ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
- ಪಾಕಿಸ್ತಾನದಲ್ಲಿ ನಡೆದ ಮಾತುಕತೆಗಳು ವಿಫಲ
- ಭಾರೀ ಮುಖಭಂಗ ಬೆನ್ನಲ್ಲೇ ಇರಾನ್ಗೆ ತಕ್ಕ ಪಾಠ ಕಲಿಸಲು ಅಮೆರಿಕ ಸಜ್ಜು
Trump: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ಕಡೆಗೂ ವಿಫಲವಾಗಿವೆ. ಕದನ ವಿರಾಮ ಘೋಷಿಸಿದ್ದೇ ಆದರೂ ಯಾವುದೇ ಪ್ರಯೋಜನಗಳಿಲ್ಲ ಎನ್ನುವಂತಾಗಿದೆ. ಕಾರಣ, ಎರಡೂ ಕಡೆಯಿಂದ ಪರಸ್ಪರ ದಾಳಿಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಇದು ಸಮರದ ಕಾರ್ಮೋಡ ಕವಿದಿದೆ ಎಂಬುದನ್ನು ಒತ್ತಿ ಹೇಳುತ್ತಿವೆ. ತನ್ನ ಮಾತೇ ನಡೆಯಬೇಕು ಎನ್ನುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ನ ಸರ್ವಾಧಿಕಾರದ ನಡೆಗಳಿಗೆ ಇರಾನ್ ಬಗ್ಗದಿರುವುದೇ ಇದೀಗ ಮಾತುಕತೆಗಳು ವಿಫಲವಾಗಲ ಮುಖ್ಯ ಕಾರಣ.
ತಮ್ಮ ಮಾತು ನಡೆಯಲಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿಕೊಂಡ ಬೆನ್ನಲ್ಲೇ ಅಮೆರಿಕದ ನಿಯೋಗಗಳು ಯಾವುದೇ ಒಪ್ಪಂದವಿಲ್ಲದೆ ಪಾಕಿಸ್ತಾನವನ್ನು ತೊರೆದಿದೆ. ಮಾತುಕತೆಗಳು ವಿಫಲ ಎಂದು ತಿಳಿಯುತ್ತಿದ್ದಂತೆ ಕೆಂಡಾಮಂಡಲಗೊಂಡಿರುವ ಟ್ರಂಪ್, ಇರಾನ್ಗೆ ಬೆದರಿಕೆಗಳನ್ನು ಹಾಕಿದ್ದಾರೆ. ಒಪ್ಪಲು ಹಿಂದೇಟು ಹಾಕಿದರೆ, ಖಂಡಿತ ಇರಾನ್ ಅನ್ನು ಶಿಲಾಯುಗಕ್ಕೆ ಕಳುಹಿಸುವುದು ಖಚಿತ. ಸಮುದ್ರ ಮಾರ್ಗಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದ್ದೇವೆ. ಅಷ್ಟೇ ಏಕೆ, ನೌಕಾ ದಿಗ್ಬಂಧನ ಆಯುಧವನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವೆನೆಜುವೆಲಾದ ಅಧ್ಯಕ್ಷನನ್ನು ಅವರ ನಾಡಿನಿಂದಲೇ ಹೊತ್ತುಕೊಂಡು ಬಂದ ಸಂದರ್ಭದಲ್ಲಿ ಟ್ರಂಪ್ ಬಳಸಿದ ನೌಕಾ ದಿಗ್ಬಂಧನ ಅಸ್ತ್ರವು ಯಶಸ್ವಿಯಾಯಿತು. ಅದೇ ತಂತ್ರವನ್ನು ಈಗ ಇರಾನ್ ವಿರುದ್ಧ ಜಾರಿಗೆ ತಂದರೆ, ದೇಶದ ಪ್ರಮುಖ ಆದಾಯದ ಮೂಲವಾದ ತೈಲ ರಫ್ತು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಇದು ಇರಾನ್‌ನಿಂದ ತೈಲ ಖರೀದಿಸುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ದೊಡ್ಡ ಮಟ್ಟದ ಒತ್ತಡವನ್ನು ಹೆಚ್ಚಿಸಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಪ್ರಸ್ತುತ, ಪರ್ಷಿಯನ್ ಕೊಲ್ಲಿಯಲ್ಲಿ ತನ್ನ ನೌಕಾ ಪಡೆಗಳನ್ನು ಹೆಚ್ಚಾಗಿ ನಿಯೋಜಿಸಿರುವ ಅಮೆರಿಕ, ವೆನೆಜುವೆಲಾದ ದಿಗ್ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುಎಸ್ಎಸ್ ಜೆರಾಲ್ಡ್ ಫೋರ್ಡ್ ಯುದ್ಧನೌಕೆ ದುರಸ್ತಿಯ ನಂತರ ಸ್ಥಳಕ್ಕೆ ಮರಳಿದೆ. ಇದನ್ನು ಈಗ 'ಯುಎಸ್ಎಸ್ ಅಬ್ರಹಾಂ ಲಿಂಕನ್' ಜೊತೆಗೆ ಇರಾನ್ ಬಳಿ ನಿಯೋಜಿಸಲಾಗಿದೆ. ರೆಬೆಕ್ಕಾ ಗ್ರಾಂಟ್ ಪ್ರಕಾರ, ಹೊರ್ಮುಜ್ ಜಲಸಂಧಿ ಮೇಲೆ ಯುಎಸ್ ನೌಕಾಪಡೆಯು ಸಂಪೂರ್ಣ ನಿಯಂತ್ರಣ ಸಾಧಿಸುವುದು ಈಗ ತುಂಬಾ ಸುಲಭ. ಯುಎಸ್ ಕಣ್ಗಾವಲು ಹೆಚ್ಚಿಸಿದರೆ, ಓಮನ್ ಅಥವಾ ಖಾರ್ಗ್ ದ್ವೀಪದ ಕಡೆಗೆ ಹೋಗುವ ಯಾವುದೇ ಹಡಗು ಯುಎಸ್ ಮಿಲಿಟರಿಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಮತ್ತೊಂದೆಡೆ, ನಿವೃತ್ತ ಜನರಲ್ ಜ್ಯಾಕ್ ಕೀನ್ ಬಹುಮುಖ್ಯ ಸಲಹೆಗಳನ್ನು ನೀಡಿದ್ದಾರೆ. ಯುದ್ಧ ಮುಂದುವರಿದರೆ, ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ 'ಖಾರ್ಗ್ ದ್ವೀಪ'ವನ್ನು ಅಮೆರಿಕ ದಾಳಿ ಮಾಡಬೇಕು ಅಥವಾ ವಶಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈಗಲೇ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತೈಲದ ಬಿಕ್ಕಟ್ಟು ಜನರನ್ನು ಭಾರೀ ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಿರುವಾಗಲೇ, ಯುದ್ಧ ಮುಂದುವರಿದರೆ ಖಂಡಿತ ಮುಂದಿನ ದಿನಗಳಲ್ಲಿ ತೈಲ, ಇಂಧನ ಮತ್ತು ಇನ್ನುಳಿದ ಹಲವು ವಸ್ತುಗಳ ಬೆಲೆಗಳು ದುಬಾರಿ ಆಗುತ್ತವೆ,(ಏಜೆನ್ಸೀಸ್).