ಮೂತ್ರಕೋಶದಲ್ಲಿತ್ತು 3.1 ಕೆಜಿಯ ಕಲ್ಲು
- ಹೊಟ್ಟೆ ನೋವೆಂದು ಬಂದ ರೋಗಿಗೆ ಕಾದಿತ್ತು ಬಿಗ್ ಶಾಕ್
- ರೋಗಿಯ ಮೂತ್ರಕೋಶದಲ್ಲಿತ್ತು 3.1 ಕೆಜಿ ತೂಕದ ಬೃಹತ್ ಕಲ್ಲು
- ರೋಗಿಯ ಜೀವ ಉಳಿಸಿ ಹೊಸ ದಾಖಲೆ ಬರೆದ ವೈದ್ಯರ ತಂಡ
Urinary Bladder Stone: ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬರ ಮೂತ್ರಕೋಶದಲ್ಲಿ ಬರೋಬ್ಬರಿ 3.1 ಕೆಜಿಯ ಭಾರಿ ಕಲ್ಲನ್ನು ಹೊರತೆಗೆದ ವೈದ್ಯರು ಒಂದು ನಿಮಿಷ ಅಕ್ಷರಶಃ ಬೆರಗಾಗಿ ಹೋದರು. ಕಾರಣ, ಇಡೀ ಜಗತ್ತಿನಲ್ಲೇ ಇಲ್ಲಿಯವರೆಗೆ ಯಾರೊಬ್ಬರ ಬ್ಲಾಡರ್ನಲ್ಲಿಯೂ ಇಷ್ಟು ದೊಡ್ಡ ಗಾತ್ರದ ಕಲ್ಲು ಪತ್ತೆಯಾಗಿಲ್ಲ ಎನ್ನಲಾಗಿದೆ.
ಶ್ರೀಲಂಕಾದ ಟ್ರಿಂಕೋಮಲಿಯಲ್ಲಿ 55 ವರ್ಷದ ರೋಗಿಯೊಬ್ಬರಿಗೆ ಪಾರ್ಶ್ವವಾಯು ಸಮಸ್ಯೆ ಕಾಣಿಸಿಕೊಂಡ ಬೆನ್ನಲ್ಲೇ ವಿಪರೀತ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪರೀಕ್ಷೆಯಲ್ಲಿ, ವ್ಯಕ್ತಿಯ ಮೂತ್ರಕೋಶ ಊದಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣವೇ ಸ್ಕ್ಯಾನಿಂಗ್ ಮಾಡಿ, ಅಲ್ಲಿ ಕಲ್ಲು ಇರುವುದನ್ನು ದೃಢಪಡಿಸಿಕೊಂಡರು. ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ, ವೈದ್ಯರ ತಂಡವು ರೋಗಿಯ ಬ್ಲಾಡರ್ನಿಂದ ಹೊರತೆಗೆದಿದ್ದು ಬರೋಬ್ಬರಿ 3.1 ಕೆಜಿ ತೂಕದ ಕಲ್ಲನ್ನು.
ವರದಿಯ ಪ್ರಕಾರ, ಇಲ್ಲಿಯವರೆಗೆ ವಿಶ್ವದಲ್ಲಿ ಕಂಡುಬಂದಿರುವ ಅತಿದೊಡ್ಡ ಮೂತ್ರಕೋಶದ ಕಲ್ಲು ಇದಾಗಿದೆ ಎಂದಿದ್ದಾರೆ. ಶಸ್ತ್ರಚಿಕಿತ್ಸೆಯಾದ ಬಳಿಕ ರೋಗಿಯು ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆಯಿಲ್ಲ ಎಂದು ಯುರಾಲಜಿಸ್ಟ್ ಡಾ. ಪ್ರಗಲಾಧನ್ ಬಾಲಕೃಷ್ಣನ್ ತಿಳಿಸಿದ್ದಾರೆ. ವೈದ್ಯರು ಹೊರತೆಗೆದ ಆಸ್ಟ್ರಿಚ್ ಹಕ್ಕಿಯ ಮೊಟ್ಟೆ ಗಾತ್ರದಷ್ಟು ಇರುವ ಈ ಕಲ್ಲಿನ ದೃಶ್ಯ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ನಿಜಕ್ಕೂ ಇದು ಸಾಧ್ಯವೇ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಕಾಮೆಂಟ್ ಬಾಕ್ಸ್ಗಳಲ್ಲಿ ಸುರಿಸಿದ್ದಾರೆ.
ಏನಿದು ಮೂತ್ರಕೋಶದ ಕಲ್ಲು?
ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗದೇ ಇದ್ದಾಗ, ಅಲ್ಲಿಯೇ ಉಳಿಯುವ ಸಾಂದ್ರೀಕೃತ ಮೂತ್ರದಲ್ಲಿರುವ ಖನಿಜಗಳು ಸ್ಪಟಿಕ ಅಂದರೆ ಕಲ್ಲಿನಂತೆ ಗಟ್ಟಿಯಾಗಿ ಬದಲಾಗುತ್ತದೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಕಲ್ಲುಗಳು ಮೂತ್ರದ ಮೂಲಕವೇ ಹರಿದು ಹೊರಹೋಗುತ್ತವೆ. ಆದರೆ, ದೊಡ್ಡ ಕಲ್ಲುಗಳು ಮೂತ್ರ ವಿಸರ್ಜನೆಗೆ ಅಡ್ಡಿಪಡಿಸಿ ತೀವ್ರ ನೋವುಂಟು ಮಾಡುತ್ತವೆ.
ವೈದ್ಯಕೀಯ ಲೋಕದಲ್ಲಿ 4 ಸೆಂಟಿಮೀಟರ್‌ಗಿಂತ ದೊಡ್ಡದಾದ ಕಲ್ಲುಗಳನ್ನು ದೈತ್ಯ ಕಲ್ಲು (Giant Bladder Stone) ಎಂದು ಕರೆಯಲಾಗಿದೆ. ಆದರೆ, ಈ ರೋಗಿಯಲ್ಲಿ ಪತ್ತೆಯಾದ ಕಲ್ಲು ಮಾತ್ರ ಬಿಸಿಯೂಟದ ತಟ್ಟೆಯಷ್ಟು ಅಂದರೆ 17 ಸೆಂಟಿಮೀಟರ್ ಗಾತ್ರದಲ್ಲಿದ್ದು, ಅತ್ಯಂತ ಅಪರೂಪದಲ್ಲೇ ಅಪರೂಪದ ಪ್ರಕರಣ ಎನ್ನಿಸಿಕೊಂಡಿದೆ. ಇದು ವಿಶ್ವದಲ್ಲೇ ಇದುವರೆಗೆ ಯಾರ ಮೂತ್ರಕೋಶದಲ್ಲಿಯೂ ಕಂಡುಬರದ ಅತಿ ಹೆಚ್ಚು ತೂಕದ ಕಲ್ಲು ಎಂಬ ದಾಖಲೆಗೂ ಸಾಕ್ಷಿಯಾಗಿದೆ,(ಏಜೆನ್ಸೀಸ್).