ವಾಷಿಂಗ್ಟನ್ ಡಿ.ಸಿ: ಅಮೆರಿಕ ಮತ್ತು ಕ್ಯೂಬಾ ನಡುವಿನ ದಶಕಗಳ ಕಾಲದ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರದಂದು(ಜ.30) ಕ್ಯೂಬಾ ವಿರುದ್ಧದ ಆರ್ಥಿಕ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ 'ರಾಷ್ಟ್ರೀಯ ತುರ್ತು ಪರಿಸ್ಥಿತಿ' (National Emergency) ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಕ್ಯೂಬಾ ದೇಶಕ್ಕೆ ತೈಲ ಪೂರೈಸುವ ರಾಷ್ಟ್ರಗಳ ಮೇಲೆ ಭಾರಿ ಪ್ರಮಾಣದ ಸುಂಕ (Tariffs) ಹೇರಲು ಈ ಆದೇಶವು ಇದೀಗ ದಾರಿ ಮಾಡಿಕೊಟ್ಟಿದೆ.
ಅಧ್ಯಕ್ಷ ಟ್ರಂಪ್ ಸಹಿ ಮಾಡಿರುವ ಈ ಕಾರ್ಯಕಾರಿ ಆದೇಶದ ಪ್ರಕಾರ, ಕ್ಯೂಬಾ ದೇಶಕ್ಕೆ ತೈಲ ಮಾರಾಟ ಮಾಡುವ ಅಥವಾ ಯಾವುದೇ ರೀತಿಯಲ್ಲಿ ತೈಲ ಪೂರೈಕೆಗೆ ನೆರವು ನೀಡುವ ದೇಶಗಳ ಮೇಲೆ ಅಮೆರಿಕವು ಆರ್ಥಿಕ ದಾಳಿ ನಡೆಸಲಿದೆ. "ಕ್ಯೂಬಾದ ಸರ್ವಾಧಿಕಾರಿ ಆಡಳಿತಕ್ಕೆ ಆಧಾರವಾಗಿರುವ ತೈಲ ಪೂರೈಕೆಯ ಮೂಲಗಳನ್ನು ಕತ್ತರಿಸುವುದು ನಮ್ಮ ಉದ್ದೇಶ," ಎಂದು ಶ್ವೇತಭವನ ತಿಳಿಸಿದೆ.
ಈ ಆದೇಶವು ಅಮೆರಿಕದ ವಿದೇಶಾಂಗ ಮತ್ತು ವಾಣಿಜ್ಯ ಇಲಾಖೆಗಳಿಗೆ (State and Commerce Secretaries) ವಿಶೇಷ ಅಧಿಕಾರವನ್ನು ನೀಡಿದ್ದು, ಯಾವ ದೇಶಗಳು ಕ್ಯೂಬಾಗೆ ತೈಲ ನೀಡುತ್ತಿವೆಯೋ ಅಂತಹ ದೇಶಗಳ ರಫ್ತು ಸರಕುಗಳ ಮೇಲೆ ದಂಡನಾತ್ಮಕ ಸುಂಕವನ್ನು ವಿಧಿಸುವ ಪ್ರಕ್ರಿಯೆಯನ್ನು ಆರಂಭಿಸಲು ಸೂಚಿಸಲಾಗಿದೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಏಕೆ?
ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಕ್ಯೂಬಾದ ಚಟುವಟಿಕೆಗಳು ಮತ್ತು ಅದಕ್ಕೆ ಬೆಂಬಲ ನೀಡುವ ವಿದೇಶಿ ಶಕ್ತಿಗಳು ಅಪಾಯಕಾರಿಯಾಗಿವೆ ಎಂದು ಟ್ರಂಪ್ ವಾದಿಸಿದ್ದಾರೆ. ಈ ತುರ್ತು ಪರಿಸ್ಥಿತಿಯ ಘೋಷಣೆಯು ಅಧ್ಯಕ್ಷರಿಗೆ ಕಾಂಗ್ರೆಸ್ ಅನುಮೋದನೆ ಇಲ್ಲದೆಯೇ ತಕ್ಷಣದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಆರ್ಥಿಕ ನಿರ್ಬಂಧಗಳನ್ನು ಹೇರಲು ಕಾನೂನಾತ್ಮಕ ಬಲ ನೀಡುತ್ತದೆ.
ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ
ಟ್ರಂಪ್ ಅವರ ಈ ನಿರ್ಧಾರವು ಕೇವಲ ಕ್ಯೂಬಾ ಮಾತ್ರವಲ್ಲದೆ, ಆ ದೇಶದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ರಷ್ಯಾ, ವೆನೆಜುವೆಲಾ ಮತ್ತು ಮೆಕ್ಸಿಕೋದಂತಹ ದೇಶಗಳ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಹೌದು, ಈ ನಿರ್ಬಂಧಗಳಿಂದಾಗಿ ಅಂತರಾಷ್ಟ್ರೀಯ ತೈಲ ಸಾಗಾಣಿಕೆ ಮಾರ್ಗಗಳಲ್ಲಿ ಬದಲಾವಣೆಗಳು ಉಂಟಾಗಬಹುದು. ಅಲ್ಲದೆ, ಅಮೆರಿಕದ ಮಿತ್ರ ರಾಷ್ಟ್ರಗಳೇನಾದರೂ ಕ್ಯೂಬಾ ಜೊತೆ ತೈಲ ವ್ಯವಹಾರ ಹೊಂದಿದ್ದರೆ, ಅದು ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಲಿದೆ. ಕ್ಯೂಬಾದಲ್ಲಿ ಈಗಾಗಲೇ ಇಂಧನ ಕೊರತೆ ಎದುರಾಗಿದ್ದು, ಈ ಹೊಸ ಆದೇಶವು ಆ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಬಹುದು.
ಕ್ಯೂಬಾ ಮತ್ತು ಅಮೆರಿಕದ ಹಳೆ ದ್ವೇಷ
ದಶಕಗಳಿಂದಲೂ ಕ್ಯೂಬಾದ ಕಮ್ಯುನಿಸ್ಟ್ ಆಡಳಿತವನ್ನು ಅಮೆರಿಕ ವಿರೋಧಿಸುತ್ತಾ ಬಂದಿದೆ. ಟ್ರಂಪ್ ಅವರ ಈ ನಡೆ "ಕ್ಯೂಬಾವನ್ನು ಜಾಗತಿಕವಾಗಿ ಏಕಾಂಗಿ ಮಾಡುವ" ಪ್ರಯತ್ನದ ಭಾಗವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. "ಕ್ಯೂಬಾದಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಮತ್ತು ಆ ದೇಶದ ಮಿಲಿಟರಿಗೆ ತೈಲದ ಮೂಲಕ ಹಣ ಹರಿಯುವುದನ್ನು ನಾವು ತಡೆಯಲೇಬೇಕು," ಎಂದು ಟ್ರಂಪ್ ಕಿಡಿ ಕಾರಿದ್ದಾರೆ,(ಏಜೆನ್ಸೀಸ್).