Donald Trump Buffalo | ಬಾಂಗ್ಲಾದ ಫಾರ್ಮ್‌ನಲ್ಲಿ ಅಮೆರಿಕ ಅಧ್ಯಕ್ಷರನ್ನೇ ಹೋಲುವ ಎಮ್ಮೆ ಪತ್ತೆ
Donald Trump Buffalo: ಈದ್ ಅಲ್-ಅಧಾ (ಬಕ್ರೀದ್) ಹಬ್ಬಕ್ಕೆ ಬಾಂಗ್ಲಾದೇಶ ಸಜ್ಜಾಗುತ್ತಿರುವ ಬೆನ್ನಲ್ಲೇ, ಅಲ್ಲಿನ ಎರಡು ಎಮ್ಮೆಗಳು ಭಾರೀ ಸದ್ದು ಮಾಡುತ್ತಿವೆ. ಇವು ಕೇವಲ ತಮ್ಮ ಬೃಹತ್ ಗಾತ್ರದಿಂದಷ್ಟೇ ಅಲ್ಲದೆ, ಜಾಗತಿಕ ರಾಜಕೀಯ ನಾಯಕರಾದ ಡೊನಾಲ್ಡ್ ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹುರನ್ನು ಹೋಲುತ್ತವೆ ಎಂಬ ಕಾರಣಕ್ಕೆ ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಢಾಕಾ ಬಳಿಯ ಫಾರ್ಮ್‌ಗಳಲ್ಲಿರುವ ಈ ಪ್ರಾಣಿಗಳನ್ನು ನೋಡಲು, ಸೆಲ್ಫಿ ತೆಗೆದುಕೊಳ್ಳಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.
ದಿ ಇಂಡಿಪೆಂಡೆಂಟ್ ವರದಿಯ ಪ್ರಕಾರ, ಸುಮಾರು 700 ಕೆಜಿ ತೂಕವಿರುವ ಒಂದು ಎಮ್ಮೆಗೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿದೆ. ಇದರ ಬಿಳಿ ಚರ್ಮ ಮತ್ತು ತಿಳಿ ಬಣ್ಣದ ಕೂದಲು ಅಮೆರಿಕ ಅಧ್ಯಕ್ಷರ ಐಕಾನಿಕ್ ಹೇರ್‌ಸ್ಟೈಲ್ ಅನ್ನು ನೆನಪಿಸುತ್ತದೆ ಎಂದು ಭೇಟಿ ನೀಡುವ ಪ್ರವಾಸಿಗರು ಹೇಳುತ್ತಿದ್ದಾರೆ. ಬಾಂಗ್ಲಾದೇಶದ ಪ್ರಥಮ್ ಅಲೋ ಪತ್ರಿಕೆಯೊಂದಿಗೆ ಮಾತನಾಡಿದ ಸಂದರ್ಶಕರೊಬ್ಬರು, ಈ ಎಮ್ಮೆ ನೋಡಲು ಟ್ರಂಪ್ ತರಹವೇ ಇದ್ದರೂ, ಇದರ ಸ್ವಭಾವ ಮಾತ್ರ ತುಂಬಾ ಶಾಂತ ಮತ್ತು ಸೌಮ್ಯವಾಗಿದೆ ಎಂದು ತಮಾಷೆ ಮಾಡಿದ್ದಾರೆ.
ಟ್ರಂಪ್ ಹೆಸರಿಡಲು ಕಾರಣವೇನು..?
ಎಮ್ಮೆಯ ಮಾಲೀಕ ಜಿಯಾವುದ್ದೀನ್ ಮೃಧಾ ಸ್ಥಳೀಯ ಮಾಧ್ಯಮ ದಿ ಬಿಸಿನೆಸ್ ಸ್ಟ್ಯಾಂಡರ್ಡ್ ಜೊತೆ ಮಾತನಾಡಿದ್ದು, ಈ ಎಮ್ಮೆಯ ವಿಭಿನ್ನ ರೂಪವನ್ನು ನೋಡಿ ತಮ್ಮ ಕಿರಿಯ ಸಹೋದರ ಈ ಹೆಸರನ್ನು ಇಟ್ಟಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ಇಂತಹ ಅಲ್ಬಿನೋ (ಬಿಳಿ) ಎಮ್ಮೆಗಳು ಕೆಣಕದ ಹೊರತು ಸಾಮಾನ್ಯವಾಗಿ ಶಾಂತವಾಗಿರುತ್ತವೆ ಎಂದು ಹೇಳಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಈ ಎಮ್ಮೆ ಈಗಾಗಲೇ ಮಾರಾಟವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಮತ್ತೊಂದೆಡೆ, ನಾರಾಯಣಗಂಜ್‌ನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೆಸರಿಡಲಾದ ಮತ್ತೊಂದು ಎಮ್ಮೆ ವೈರಲ್ ಆಗಿದೆ. ಆದರೆ, ಟ್ರಂಪ್ ಎಂಬ ಎಮ್ಮೆಗೆ ಹೋಲಿಸುವುದಾದರೆ, ಈ ಎಮ್ಮೆ ಅತ್ಯಂತ ಆಕ್ರಮಣಕಾರಿ ಸ್ವಭಾವವನ್ನು ಹೊಂದಿದ್ದು, 750 ಕೆಜಿಗಿಂತ ಹೆಚ್ಚು ತೂಕವಿರುವ ಈ ಎಮ್ಮೆ ಸದಾ ಘರ್ಜಿಸುತ್ತಾ, ಮಾಲೀಕರ ಮೇಲೆಯೇ ಮುಗಿಬೀಳುತ್ತದೆ. ಫಾರ್ಮ್ ಮ್ಯಾನೇಜರ್ ಒಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ, ಈ ಎಮ್ಮೆ ತುಂಬಾ ತುಂಟದಾಗಿದ್ದು, ವಿಚಿತ್ರವಾದ ಕಪಟ ಬುದ್ಧಿವಂತಿಕೆಯನ್ನು ಹೊಂದಿದೆ ಎಂದು ಬಣ್ಣಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ, ಈ ಎರಡು ಎಮ್ಮೆಗಳು ಬಾಂಗ್ಲಾದೇಶದಾದ್ಯಂತ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿವೆ. ಫಾರ್ಮ್‌ಗಳಿಗೆ ಜನರು ಲಗ್ಗೆ ಇಡುತ್ತಿದ್ದರೆ, ಇಂಟರ್ನೆಟ್ ಬಳಕೆದಾರರು ಈ ಎಮ್ಮೆಗಳು ಜಾಗತಿಕ ನಾಯಕರನ್ನು ಹೋಲುತ್ತಿರುವುದು ಕೇವಲ ಕಾಕತಾಳೀಯವೋ ಅಥವಾ ನಿಜಕ್ಕೂ ಹಾಗೆಯೇ ಇವೆಯೋ ಎಂದು ತರಹೇವಾರಿ ಚರ್ಚೆ ನಡೆಸುತ್ತಿದ್ದಾರೆ(ಏಜೆನ್ಸೀಸ್).