಿರುವ ಈ ಅಮೆರಿಕ-ಇರಾನ್ ಭೀಕರ ಸಂಘರ್ಷ ಇಡೀ ಜಾಗತಿಕ ಆರ್ಥಿಕತೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ನಡುಗಿಸುತ್ತಿದ್ದು, ಟ್ರಂಪ್ ಅವರ ಕಠಿಣ ಗಡುವಿಗೆ ಇರಾನ್ ಯಾವ ರೀತಿ ಕೌಂಟರ್ ಕೊಡಲಿದೆ ಎಂಬುದು ಇಡೀ ಜಗತ್ತಿನಲ್ಲಿ ತೀವ್ರ ಸಸ್ಪೆನ್ಸ್ ಸೃಷ್ಟಿಸಿದೆ,(ಏಜೆನ್ಸೀಸ್).