18 ವರ್ಷ ಏರ್ಪೋರ್ಟ್ನಲ್ಲೇ ಬದುಕಿದ ಮೆಹ್ರಾನ್ ಕರಿಮಿ ನಸ್ಸೇರಿ
- 18 ವರ್ಷಗಳ ಕಾಲ ಏರ್ಪೋರ್ಟ್ನಲ್ಲಿ ಜೀವಿಸಿದ ವ್ಯಕ್ತಿಯ ಕಥೆಯಿದು
- ಪಾಸ್‌ಪೋರ್ಟ್, ಮುಖ್ಯ ಡಾಕ್ಯೂಮೆಂಟ್ಗಳು ಮಿಸ್ ಆಗಿದ್ದೇ ಇಷ್ಟಕ್ಕೆಲ್ಲ ಕಾರಣ
- ಅವರ ಬದುಕಿನಿಂದ ಸ್ಪೂರ್ತಿ, ದಿ ಟರ್ಮಿನಲ್ ಸಿನಿಮಾ
Mehran Karimi Nasseri: ದೇಶದಿಂದ ಮತ್ತೊಂದು ದೇಶಕ್ಕೆ ಹಾರಲು ವೀಸಾ, ಪಾಸ್‌ಪೋರ್ಟ್ ಅತ್ಯವಶ್ಯ. ವಿದೇಶದಕ್ಕೆ ಹೋದ ಕ್ಷಣದಿಂದ ಅಲ್ಲಿಂದ ತನ್ನೂರಿಗೆ ಇಳಿಯುವವರೆಗೂ ಇದು ಬಹಳ ಮುಖ್ಯ. ಅಕಸ್ಮಾತ್ ಇದೇನಾದರೂ ಮಿಸ್ ಆದರೆ, ಅಲ್ಲಿಗೆ ಮುಗಿಯಿತು ಕಥೆ! ಜೀವನವೇ ನರಕ ಎನ್ನುವುದಕ್ಕೆ ಇಲ್ಲೊಬ್ಬ ವ್ಯಕ್ತಿಯ 18 ವರ್ಷಗಳ ನರಕಯಾತನೆಯ ಅಸಲಿ ಕಥೆಯೇ ಸಾಕು.
ಏರ್ಪೋರ್ಟ್ ಸಿಬ್ಬಂದಿಗಳೇ ಫ್ಯಾಮಿಲಿ
ಫ್ರಾನ್ಸ್ ವಿಮಾನ ನಿಲ್ದಾಣದಲ್ಲಿ ಒತ್ತೆಯಾಳಾಗಿ 18 ವರ್ಷಗಳ ಕಾಲ ಬದುಕಿದ ಈ ವ್ಯಕ್ತಿಯ ಹೆಸರು ಮೆಹ್ರಾನ್ ಕರಿಮಿ ನಸ್ಸೇರಿ. ಜಗತ್ತನ್ನು ಸುತ್ತುವ ಆಸೆಯಲ್ಲಿದ್ದ ಈತನ ಜೀವನ ಒಂದೇ ಟರ್ಮಿನಲ್‌ನಲ್ಲಿ 18 ವರ್ಷಗಳು ವಿಧಿಯಿಲ್ಲದೇ ಕಳೆಯುವಂತಾಯಿತು. ಏರ್ಪೋರ್ಟ್ನ ಬೆಂಚನ್ನು ಮನೆಯಾಗಿ ಮತ್ತು ಪ್ರಯಾಣಿಕರನ್ನೇ ತನ್ನ ಕುಟುಂಬಸ್ಥರು ಎಂದು ಭಾವಿಸಿ, ಜೀವನವನ್ನು ಕಳೆದ ಕರಿಮಿ ಅವರ ರಿಯಲ್ ಕಹಾನಿ, ಇಡೀ ಹಾಲಿವುಡ್ ಮಂದಿಯನ್ನೇ ಬೆರಗಾಗಿಸಿತು.
ಈ ವ್ಯಕ್ತಿಯ ಜೀವನವನ್ನು ನೋಡಿ ಸ್ಫೂರ್ತಿ ಪಡೆದ ಹಾಲಿವುಡ್ ನಿರ್ದೇಶಕರು, 'ದಿ ಟರ್ಮಿನಲ್' ಎಂಬ ಚಿತ್ರವನ್ನು ಜನರ ಮುಂದಿಟ್ಟರು. ಆಗಲೇ ಇಡೀ ಜಗತ್ತಿಗೆ ಮೆಹ್ರಾನ್ ಅವರ ದುರಂತ ಕಥೆಯ ಬಗ್ಗೆ ಎಳೆ ಎಳೆಯಾಗಿ ಅರ್ಥವಾಗಿದ್ದು. ಪಾಸ್‌ಪೋರ್ಟ್ ಮತ್ತು ಒಂದಷ್ಟು ಮೂಲ ದಾಖಲೆಗಳನ್ನು ಕಳೆದುಕೊಂಡಿದ್ದಕ್ಕೆ, ಒಬ್ಬ ಸಾಮಾನ್ಯ ವ್ಯಕ್ತಿಯು ಏನೆಲ್ಲ ಕಷ್ಟಗಳನ್ನು ಅನುಭವಿಸುವಂತಾಯಿತು ಎಂಬುದನ್ನು ಈ ಸಿನಿಮಾ ಜನರಿಗೆ ಪರಿ ಪರಿಯಾಗಿ ಅರ್ಥ ಮಾಡಿಸುತ್ತೆ.
ದಿ ಟರ್ಮಿನಲ್ ಸಿನಿಮಾ
ಇರಾನ್‌ನ ಮೆಹ್ರಾನ್ ಕರಿಮಿ ನಸ್ಸೇರಿ ಅವರ ಜೀವನವು ವಿಶ್ವದ ಅತ್ಯಂತ ವಿಚಿತ್ರ ಹ್ಯೂಮನ್ ಸ್ಟೋರಿಗಳಲ್ಲಿ ಒಂದಾಗಿದೆ. ಕಳೆದುಹೋದ ಪಾಸ್‌ಪೋರ್ಟ್‌ನಿಂದ ಶುರುವಾದ ಬದುಕಿನ ಒದ್ದಾಟ, ಅವರನ್ನು ಬರೋಬ್ಬರಿ 18 ವರ್ಷಗಳ ಕಾಲ ಪ್ಯಾರಿಸ್‌ನ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದಲ್ಲಿ ಬದುಕು ಕಟ್ಟಿಕೊಳ್ಳುವಂತೆ ನೂಕಿತು. ಯುಕೆ, ನೆದರ್ಲ್ಯಾಂಡ್ಸ್ ಅಂತಹ ದೇಶಗಳು ಅವರನ್ನು ಕರೆದುಕೊಳ್ಳಲು ರಿಜೆಕ್ಟ್ ಮಾಡಿದಾಗ ಕೊನೆಗೆ ಯಾವುದೇ ತಕರಾರು ತೆಗೆಯದೆ ಅವರಿಗೆ ಆಶ್ರಯ ಕೊಟ್ಟಿದ್ದೇ ಫ್ರ್ಯಾನ್ಸ್. ಯಾರೊಬ್ಬರಿಗೂ ಪರಿಚಯವಿಲ್ಲದ ಕರಿಮಿ ಅವರ ಅಸಾಧಾರಣ ಬದುಕು ನಟ ಟಾಮ್ ಹ್ಯಾಂಕ್ಸ್ ನಟಿಸಿದ 'ದಿ ಟರ್ಮಿನಲ್' ಮೂಲಕ ಪ್ರತಿಯೊಬ್ಬರಿಗೂ ತಿಳಿಯುವಂತಾಯಿತು.
ಅಷ್ಟಕ್ಕೂ ಯಾರೀ ವ್ಯಕ್ತಿ?
1945ರಲ್ಲಿ ಇರಾನ್‌ನಲ್ಲಿ ಜನಿಸಿದ ಮೆಹ್ರಾನ್ ಕರಿಮಿ ನಸ್ಸೇರಿ, ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್‌ಗೆ ಹೋದರು. ನಂತರ, ಯುರೋಪ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಪಾಸ್‌ಪೋರ್ಟ್ ಮತ್ತು ಇತರ ಬಹುಮುಖ್ಯ ಡಾಕ್ಯೂಮೆಂಟ್ಗಳು 1988ರಲ್ಲಿ ಕಳೆದುಹೋಯಿತು. ಅವು ಕಳೆದುಹೋಗಿವೆಯೇ ಅಥವಾ ಕದ್ದಿವೆಯೇ ಎಂಬುದರ ಕುರಿತು ವಿಭಿನ್ನ ಕಥೆಗಳಿವೆ. ತಮ್ಮ ಬಳಿ ಮುಖ್ಯ ರೆಕಾರ್ಡ್ಗಳಿಲ್ಲದ ಕಾರಣ, ಅವರು ಕಾನೂನು ಸಂಕಷ್ಟಕ್ಕೂ ಸಿಲುಕಿದರು. ಇದರ ಪರಿಣಾಮವಾಗಿ, ಏರ್ಪೋರ್ಟ್ ಅಧಿಕಾರಿಗಳು ಅವರನ್ನು ಬ್ರಿಟನ್‌ಗೆ ಸೇರಿಸಲು ಒಪ್ಪಲಿಲ್ಲ. ನಂತರ ಫ್ರಾನ್ಸ್‌ಗೆ ಕಳುಹಿಸಲಾಯಿತು. ಅಲ್ಲಿಯೂ ಸರಿಯಾದ ದಾಖಲೆಗಳಿಲ್ಲದ ಕಾರಣ ಅಲ್ಲಿನ ಅಧಿಕಾರಿಗಳು ಅವರನ್ನು ಒಳಗೆ ಸೇರಿಸಿಕೊಳ್ಳಲು ಅನುಮತಿಸಲಿಲ್ಲ. ಕಡೆಗೆ ಪ್ಯಾರಿಸ್ ಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲೇ ಅವರು ಸಿಲುಕುವಂತಾಯಿತು.
ಅದೇ ಏರ್ಪೋರ್ಟ್ನಲ್ಲಿ ಕೊನೆಯುಸಿರು
18 ವರ್ಷಗಳ ಕಾಲ ಏರ್ಪೋರ್ಟ್ನಲ್ಲೇ ತಮ್ಮ ದಿನಗಳನ್ನು ಕಳೆದ ಅವರು, ಸಿನಿಮಾದಿಂದ ಜನಪ್ರಿಯತೆ ಪಡೆದ ಮೇಲೆ, ದಿನಕ್ಕೆ 5ರಿಂದ 6 ಸಂದರ್ಶನಗಳನ್ನು ಕೊಡುತ್ತಿದ್ದರು ಎನ್ನಲಾಗಿದೆ. ಇದರೊಟ್ಟಿಗೆ ಪುಸ್ತಕಗಳನ್ನು ಓದುವುದು, ತಮ್ಮದೇ ಬದುಕಿನ ಕಥೆಗಳನ್ನು ಬರೆಯುವುದು ಮಾಡುತ್ತಿದ್ದರು. 2006ರಲ್ಲಿ ಅನಾರೋಗ್ಯ ಕಾಡಿದ ಹಿನ್ನೆಲೆ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಗುಣಮುಖರಾದ ಬಳಿಕ ಅದೇ ಜಾಗಕ್ಕೆ ಮರಳಿದ ಅವರು, ಎಂದಿನಂತೆ ಸರಳವಾಗಿಯೇ ಜೀವನ ಮಾಡುತ್ತಿದ್ದರು. ಆದರೆ, 2022ರಲ್ಲಿ, ಹೃದಯಾಘಾತಕ್ಕೆ ಕೊನೆಯುಸಿರೆಳೆದರು. ತಮ್ಮ ಜೀವನವನ್ನೇ ಬದಲಾಯಿಸಿದ ಏರ್ಪೋರ್ಟ್ನಲ್ಲೇ ಅವರು ಮೃತಪಟ್ಟಿದ್ದು ನಿಜಕ್ಕೂ ದುರಂತ,(ಏಜೆನ್ಸೀಸ್).