ದೊಡ್ಡಣ್ಣನ ದ್ವಂದ್ವ ನೀತಿ ಬಯಲು! ರಷ್ಯಾ ತೈಲಕ್ಕಾಗಿ ಭಾರತದ ಮುಂದೆ ಯುಎಸ್ ಮಂಡಿಯೂರಿದ್ದೇಕೆ? ಇರಾನ್ ವಿದೇಶಾಂಗ ಸಚಿವ ಸ್ಫೋಟಕ ಹೇಳಿಕೆ!
ಟೆಹ್ರಾನ್: ಜಾಗತಿಕ ರಾಜತಾಂತ್ರಿಕತೆಯಲ್ಲಿ ಅವಶ್ಯಕತೆ ಎಂಬುದು ಎಂತಹ ವಿಪರ್ಯಾಸಗಳನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಈಗ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ. ರಷ್ಯಾದ ತೈಲವನ್ನು ಯಾರೂ ಖರೀದಿಸಬಾರದು ಎಂದು ಈ ಹಿಂದೆ ಭಾರತದ ಮೇಲೆ ಒತ್ತಡ ಹೇರಿದ್ದ ಅಮೆರಿಕ, ಈಗ ಅದೇ ರಷ್ಯಾ ತೈಲವನ್ನು ಖರೀದಿಸುವಂತೆ ಜಗತ್ತಿಗೆ ಬೇಡಿಕೊಳ್ಳುತ್ತಿದೆ.! ಯುಎಸ್ನ ಈ ಇಬ್ಬಂದಿ ನೀತಿಯನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ(Abbas Araghchi) ತೀವ್ರವಾಗಿ ಟೀಕಿಸಿದ್ದಾರೆ.
ಅಮೆರಿಕದ ತೈಲ ರಾಜತಾಂತ್ರಿಕತೆ ಮತ್ತು ಇರಾನ್ ಆಕ್ರೋಶ
ಈ ಬಗ್ಗೆ ಶನಿವಾರ Xನಲ್ಲಿ ಪೋಸ್ಟ್ ಮಾಡಿರುವ ಅರಾಗ್ಚಿ, ಅಮೆರಿಕದ ನಡೆಯನ್ನು ಹಾಸ್ಯಾಸ್ಪದ ಎಂದು ಕರೆದಿದ್ದಾರೆ. ರಷ್ಯಾ ತೈಲವನ್ನು ಖರೀದಿಸಬೇಡಿ ಎಂದು ತಿಂಗಳುಗಟ್ಟಲೆ ಭಾರತದ ಮೇಲೆ ಒತ್ತಡ ಹೇರಿದ ವಾಷಿಂಗ್ಟನ್, ಈಗ ಅದೇ ತೈಲವನ್ನು ಮಾರುಕಟ್ಟೆಗೆ ಬಿಡಲು ಪರವಾನಗಿ ನೀಡುತ್ತಿದೆ. ಇದು ಅಮೆರಿಕದ ಅಸಲಿ ಮುಖ ಎಂದು ಕಿಡಿಕಾರಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ. ಇದರಿಂದ ಕಂಗೆಟ್ಟಿರುವ ಟ್ರಂಪ್ ಆಡಳಿತವು, ಸಮುದ್ರದಲ್ಲಿ ಸಿಲುಕಿರುವ ರಷ್ಯಾದ ತೈಲ ಹಡಗುಗಳನ್ನು ಖರೀದಿಸಲು 30 ದಿನಗಳ ಕಾಲ ರಿಯಾಯಿತಿ ಘೋಷಿಸಿದೆ.
ಯುರೋಪ್ ವಿರುದ್ಧವೂ ಇರಾನ್ ವಾಗ್ದಾಳಿ
ಇರಾನ್ ವಿರುದ್ಧದ ಅಕ್ರಮ ಯುದ್ಧಕ್ಕೆ ಬೆಂಬಲ ನೀಡುತ್ತಿರುವ ಯುರೋಪಿಯನ್ ರಾಷ್ಟ್ರಗಳನ್ನು ಅರಾಗ್ಚಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಷ್ಯಾ ವಿರುದ್ಧ ಅಮೆರಿಕದ ಬೆಂಬಲ ಪಡೆಯಲು ಯುರೋಪ್ ಇರಾನ್ ವಿರುದ್ಧದ ಯುದ್ಧವನ್ನು ಬೆಂಬಲಿಸುತ್ತಿದೆ. ಇದು ಅತ್ಯಂತ ದಯನೀಯ ಸ್ಥಿತಿ ಎಂದು ಹೇಳಿದ್ದಾರೆ. ರಷ್ಯಾ ತೈಲದ ಮೇಲಿನ ನಿರ್ಬಂಧ ಸಡಿಲಿಕೆಯು ವಾಸ್ತವವಾಗಿ ರಷ್ಯಾದ ಆದಾಯವನ್ನು ಹೆಚ್ಚಿಸುತ್ತಿದೆ ಎಂಬ ಹಣಕಾಸು ಪತ್ರಿಕೆಯ ವರದಿಯನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಬಂದ್: ತತ್ತರಿಸಿದ ಜಗತ್ತು
ವಿಶ್ವದ ಅತಿ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಅಮೆರಿಕಕ್ಕೆ ಈಗ ರಷ್ಯಾದ ತೈಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಅಮೆರಿಕದ ಖಜಾನೆ ಇಲಾಖೆಯ ಪ್ರಕಾರ, ಮಾರ್ಚ್ 12ರೊಳಗೆ ಹಡಗುಗಳಿಗೆ ತುಂಬಲಾದ ರಷ್ಯಾದ ಕಚ್ಚಾ ತೈಲವನ್ನು ಏಪ್ರಿಲ್ 11ರವರೆಗೆ ಮಾರಾಟ ಮಾಡಲು ಮತ್ತು ವಿತರಿಸಲು ತಾತ್ಕಾಲಿಕ ಪರವಾನಗಿ ನೀಡಲಾಗಿದೆ.
ಭಾರತಕ್ಕೆ ಇರಾನ್‌ನಿಂದ ವಿಶೇಷ ರಿಯಾಯಿತಿ
ಇಷ್ಟೆಲ್ಲಾ ಸಂಘರ್ಷದ ನಡುವೆಯೂ ಭಾರತ ಮತ್ತು ಇರಾನ್ ನಡುವಿನ ಸ್ನೇಹ ಸಂಬಂಧ ಗಟ್ಟಿಯಾಗಿ ಉಳಿದಿದೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರೂ ಸಹ, ಭಾರತದ ಧ್ವಜವಿರುವ ಎರಡು ಎಲ್‌ಪಿಜಿ ಹಡಗುಗಳಿಗೆ ಸುರಕ್ಷಿತವಾಗಿ ಸಾಗಲು ಇರಾನ್ ಅವಕಾಶ ಮಾಡಿಕೊಟ್ಟಿದೆ.
ಭಾರತಕ್ಕೆ ಇರಾನ್ ರಾಯಭಾರಿ ಮೊಹಮ್ಮದ್ ಫತ್ಹಾಲಿ ಈ ಬಗ್ಗೆ ಪ್ರತಿಕ್ರಿಯಿಸಿ, ಭಾರತ ಮತ್ತು ಇರಾನ್ ಆತ್ಮೀಯ ಗೆಳೆಯರು. ನಮ್ಮ ಹಿತಾಸಕ್ತಿಗಳು ಮತ್ತು ಭವಿಷ್ಯ ಒಂದೇ ಆಗಿದೆ. ಭಾರತದ ಹಡಗುಗಳಿಗೆ ಯಾವುದೇ ಅಡ್ಡಿಯಿಲ್ಲದೆ ಸಂಚರಿಸಲು ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಭಾರತಕ್ಕೆ ಬರಬೇಕಾದ ಹಡಗುಗಳಿಗೆ ಕೇವಲ 2-3 ಗಂಟೆಗಳಲ್ಲಿ ಕ್ಲಿಯರೆನ್ಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮಾರುಕಟ್ಟೆ ಸ್ಥಿರತೆಗೆ ಅಮೆರಿಕದ ಕಸರತ್ತು
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಈ ಕ್ರಮವು ಕೇವಲ ತಾತ್ಕಾಲಿಕ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ರಷ್ಯಾಕ್ಕೆ ಹಣಕಾಸಿನ ಲಾಭ ಮಾಡಿಕೊಡುವ ಉದ್ದೇಶ ಹೊಂದಿಲ್ಲ, ಬದಲಿಗೆ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ಸ್ಥಿರಗೊಳಿಸಲು ತೆಗೆದುಕೊಂಡ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ, ಮಧ್ಯಪ್ರಾಚ್ಯದ ಯುದ್ಧವು ಜಾಗತಿಕ ರಾಜಕೀಯದ ಸಮೀಕರಣಗಳನ್ನು ಬದಲಿಸುತ್ತಿದೆ. ನಿನ್ನೆವರೆಗೆ ರಷ್ಯಾವನ್ನು ಏಕಾಂಗಿ ಮಾಡಲು ಹೊರಟಿದ್ದ ಅಮೆರಿಕ, ಇಂದು ತನ್ನದೇ ಆರ್ಥಿಕತೆಯನ್ನು ಉಳಿಸಿಕೊಳ್ಳಲು ರಷ್ಯಾದ ತೈಲದ ಮೊರೆ ಹೋಗಿರುವುದು ದೊಡ್ಡ ವಿಪರ್ಯಾಸವೇ ಸರಿ,(ಏಜೆನ್ಸೀಸ್).