ನಟೋರಿಯಸ್​ ದಾವೂದ್ ಇಬ್ರಾಹಿಂ ಬಗ್ಗೆ ಧುರಂಧರ್‌ನಲ್ಲಿ ತೋರಿಸಿರುವುದು ನಿಜವೇ? ಇಲ್ಲಿದೆ ರೋಚಕ ಸಂಗತಿ... Dawood Ibrahim 
ವಿದೇಶ

ನಟೋರಿಯಸ್​ ದಾವೂದ್ ಇಬ್ರಾಹಿಂ ಬಗ್ಗೆ ಧುರಂಧರ್‌ನಲ್ಲಿ ತೋರಿಸಿರುವುದು ನಿಜವೇ? ಇಲ್ಲಿದೆ ರೋಚಕ ಸಂಗತಿ... Dawood Ibrahim

ಪ್ರಮುಖ ಮುಖ್ಯಾಂಶಗಳು

  • ನಟೋರಿಯಸ್​ ದಾವೂದ್ ಇಬ್ರಾಹಿಂ ಬಗ್ಗೆ ಭಾರತೀಯರಿಗೆ ಪರಿಚಯಿಸುವ ಅಗತ್ಯವಿಲ್ಲ
  • ಭಾರತದಲ್ಲೇ ಹುಟ್ಟಿ ಬೆಳೆದ ಈತ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ
  • 1990ರ ದಶಕದಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ
  • ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಐಎಸ್ಐ ಮತ್ತು ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿದ್ದಾನೆ
Dawood Ibrahim : ನಟೋರಿಯಸ್​ ದಾವೂದ್ ಇಬ್ರಾಹಿಂ ಬಗ್ಗೆ ಭಾರತೀಯರಿಗೆ ಪರಿಚಯಿಸುವ ಅಗತ್ಯವಿಲ್ಲ. ಭಾರತದಲ್ಲೇ ಹುಟ್ಟಿ ಬೆಳೆದ ಈತ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ. 1990ರ ದಶಕದಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್ ಆಗಿದ್ದ. ಈ ಘಟನೆಯ ಬಳಿಕ ಈತ ತನ್ನ ನಿವಾಸವನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸಿದ. ಅಲ್ಲಿಂದಲೇ ತನ್ನ "ಡಿ-ಗ್ಯಾಂಗ್" ಅನ್ನು ನಿರ್ವಹಿಸುತ್ತಿದ್ದಾನೆ. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಐಎಸ್ಐ ಮತ್ತು ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿದ್ದಾನೆ.
ಸದ್ಯ ಬಾಲಿವುಡ್​ನಲ್ಲಿ ಧುರಂಧರ್ 2​ ಸಿನಿಮಾದ ಚರ್ಚೆ ಜೋರಾಗಿದೆ. ದೊಡ್ಡ ತಾರಾಗಣ ಹಾಗೂ ಭರ್ಜರಿ ಬಜೆಟ್‌ನೊಂದಿಗೆ ನಿರ್ದೇಶಕ ಆದಿತ್ಯ ಧರ್​ ನಿರ್ದಶಿಸಿರುವ ಧುರಂಧರ್​ ಪಾರ್ಟ್​ 1 ಮತ್ತು ಪಾರ್ಟ್​ 2 ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಮೊದಲ ಭಾಗದ ಯಶಸ್ಸಿನ ಬೆನ್ನಲ್ಲೇ ಮಾರ್ಚ್​ 19ರಂದು ಬಿಡುಗಡೆಯಾದ ಧುರಂಧರ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ವಿಶ್ವದಾದ್ಯಂತ 1400 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿರುವ ಧುರಂಧರ್​ 2 ಕೆಜಿಎಫ್​ ಮತ್ತು ಆರ್​ಆರ್​ಆರ್​ ಸಿನಿಮಾಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ.
ಈ ಸಿನಿಮಾದಲ್ಲಿ ವಾಸ್ತವ ಮತ್ತು ಕಾಲ್ಪನಿಕತೆಯನ್ನು ಬಹಳ ಸೊಗಸಾಗಿ ಮಿಶ್ರಣ ಮಾಡಲಾಗಿದೆ. ನೈಜ ಘಟನೆಗಳು ಹಾಗೂ ನಿಜ ಜೀವನದ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು ಎಣೆಯಲಾಗಿರುವ ಚಿತ್ರಕತೆ ನೋಡುಗರಿಗೆ ಸಖತ್ ಥ್ರಿಲ್​ ನೀಡುತ್ತಿದೆ. ಈ ಚಿತ್ರದ ಪ್ರತಿಯೊಂದು ಪಾತ್ರಗಳು ಭಾರಿ ಚರ್ಚೆಯಾಗುತ್ತಿದೆ. ಅದರಲ್ಲಿ ಬಡೇ ಸಾಬ್​ ಪಾತ್ರವು ಒಂದು. ಈ ಪಾತ್ರ ದಾವೂದ್ ಇಬ್ರಾಹಿಂನ ಮರುಸೃಷ್ಟಿಯಾಗಿದೆ. ಧುರಂಧರ್​ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಮತ್ತೊಮ್ಮೆ ದಾವೂದ್​ ಇಬ್ರಾಹಿಂ ಚರ್ಚೆ ಮುನ್ನೆಲೆಗೆ ಬಂದಿದೆ.
ಮೂಲಗಳ ಪ್ರಕಾರ, ದಾವೂದ್ ಕರಾಚಿಯ ಅತ್ಯಂತ ಸುರಕ್ಷಿತ ಮತ್ತು ಐಷಾರಾಮಿ ಪ್ರದೇಶವಾದ 13 ಕ್ಲಿಫ್ಟನ್ ರಸ್ತೆಯಲ್ಲಿ ವಾಸಿಸುತ್ತಿದ್ದಾನೆ ಎಂಬ ಮಾಹಿತಿ ನಮ್ಮ ಗುಪ್ತಚರ ಸಂಸ್ಥೆಗಳಿಗೆ ಇದೆ. ಧುರಂಧರ್ ಚಿತ್ರದಲ್ಲೂ ದಾವೂದ್ ಮನೆಯನ್ನು ವೈಟ್ ಹೌಸ್, 13 ಕ್ಲಿಫ್ಟನ್ ರಸ್ತೆ, ಕರಾಚಿ ಎಂದು ಗುರುತಿಸಲಾಗಿದೆ. ಮಾಫಿಯಾ ಡಾನ್ ಈ ಮನೆಯಲ್ಲಿಯೇ ಇರುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ನಿಜವಾಗಿಯೂ ದಾವೂದ್​ ಕರಾಚಿಯಲ್ಲಿದ್ದಾನಾ?

ಕ್ಲಿಫ್ಟನ್‌ ರಸ್ತೆಯಲ್ಲಿರುವ ವೈಟ್ ಹೌಸ್ 13, ಸೌದಿ ಮಸೀದಿಯ ಬಳಿ ಇದೆ. ಅಲ್ಲಿಂದ ಕ್ಲಿಫ್ಟನ್ ಬೀಚ್ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಕ್ಲಿಫ್ಟನ್ ಕರಾಚಿಯ ಅತ್ಯಂತ ಶ್ರೀಮಂತ ಪ್ರದೇಶವಾಗಿದೆ. ಈ ಪ್ರದೇಶವು ಪಾಕಿಸ್ತಾನಿ ಸೇನಾ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳಿಗೆ ನೆಲೆಯಾಗಿದೆ. ಇದು ಕರಾಚಿಯ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಪ್ರದೇಶವಾಗಿದೆ. ಅನೇಕ ವಿದೇಶಿ ಕಾನ್ಸುಲೇಟ್‌ಗಳು ಇಲ್ಲಿವೆ. ಕರಾಚಿಯ ಪ್ರಮುಖ ವಾಣಿಜ್ಯ ಕೇಂದ್ರಗಳು ಈ ಪ್ರದೇಶದಲ್ಲಿವೆ. ದಾವೂದ್ ಇಬ್ರಾಹಿಂ ಈ ಪ್ರದೇಶದಲ್ಲಿ ಇದ್ದಾನೆ ಎಂದು ಹಲವರು ನಂಬಿದ್ದಾರೆ. ಆದಾಗ್ಯೂ, ಕರಾಚಿಯ ಅತ್ಯಂತ ಐಷಾರಾಮಿ ವಸಾಹತುಗಳಲ್ಲಿ ಒಂದಾದ ಡಿಫೆನ್ಸ್ ಹೌಸಿಂಗ್ ಏರಿಯಾ (DHA)ದ 5ನೇ ಹಂತದಲ್ಲಿ ದಾವೂದ್ ಇಬ್ರಾಹಿಂ ಮನೆ ಹೊಂದಿದ್ದಾನೆ ಎಂದು ನಂಬಲಾಗಿದೆ. ಭಾರತೀಯ ಗುಪ್ತಚರ ಸಂಸ್ಥೆಗಳು ಸಹ ದಾವೂದ್ ಈ ಎರಡು ಪ್ರದೇಶಗಳಲ್ಲಿ ವಾಸಿಸುತ್ತಾನೆ ಎಂದು ನಂಬಿವೆ.
ಆದಾಗ್ಯೂ, 2024ರ ಸಂಡೇ ಗಾರ್ಡಿಯನ್ ವರದಿಯ ಪ್ರಕಾರ, ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ತನ್ನ ಸಹೋದರ ಅನೀಸ್ ಇಬ್ರಾಹಿಂ ಜೊತೆ ಕರಾಚಿಯ ಖಯ್ಯುಮಾಬಾದ್‌ನ ಸೆಕ್ಟರ್ ಬಿ-ಹಂತ 5ರ ಬೀದಿ ಸಂಖ್ಯೆ 30 ರಲ್ಲಿರುವ ಎರಡು ಪ್ರತ್ಯೇಕ ವಿಲ್ಲಾಗಳಲ್ಲಿ ವಾಸಿಸುತ್ತಿದ್ದಾನೆ. ತನ್ನ ಕುಟುಂಬ ಬಳಸುತ್ತಿರುವ ಎರಡು ವಿಲ್ಲಾಗಳು ಮನೆ ಸಂಖ್ಯೆ 20 ಮತ್ತು 21 ಆಗಿದ್ದು, ಅವು ಚೀನೀ ಕಾನ್ಸುಲೇಟ್‌ನಿಂದ ಕೇವಲ 700 ಮೀಟರ್ ದೂರದಲ್ಲಿವೆ ಎಂದು ಹೇಳಲಾಗಿದೆ.
ಅಂದಹಾಗೆ, 1992ರ ಮುಂಬೈ ದಾಳಿಯ ನಂತರ ಭಾರತದಿಂದ ಪಲಾಯನ ಮಾಡಿದ ದಾವೂದ್ ಇಬ್ರಾಹಿಂ, ಕರಾಚಿಯ ಖಯ್ಯುಮಾಬಾದ್‌ನಲ್ಲಿ ವಾಸಿಸುತ್ತಿದ್ದಾನೆ ಎಂದು ಹೇಳಲಾಗಿದೆ. ದಾವೂದ್ ತನ್ನ ಮನೆಯಿಂದ ವಿರಳವಾಗಿ ಹೊರಗೆ ಹೋಗುತ್ತಾನೆ ಮತ್ತು ಯಾವಾಗಲೂ ಸಶಸ್ತ್ರ ಭದ್ರತಾ ಪಡೆಗಳ ರಕ್ಷಣೆಯಲ್ಲಿರುತ್ತಾನೆ ಎಂದು ವರದಿ ಹೇಳುತ್ತದೆ. ದಾವೂದ್ ಸ್ವತಃ ಕರೆ ಮಾಡದ ಹೊರತು ಅವನ ಸ್ವಂತ ಕುಟುಂಬ ಸದಸ್ಯರಿಗೂ ಅವನ ಕೋಣೆಗೆ ಪ್ರವೇಶಿಸಲು ಅವಕಾಶವಿಲ್ಲ. ವೈದ್ಯಕೀಯ ಅಗತ್ಯವಿದ್ದಾಗ ಮಾತ್ರ ಆತ ಹೊರಗೆ ಹೋಗುತ್ತಾನೆ ಎಂದು ವರದಿಗಳು ಹೇಳುತ್ತವೆ, (ಏಜೆನ್ಸೀಸ್​).