ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​  
ವಿದೇಶ

ಸ್ಮಾರ್ಟ್ ಅಧ್ಯಕ್ಷರು ಇರುವಾಗ ಎಐಗೆ ಕಡಿವಾಣ ಹಾಕೋ ಅಗತ್ಯವೇನಿಲ್ಲ! ಟ್ರಂಪ್ ಹೇಳಿಕೆ ವೈರಲ್​ | Donald Trump

ಪ್ರಮುಖ ಮುಖ್ಯಾಂಶಗಳು

  • ಕೃತಕ ಬುದ್ಧಿಮತ್ತೆಯ ವೇಗದ ಬೆಳವಣಿಗೆ ಹತೋಟಿಗೆ ತರುವ ಕುರಿತು ಆ್ಯಂಥ್ರೊಪಿಕ್ ಸಿಇಒ ಹೇಳಿಕೆ
  • ಸಿಇಒ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ಕೊಟ್ಟ ಅಮೆರಿಕ ಅಧ್ಯಕ್ಷ
  • ಬುದ್ಧಿವಂತ, ಚಾಣಕ್ಷ ಅಧ್ಯಕ್ಷರು ಇರುವಾಗ, ಅದಕ್ಕೆಲ್ಲ ಭಯಪಡುವ ಅಗತ್ಯವಿಲ್ಲ ಎಂದು ಓಪನ್ ಹೇಳಿಕೆ
ವಾಷಿಂಗ್ಟನ್​: ಕೆಲವು ದಿನಗಳ ಹಿಂದೆಯಷ್ಟೇ ಆ್ಯಂಥ್ರೊಪಿಕ್ ಸಿಇಒ ಡೇರಿಯೊ ಅಮೋಡೆ ಅವರು ವೇಗವಾಗಿ ಬೆಳೆಯುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಜಗತ್ತಿಗೆ ಬ್ರೇಕ್​ ಹಾಕುವುದು ತೀರ ಅನಿವಾರ್ಯ ಎಂದು ಕರೆ ನೀಡಿದರು. ಈ ಹೇಳಿಕೆಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಎಐ ಬೆಳವಣಿಗೆಯನ್ನು ಮಂದಗತಿಯಲ್ಲಿ ಸಾಗುವಂತೆ ಮಾಡುವುದರಿಂದ ಟೆಕ್ನಾಲಜಿ ಓಟದಲ್ಲಿ ಚೀನಾಕ್ಕೆ ಅನುಕೂಲವನ್ನು ನೀಡಿದಂತಾಗುತ್ತದೆ. ಇಂತಹ ತಂತ್ರಜ್ಞಾನಕ್ಕೆ ಅಗತ್ಯವಿರುವ ರಕ್ಷಣೆಯನ್ನು ಒಬ್ಬ ಚಾಣಕ್ಕೆ, ಬುದ್ಧಿವಂತ ಅಧ್ಯಕ್ಷರು ಮಾತ್ರ ಒದಗಿಸಬಲ್ಲರು ಎಂದು ಪರೋಕ್ಷವಾಗಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಇದು ಕೆಲವರಿಗೆ ಹಾಸ್ಯಸ್ಪದ ಅನಿಸಿದರೂ ಏನು ಹೇಳಲು ಸಾಧ್ಯವಿಲ್ಲ ಎನ್ನುವಂತೆ ಮಾಡಿದೆ.
ಏಕೈಕ ಕಂಟ್ರೋಲ್​ ಅಥವಾ ಎಐಗೆ ದೃಢವಾದ, ಬುದ್ಧಿವಂತ ಅಧ್ಯಕ್ಷರ ಅಗತ್ಯವಿದೆ. ಅಮೆರಿಕದಲ್ಲಿ ಇದಕ್ಕೆ ಯಾವುದೇ ತೊಂದರೆಯಿಲ್ಲ. ಯಾರು ಎಐ ಎಂಬ ಆಧುನಿಕ ಟೆಕ್ನಾಲಜಿಯ ಜತೆ ಸಾಗುತ್ತಾರೋ, ಅವರು ಗೆಲ್ಲುತ್ತಾರೆ. ಪ್ರಸ್ತುತ, ಚೀನಾ ಸೇರಿದಂತೆ ಇತರೆ ದೇಶಗಳಿಗಿಂತ ಅಮೆರಿಕ ಮುಂಚೂಣಿಯಲಿದ್ದು, ಮುಂದೆಯೂ ಹೀಗೆ ಮುಂದುವರಿಯಲಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ.

ಅಷ್ಟಕ್ಕೂ ಏನಿದು ಟಕ್ಕರ್​ ವರಸೆ?

ಎಐ ಅಭಿವೃದ್ಧಿಯ ಮೇಲೆ ನಿಯಂತ್ರಣಗಳು ಮತ್ತು ಮುನ್ನೆಚ್ಚರಿಕೆಗಳ ಅಗತ್ಯವಿದೆ ಎಂಬ ವಾದದ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ಕಾಮೆಂಟ್‌ಗಳು ಮುನ್ನೆಲೆಗೆ ಬಂದಿವೆ. ಆ್ಯಂಥ್ರೊಪಿಕ್‌ನ ಸಿಇಒ ಡಾರಿಯೊ ಅಮೋಡೆ ಅವರು ಇತ್ತೀಚೆಗೆ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯನ್ನು ನಿಧಾನಗೊಳಿಸಲು ಎಐ ಕಂಪನಿಗಳಿಗೆ ಕರೆ ನೀಡಿದರು. ಎಐನಿಂದ ಉಂಟಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಟ್ರಂಪ್​ ಈ ರೀತಿ ತಮ್ಮ ಶೈಲಿಯಲ್ಲೇ ಹೇಳಿಕೆ ನೀಡಿದ್ದಾರೆ,(ಏಜೆನ್ಸೀಸ್).