Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಹಾರ್ಮುಜ್ ನೌಕಾ ದಿಗ್ಬಂಧನ ತೆರವುಗೊಳಿಸಲು ಟ್ರಂಪ್ ಮುನ್ಸೂಚನೆ; ಇರಾನ್ ಜೊತೆ ಶಾಂತಿ ಒಪ್ಪಂದಕ್ಕೆ ಬಿಡುಗಡೆಯಾಯ್ತು ಕಠಿಣ ಷರತ್ತುಗಳ ಪಟ್ಟಿ! | Donald Trump

Donald Trump: ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಸಂಘರ್ಷಕ್ಕೆ ಪೂರ್ಣವಿರಾಮ ಇಟ್ಟು, ಶಾಂತಿ ಒಪ್ಪಂದವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ ಮಹತ್ತರ ಹೆಜ್ಜೆಯನ್ನಿಟ್ಟಿದ್ದು, ಇರಾನ್ ಬಂದರುಗಳನ್ನು ತಲುಪದಂತೆ ವಾಣಿಜ್ಯ ಹಡಗುಗಳನ್ನು ತಡೆದಿದ್ದ ಅಮೆರಿಕಾದ ಬೃಹತ್ ನೌಕಾ ದಿಗ್ಬಂಧನವನ್ನು (Naval Blockade) ತೆರವುಗೊಳಿಸುವ ಮುನ್ಸೂಚನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಅಧಿಕೃತವಾಗಿ ನೀಡಿದ್ದಾರೆ.
ಶಾಂತಿ ಮಾತುಕತೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಈ ಸಂಭಾವ್ಯ ಒಪ್ಪಂದವು ಅಂತಿಮಗೊಳ್ಳಲು ಇರಾನ್ ಕಡ್ಡಾಯವಾಗಿ ಪೂರೈಸಲೇಬೇಕಾದ ಅತ್ಯಂತ ಕಠಿಣ ಷರತ್ತುಗಳ ಅಧಿಕೃತ ಪಟ್ಟಿಯೊಂದನ್ನು ಸಹ ಇದೇ ವೇಳೆ ಅಧ್ಯಕ್ಷ ಟ್ರಂಪ್ ಬಿಡುಗಡೆ ಮಾಡಿದ್ದಾರೆ.
ತಮ್ಮ ಟ್ರುತ್ ಸೋಶಿಯಲ್ (Truth Social) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್​, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಅಥವಾ ಬಾಂಬ್ ಹೊಂದುವುದಿಲ್ಲ ಎಂಬುದಕ್ಕೆ ಒಪ್ಪಿಕೊಳ್ಳಬೇಕು. ಹಾರ್ಮುಜ್ ಜಲಸಂಧಿಯು ಯಾವುದೇ ಸುಂಕವಿಲ್ಲದೆ, ಮುಕ್ತ ಹಡಗು ಸಂಚಾರಕ್ಕಾಗಿ ಎರಡೂ ದಿಕ್ಕುಗಳಲ್ಲಿ ತಕ್ಷಣವೇ ಮುಕ್ತವಾಗಬೇಕು. ನೀರಿನಲ್ಲಿರುವ ಎಲ್ಲಾ ಮೈನ್‌ಗಳನ್ನು (ಬಾಂಬ್‌ಗಳು) ನಾಶಪಡಿಸಲಾಗುವುದು (ನಮ್ಮ ಶ್ರೇಷ್ಠ ಅಂಡರ್‌ವಾಟರ್ ಮೈನ್ ಸ್ವೀಪರ್‌ಗಳ ಮೂಲಕ ನಾವು ಈಗಾಗಲೇ ಅಂತಹ ಹಲವಾರು ಮೈನ್‌ಗಳನ್ನು ಸ್ಫೋಟಿಸಿ ತೆರವುಗೊಳಿಸಿದ್ದೇವೆ) ಎಂದು ಟ್ರಂಪ್ ಬರೆದಿದ್ದಾರೆ.

ನಿಮ್ಮ ಹೆಂಡತಿಯರಿಗೆ ನನ್ನ ಕಡೆಯಿಂದ ಹಲೋ ಹೇಳಿ!

ಇನ್ನುಳಿದಿರುವ ಕೆಲವೇ ಕೆಲವು ಮೈನ್‌ಗಳನ್ನು ಇರಾನ್ ತಕ್ಷಣವೇ ಸಂಪೂರ್ಣವಾಗಿ ತೆರವುಗೊಳಿಸಬೇಕು ಅಥವಾ ಸ್ಫೋಟಿಸಬೇಕು. ನಮ್ಮ ಅದ್ಭುತ ನೌಕಾ ದಿಗ್ಬಂಧನದಿಂದಾಗಿ ಜಲಸಂಧಿಯಲ್ಲಿ ಸಿಲುಕಿಕೊಂಡಿರುವ ಹಡಗುಗಳ ದಿಗ್ಬಂಧನವನ್ನು ಈಗ ತೆರವುಗೊಳಿಸಲಾಗುತ್ತಿದ್ದು, ಅವು ಮನೆಗೆ ಮರಳುವ ಪ್ರಕ್ರಿಯೆಯನ್ನು ಆರಂಭಿಸಬಹುದು. ನಿಮ್ಮ ನೆಚ್ಚಿನ ಅಧ್ಯಕ್ಷನ ಪರವಾಗಿ ನಿಮ್ಮ ಹೆಂಡತಿ, ಗಂಡ, ಪೋಷಕರು ಮತ್ತು ಕುಟುಂಬದವರಿಗೆ ಹಲೋ ಹೇಳಿ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇರಾನ್‌ನ ಭೂಗತ ಪರಮಾಣು ಸಾಮಗ್ರಿ ಹೊರತೆಗೆಯಲು
ಟ್ರಂಪ್​​ರ ಇಡೀ ಹೇಳಿಕೆಯಲ್ಲಿ ಅತ್ಯಂತ ಮಹತ್ವದ ವಿಷಯವೆಂದರೆ, ಇರಾನ್‌ನ ಭೂಗರ್ಭದಲ್ಲಿ ಆಳವಾಗಿ ಹೂತುಹೋಗಿದೆ ಎನ್ನಲಾದ ಪರಮಾಣು ಸಾಮಗ್ರಿಗಳ ಮೇಲಿನ ನಿಯಂತ್ರಣ. ಈ ಹಿಂದೆ ಬಿ-2 ಸ್ಪಿರಿಟ್ ಬಾಂಬರ್ (B-2 Spirit Bombers) ಯುದ್ಧ ವಿಮಾನಗಳ ಮೂಲಕ ನಡೆಸಲಾದ ಭೀಕರ ದಾಳಿಯಿಂದ ಧ್ವಂಸಗೊಂಡಿರುವ ಪರ್ವತಗಳ ಅಡಿಯಲ್ಲಿ ದೊಡ್ಡ ಮಟ್ಟದ ಸಮೃದ್ಧ ಪರಮಾಣು ಸಾಮಗ್ರಿಗಳು (Nuclear Dust) ಇವೆ ಎಂದು ಟ್ರಂಪ್ ಉಲ್ಲೇಖಿಸಿದ್ದಾರೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಮತ್ತು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಸಂಪೂರ್ಣ ಸಮನ್ವಯದೊಂದಿಗೆ, ಅಮೆರಿಕಾವೇ ಖುದ್ದಾಗಿ ಈ ಪರಮಾಣು ಸಾಮಗ್ರಿಗಳನ್ನು ಭೂಮಿಯಿಂದ ಹೊರತೆಗೆಯುವ ಮತ್ತು ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಪ್ರಕ್ರಿಯೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಮುಂದಿನ ಸೂಚನೆ ಬರುವವರೆಗೆ ಈ ಒಪ್ಪಂದಕ್ಕಾಗಿ ಯಾವುದೇ ರೀತಿಯ ಹಣದ ವಿನಿಮಯ ನಡೆಯುವುದಿಲ್ಲ ಎಂದು ಟ್ರಂಪ್ ಖಡಕ್ ಆಗಿ ಹೇಳಿದ್ದಾರೆ.
ಕೊನೆಯಲ್ಲಿ, ಈ ಎಲ್ಲಾ ವಿಷಯಗಳ ಕುರಿತು ಅಂತಿಮ ತೀರ್ಮಾನಗಳನ್ನು ತೆಗೆದುಕೊಳ್ಳಲು ತಾನು ವೈಟ್ ಹೌಸ್‌ನ ಅತ್ಯಂತ ಸುರಕ್ಷಿತ ಸಿಚುಯೇಶನ್ ರೂಮ್​​ಗೆ (Situation Room) ತೆರಳುತ್ತಿರುವುದಾಗಿ ತಿಳಿಸುವ ಮೂಲಕ ಮಾತುಕತೆ ಅತ್ಯಂತ ಕ್ರಾಂತಿಕಾರಿ ಹಂತ ತಲುಪಿರುವುದನ್ನು ಟ್ರಂಪ್ ಖಚಿತಪಡಿಸಿದ್ದಾರೆ(ಏಜೆನ್ಸೀಸ್​​).