- ಪ್ರಸ್ತುತ, ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94 ರೂ.
- ಈ ತೈಲ ಸಮೃದ್ಧಿ ರಾಷ್ಟ್ರಗಳಲ್ಲಿ ಇಂಧನ ಬೆಲೆ ಅಗ್ಗದಲ್ಲಿ ಲಭ್ಯ
- ಯಾವ ದೇಶಗಳು ಈ ಪಟ್ಟಿಯಲ್ಲಿವೆ? ಲೀಟರ್‌ಗೆ ಎಷ್ಟು ಎಂಬುದರ ವಿವರ ಇಲ್ಲಿದೆ ನೋಡಿ
Cheapest Petrol: ಇವತ್ತು ಕೆಲಸಕ್ಕೆ ಹೋಗಬೇಕಲ್ಲ ಎಂದು ಬೇಸರದಿಂದಲೇ ಬೆಳಗ್ಗೆ ಎದ್ದೇಳುವ ಜನರು, ತಮ್ಮ ತಮ್ಮ ವಾಹನಗಳಿಗೆ ಇಂಧನ ತುಂಬಿಸಿ, ಆ ಬಿಗಿ ಟ್ರಾಫಿಕ್ ಮಧ್ಯೆ ಗಂಟೆಗಳ ಕಾಲ ಕಾದು ಆಫೀಸು ಸೇರಿದಂತೆ ಇತರೆ ಕೆಲಸಗಳಿಗೆ ಹೋಗ್ತಾರೆ. ಬರುವ ಸಂಪಾದನೆ ಅಥವಾ ಸಂಬಳದಲ್ಲಿ ಬಹುತೇಕ ಖರ್ಚು ಗಾಡಿಯ ಇಂಧನಕ್ಕೆ ಕಳೆಯುವ ಮಂದಿ, ಬೇರೆ ಬೆಲೆಗಳಂತೆ ಏಕೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ ಕಾಣೋದಿಲ್ಲ. ಅದರಿಂದ ನಮಗೇಕೆ ರಿಲೀಫ್ ಇಲ್ಲ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ತಮ್ಮಲ್ಲೇ ಹಾಕಿಕೊಳ್ಳುತ್ತ, ಆಯಾ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾರೆ. ಪ್ರಸ್ತುತ, ಈ ದೇಶಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಎಂಬುದನ್ನು ನೀವು ತಿಳಿದ್ರೆ ಖಂಡಿತ ನಿಮ್ಮ ಹುಬ್ಬೇರೋದು ಖಚಿತ.
ಇಂಧನ ದರಕ್ಕೆ ಬಿಸಿ
ಕಳೆದ ದಶಕದಲ್ಲಿ ಪ್ರಪಂಚದಾದ್ಯಂತ ಪೆಟ್ರೋಲ್ ಬೆಲೆಗಳು ಗಗನಕ್ಕೇರಿವೆ. ಅದು ಬಹುತೇಕರಿಗೆ ಗೊತ್ತೇ ಇರುವ ಸಂಗತಿ. ಸಂಪನ್ಮೂಲಗಳ ಕ್ಷೀಣತೆ, ಮಧ್ಯಪ್ರಾಚ್ಯ ದೇಶಗಳಲ್ಲಿನ ಸಂಘರ್ಷಗಳು, ರಷ್ಯಾ-ಉಕ್ರೇನ್ ಯುದ್ಧ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆ ಸೇರಿ ಹಲವಾರು ಕಾರಣಗಳಿಂದಾಗಿ ಇಂಧನ ಬೆಲೆ ದುಪ್ಪಟ್ಟಾಗಿವೆ. ಇದು ನಮ್ಮ ದೇಶದ ಮೇಲೂ ದೊಡ್ಡ ಪರಿಣಾಮ ಬೀರಿದ್ದು, ಜನರ ಜೇಬಿಗೆ ಕತ್ತರಿ ಹಾಕಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ.
ವಿಶ್ವದಲ್ಲೇ ಅತಿ ಹೆಚ್ಚು ಪೆಟ್ರೋಲ್ ದರವನ್ನು ಹೊಂದಿರುವ ದೇಶಗಳಲ್ಲಿ ಭಾರತವು ಒಂದು. ಪ್ರಸ್ತುತ, ಲೀಟರ್ ಪೆಟ್ರೋಲ್ ದರವು ದೆಹಲಿಯಲ್ಲಿ 94.77 ರೂ. ಇದೆ. ಈ ಬೆಲೆಯು ಆಯಾ ರಾಜ್ಯಗಳಲ್ಲಿ ಸ್ಥಳೀಯ ಟ್ಯಾಕ್ಸ್ ಮತ್ತು ವ್ಯಾಟ್ನಿಂದ ಬದಲಾಗುತ್ತದೆ. ಆದರೆ, ಇದೇ ಹಲವಾರು ತೈಲ ಸಮೃದ್ಧ ದೇಶಗಳಲ್ಲಿ ಇಂದಿಗೂ ಪೆಟ್ರೋಲ್ ಬೆಲೆ ಬಹಳ ಕಡಿಮೆ ದರದಲ್ಲಿ ಲಭಿಸುತ್ತಿವೆ. ಯಾವ ರಾಷ್ಟ್ರಗಳು ಈ ಸಾಲಿನಲ್ಲಿದೆ ಎಂಬ ಅಚ್ಚರಿ ಸಂಗತಿ ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ ಮಾಹಿತಿ.
ಯಾವ ದೇಶಗಳಲ್ಲಿ ಅಗ್ಗದ ಪೆಟ್ರೋಲ್ ಬೆಲೆ?
ಜಾಗತಿಕ ಪೆಟ್ರೋಲ್ ಬೆಲೆಯ ಪ್ರಕಾರ, ಲಿಬಿಯಾ ಮತ್ತು ಇರಾನ್ ವಿಶ್ವದಲ್ಲೇ ಅಗ್ಗದ ಪೆಟ್ರೋಲ್ ಬೆಲೆಯನ್ನು ಹೊಂದಿವೆ. ಈ ದರಗಳು ಲೀಟರ್‌ಗೆ ಕೇವಲ 2.15 ರೂ.ನಿಂದ 3 ರೂ.ವರೆಗೆ ಇವೆ. ವಿಶ್ವದ ಅಗ್ಗದ ಪೆಟ್ರೋಲ್ ಬೆಲೆಗಳಲ್ಲಿ ಲಿಬಿಯಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಲೀಟರ್‌ಗೆ ಕೇವಲ 0.024 ಡಾಲರ್ಗೆ ( ಅಂದರೆ ಸುಮಾರು 2.15 ರೂ.) ಮಾರಾಟ ಮಾಡಲಾಗುತ್ತದೆ.
ಇನ್ಯಾವ ದೇಶಗಳಿವೆ ಈ ಪಟ್ಟಿಯಲ್ಲಿ?
ವಿಶ್ವದ ಅಗ್ಗದ ಪೆಟ್ರೋಲ್ ಪಟ್ಟಿಯಲ್ಲಿ ಇರಾನ್ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆಗಳು ಸುಮಾರು 0.029 ಡಾಲರ್ ಇದೆ. ಅಲ್ಲಿಗೆ ಲೀಟರ್‌ಗೆ ಸುಮಾರು 2.51 ರೂ. ಆಗುತ್ತೆ. ಪಾಶ್ಚಿಮಾತ್ಯ ನಿರ್ಬಂಧಗಳು ಹಾಗೂ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್‌ನೊಂದಿಗೆ ನಿರಂತರ ಸಂಘರ್ಷದ ಹೊರತಾಗಿಯೂ, ಇಸ್ಲಾಮಿಕ್ ರಾಷ್ಟ್ರವು ತನ್ನ ನಾಗರಿಕರಿಗೆ ಅಗ್ಗದ ಇಂಧನವನ್ನು ಒದಗಿಸಲು ದೃಢವಾದ ಪೆಟ್ರೋಲ್ ಸಬ್ಸಿಡಿ ನೀತಿಯನ್ನು ನಿರ್ವಹಿಸುತ್ತಿರುವುದು ಗಮನಾರ್ಹ.
ಒಂದು ಕಾಲದಲ್ಲಿ ವಿಶ್ವದ ಅಗ್ಗದ ಪೆಟ್ರೋಲ್ ಉತ್ಪಾದಕ ಎಂದು ಗುರುತಿಸಿಕೊಂಡಿದ್ದ ವೆನೆಜುವೆಲಾ, ಈಗ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆಗಳು ಲೀಟರ್‌ಗೆ 0.035 ಡಾಲರ್ (ಅಂದರೆ 3 ರೂ.) ಲಿಬಿಯಾ, ಇರಾನ್ ಮತ್ತು ವೆನೆಜುವೆಲಾ ಹೊರತುಪಡಿಸಿ, ಕುವೈತ್ ಮತ್ತು ಅಂಗೋಲಾ ಸಹ ತನ್ನ ನಾಗರಿಕರಿಗೆ ಕಡಿಮೆ ದರದಲ್ಲಿ ಪೆಟ್ರೋಲ್ ಅನ್ನು ನೀಡುತ್ತವೆ. ಅಂಗೋಲಾದಲ್ಲಿ, ಪೆಟ್ರೋಲ್ ಲೀಟರ್‌ಗೆ ಸುಮಾರು 0.33 ಡಾಲರ್ (27 ರೂಪಾಯಿ) ಇದೆ,(ಏಜೆನ್ಸೀಸ್).