ರಕ್ತ ಬಣ್ಣದಲ್ಲಿ ಹರಿಯುವ ಜಲಪಾತ  
ವಿದೇಶ

ಅಂಟಾರ್ಕ್ಟಿಕಾದಲ್ಲಿ ರಕ್ತ ಜಲಪಾತ! ಪ್ರಕೃತಿಯ ಈ ನಿಗೂಢ ವಿದ್ಯಮಾನದ ಹಿಂದಿದೆ ವೈಜ್ಞಾನಿಕ ಸತ್ಯ

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಅತ್ಯಂತ ಶೀತಲ ಖಂಡ ಅಂಟಾರ್ಕ್ಟಿಕಾ
  • ಪ್ರಕೃತಿಯ ವಿಸ್ಮಯ ಈ ಕೆಂಪು ಬಣ್ಣದಲ್ಲಿ ಹರಿಯುವ ಜಲಪಾತ
  • ಈ ಬಣ್ಣದ ಹಿಂದಿರುವ ಕಾರಣವೇನು ಎಂಬ ಪ್ರಶ್ನೆಗೆ ಹೀಗಿದೆ ಉತ್ತರ
Antarctica Waterfall: ವಿಶ್ವದ ಅತ್ಯಂತ ಶೀತಲ ಖಂಡ ಎಂದೇ ಗುರುತಿಸಿಕೊಂಡಿರುವ ಅಂಟಾರ್ಕ್ಟಿಕಾ ಪ್ರದೇಶವು ಸದಾ ದೈತ್ಯ, ಗಟ್ಟಿಯಾದ ಮಂಜುಗಡ್ಡೆಗಳಿಂದ ಆವೃತವಾಗಿರುತ್ತದೆ. ಈ ಜಾಗದಲ್ಲಿ ಎತ್ತ ತಿರುಗಿ ನೋಡಿದರೂ ಬಿಳಿ ಬಣ್ಣ ಬಿಟ್ಟರೆ, ಅಲ್ಲಲ್ಲಿ ಹಸಿರು ಮತ್ತು ನೀಲಿ ಬಣ್ಣಗಳು ಕಾಣಿಸಬಹುದು. ಆದರೆ, ಇಲ್ಲಿನ ಒಂದು ಜಲಪಾತವು ಕೆಂಪು ಬಣ್ಣದಲ್ಲಿ ಹರಿಯುವುದು ಸದ್ಯ ನೋಡುಗರನ್ನು ಭಾರಿ ಅಚ್ಚರಿಗೆ ದೂಡಿದ್ದು, ಇದೇನಾ ಪ್ರಕೃತಿಯ ವಿಸ್ಮಯ ಎನ್ನುವಂತೆ ಮಾಡಿದೆ.
ಶತಮಾನಗಳಿಂದ ಜನರನ್ನು ಇಂದಿಗೂ ಬೆಂಬಿಡದೆ ಕಾಡುತ್ತಿರುವ ಒಂದೇ ಒಂದು ಪ್ರಶ್ನೆ ಎಂದರೆ, ಇಷ್ಟು ತಣ್ಣನೆಯ ವಾತಾವರಣ ಇರುವಾಗ, ನೀಲಿ, ಬಿಳಿ ಅಥವಾ ಹಸಿರು ಬಣ್ಣದಲ್ಲಿ ಹರಿಯಬೇಕಾದ ನದಿಯೊಂದು ಕೆಂಪು ಕೆಂಪಾಗಿ ಹೇಗೆ ಹರಿಯುತ್ತೆ? ಎಂದು. ಆರಂಭದಲ್ಲಿ ಈ ರಕ್ತ ಜಲಪಾತದ ಹಿಂದಿರುವ ನಿಗೂಢತೆ ಬಗ್ಗೆ ಸ್ವತಃ ವಿಜ್ಞಾನಿಗಳಿಗೂ ಕುತೂಹಲ ಹುಟ್ಟಿಕೊಂಡಿತು. ಇದೇ ನಿಟ್ಟಿನಲ್ಲಿ, ಸ್ಪಷ್ಟತೆ ಕಂಡುಕೊಂಡ ವಿಜ್ಞಾನಿಗಳು ಕಡೆಗೂ ಉತ್ತರವನ್ನು ಜನರ ಮುಂದಿಟ್ಟಿದ್ದಾರೆ.

ಅಂಟಾರ್ಕ್ಟಿಕಾದ ಬ್ಲಡ್​ ಫಾಲ್ಸ್​

ಈ ಜಲಪಾತದ ಕೆಳಗೆ ಕೆಂಪು ಬಣ್ಣವು ಸುರಿಯುತ್ತಿರುವಂತೆ ದೂರದಿಂದ ಕಾಣುತ್ತದೆ. ಇದು ಖಂಡದ ಅತ್ಯಂತ ಪ್ರಭಾವಶಾಲಿ ನೈಸರ್ಗಿಕ ಅದ್ಭುತಗಳಲ್ಲಿ ಒಂದು ಎನ್ನಲಾಗಿದೆ. ನೋಡಲು ರಕ್ತದಂತೆ ಕಾಣಿಸುವ ಕಾರಣ ಇದನ್ನು ರಕ್ತ ಜಲಪಾತ ಎಂದು ಕರೆಯಲಾಗುತ್ತದೆ. ನೀರಿನಲ್ಲಿ ಬೆರತು ಹೋಗಿರುವ ಈ ಬಣ್ಣಕ್ಕೆ ಅಸಲಿ ಕಾರಣವೆಂದರೆ ಕಬ್ಬಿಣದಿಂದ ಸಮೃದ್ಧವಾಗಿರುವ ಅತ್ಯಂತ ಉಪ್ಪುಸಹಿತ ನೀರು ಎನ್ನಲಾಗಿದೆ.
ಈ ನೀರು ಮಂಜುಗಡ್ಡೆಯ ಕೆಳಗೆ ಹೊರಬಂದ ತಕ್ಷಣ, ಅದು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸುತ್ತದೆ. ಪರಿಣಾಮವಾಗಿ, ಅದು ಈ ಬಣ್ಣಕ್ಕೆ ತಿರುಗಿಸುತ್ತದೆ. ಹೀಗಾಗಿಯೇ ಜಲಪಾತವು ರಕ್ತದ ಹರಿವಿನಂತೆ ಕೆಂಪು ಬಣ್ಣದಲ್ಲಿ ಕಾಣುತ್ತದೆ. ರಕ್ತ ಜಲಪಾತದ ಮೂಲವು ಟೇಲರ್ ಹಿಮನದಿಯ ಕೆಳಗೆ ಸುಮಾರು 400 ಮೀಟರ್ ಆಳದ ಪ್ರಾಚೀನ ಭೂಗತ ಸರೋವರವಾಗಿದೆ. ಸುಮಾರು 1.5 ಮಿಲಿಯನ್ ವರ್ಷಗಳ ಹಿಂದೆ, ಸಮುದ್ರದ ನೀರು ಮಂಜುಗಡ್ಡೆಯ ಕೆಳಗೆ ಸಿಕ್ಕಿಹಾಕಿಕೊಂಡಿತ್ತು ಎಂದು ವಿವರಿಸಲಾಗಿದೆ.

ವಿಜ್ಞಾನಿಗಳ ಉತ್ತರ

ಕಾಲಕ್ರಮೇಣ ಇದು ಹೆಚ್ಚು ಉಪ್ಪಾಗಿದೆ ಎಂದು ವಿಜ್ಞಾನಿಗಳು ನಂಬುತ್ತಾರೆ. ಹೆಚ್ಚಿನ ಉಪ್ಪಿನ ಅಂಶದಿಂದಾಗಿ, ನೀರು ಹೆಪ್ಪುಗಟ್ಟದೆ ದ್ರವವಾಗಿ ಉಳಿಯುತ್ತದೆ. ಈ ರೀತಿಯ ಜಲಪಾತವನ್ನು ಮೊದಲು 1911ರಲ್ಲಿ ಆಸ್ಟ್ರೇಲಿಯಾದ ಭೂವಿಜ್ಞಾನಿ ಗ್ರಿಫಿತ್ ಟೇಲರ್ ಕಂಡುಹಿಡಿದರು. ಕೆಂಪು ಬಣ್ಣಕ್ಕೆ ಪಾಚಿಗಳು ಕಾರಣ ಎಂದು ಅವರು ಹೇಳಿದ್ದರು. ಆದರೆ, ನಂತರದ ಅಧ್ಯಯನಗಳು ಇದಕ್ಕೆ ವಿರುದ್ಧವಾಗಿ ತೋರಿಸಿ, ಕಬ್ಬಿಣ-ಸಮೃದ್ಧ ಉಪ್ಪುನೀರೇ ಕೆಂಪು ಬಣ್ಣಕ್ಕೆ ಅಸಲಿ ಕಾರಣ ಎಂದು ಬಹಿರಂಗಪಡಿಸಿವೆ.
2017ರಲ್ಲಿ, ಅಲಾಸ್ಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಿಮನದಿಯಲ್ಲಿನ ರಹಸ್ಯ ಮಾರ್ಗಗಳನ್ನು ಗುರುತಿಸಲು ರಾಡಾರ್ ಅನ್ನು ಬಳಸಿದರು. ಉಪ್ಪುನೀರು ಆ ಮಾರ್ಗಗಳ ಮೂಲಕ ಏರುತ್ತದೆ ಮತ್ತು ಕೆಂಪು ನೀರಿನ ಜಲಪಾತಗಳಾಗಿ ಬದಲಾಗುತ್ತವೆ ಎಂಬುದನ್ನು ಕಂಡುಕೊಂಡರು. ಮತ್ತೊಂದು ಪ್ರಮುಖ ಸಂಶೋಧನೆಯನ್ನು ಅಂಟಾರ್ಕ್ಟಿಕ್ ಸೈನ್ಸ್ ಜರ್ನಲ್‌ನಲ್ಲಿ ಬಹಿರಂಗಪಡಿಸಲಾಗಿದೆ. ಹಿಮನದಿಯಲ್ಲಿನ ಸಣ್ಣ ಬಿರುಕುಗಳ ಮೂಲಕ ಉಪ್ಪುನೀರು ಸಾಂದರ್ಭಿಕವಾಗಿ ಸೋರಿಕೆಯಾಗುತ್ತಿದೆ ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಇನ್ನೊಂದು ವಿಷಯವೆಂದರೆ ವಿಜ್ಞಾನಿಗಳು ಸೂರ್ಯನ ಬೆಳಕು ಮತ್ತು ಆಮ್ಲಜನಕವಿಲ್ಲದೆ ಲಕ್ಷಾಂತರ ವರ್ಷಗಳಿಂದ ಉಪ್ಪು ನೀರಿನಲ್ಲಿ ವಾಸಿಸುತ್ತಿರುವ ಸೂಕ್ಷ್ಮಜೀವಿಗಳ ಗುಂಪನ್ನು ಸಹ ಕಂಡುಹಿಡಿದಿದ್ದಾರೆ. ಸೂಕ್ಷ್ಮಜೀವಿಗಳು ದ್ಯುತಿಸಂಶ್ಲೇಷಣೆಯನ್ನು (photosynthesis) ಅವಲಂಬಿಸುವ ಬದಲು ಸಲ್ಫೇಟ್ ಒಳಗೊಂಡ ರಾಸಾಯನಿಕ ಕ್ರಿಯೆಗಳನ್ನು ಬಳಸಿಕೊಂಡು ಬದುಕುವುದು ಆಶ್ಚರ್ಯಕರ ಎನ್ನಲಾಗಿದೆ,(ಏಜೆನ್ಸೀಸ್).