ಸಾಂದರ್ಭಿಕ ಚಿತ್ರ 
ವಿದೇಶ

ಕತಾರ್​​ಗೇಟ್​ ತಲ್ಲಣ! ಇಸ್ರೇಲ್​ ಪ್ರಧಾನಿ ನೆತನ್ಯಾಹು ಆಪ್ತರಿಂದ ಲಂಚ ಸ್ವೀಕಾರ? ರಹಸ್ಯ ಗುಪ್ತಚರ ಮಾಹಿತಿ ಮಾರಾಟ

ಜಗತ್ತನ್ನೇ ಬೆಚ್ಚಿಬೀಳಿಸುವ ಹಗರಣವೊಂದರಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿಕಟವರ್ತಿಗಳು ಕತಾರ್​ನಿಂದ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಜಾಗತಿಕ ರಾಜತಾಂತ್ರಿಕ ರಂಗದಲ್ಲಿ ಕತಾರ್​ನ ವರ್ಚಸ್ಸನ್ನು ಹೆಚ್ಚಿಸುವ ಉದ್ದೇಶದಿಂದ ಇಸ್ರೇಲ್ ಪ್ರಧಾನಮಂತ್ರಿ ಕಾರ್ಯಾಲಯದ (ಪಿಎಂಒ) ಅಧಿಕಾರಿಗಳು ಅತ್ಯಂತ ಸೂಕ್ಷ್ಮ ಗುಪ್ತಚರ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ.

ಜಗತ್ತನ್ನೇ ಬೆಚ್ಚಿಬೀಳಿಸುವ ಹಗರಣವೊಂದರಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿಕಟವರ್ತಿಗಳು ಕತಾರ್​ನಿಂದ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಜಾಗತಿಕ ರಾಜತಾಂತ್ರಿಕ ರಂಗದಲ್ಲಿ ಕತಾರ್​ನ ವರ್ಚಸ್ಸನ್ನು ಹೆಚ್ಚಿಸುವ ಉದ್ದೇಶದಿಂದ ಇಸ್ರೇಲ್ ಪ್ರಧಾನಮಂತ್ರಿ ಕಾರ್ಯಾಲಯದ (ಪಿಎಂಒ) ಅಧಿಕಾರಿಗಳು ಅತ್ಯಂತ ಸೂಕ್ಷ್ಮ ಗುಪ್ತಚರ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ. ಇದರೊಂದಿಗೆ, ವಿಶೇಷ ಕಾರ್ಯಾಚರಣೆಯೊಂದರಲ್ಲಿ ಈಜಿಪ್ತ್ ಅನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೆತನ್ಯಾಹು ಸಲಹೆಗಾರರಾದ ಜೊನಾಥನ್ ಉರಿಚ್ ಮತ್ತು ಎಲಿ ಫೆಲ್ಡ್​ಸ್ಟೀನ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಇದೇನು ಹಗರಣ, ಇದರಿಂದ ಗಾಜಾ ಕದನವಿರಾಮದ ಮೇಲೆ ಏನು ಪರಿಣಾಮವಾಗಲಿದೆ? ಈ ಕುರಿತಾದ ಮಾಹಿತಿ ಇಲ್ಲಿದೆ.

ಇಸ್ರೇಲ್​ನಲ್ಲಿ ದೋಹಾದ (ಕತಾರ್​ನ) ಹಿತಾಸಕ್ತಿಗಳನ್ನು ಉತ್ತೇಜಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಇಬ್ಬರು ಆಪ್ತ ಸಹಾಯಕರು ಕತಾರ್ ಸರ್ಕಾರದಿಂದ ಹಣ ಪಡೆದಿದ್ದಾರೆ ಎಂಬುದು ರಾಜಕೀಯ ಹಾಗೂ ರಾಜತಾಂತ್ರಿಕ ವಲಯದಲ್ಲಿ ಭಾರಿ ಸಂಚಲನ ಹಾಗೂ ತಲ್ಲಣ ಮೂಡಿಸಿದೆ. ನೆತನ್ಯಾಹು ನಿಕಟವರ್ತಿಗಳು ಮತ್ತು ಕತಾರ್ ಸರ್ಕಾರದ ನಡುವಿನ ಸಂಬಂಧಗಳ ಕುರಿತಾದ ಆರೋಪಗಳು 2024ರ ಮಧ್ಯಭಾಗದಿಂದಲೇ ಇಸ್ರೇಲಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹಾಲಿ ಮತ್ತು ಮಾಜಿ ಸೇರಿದಂತೆ ಇಬ್ಬರು ಆಪ್ತ ಸಹಾಯಕರನ್ನು ಬಂಧಿಸಿದ ಬಳಿಕ ಹಾಗೂ ನೆತನ್ಯಾಹು ಅವರನ್ನೂ ವಿಚಾರಣೆಗೆ ಒಳಪಡಿಸಿದ ನಂತರ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್​ನ ಪ್ರಮುಖ ಗುಪ್ತಚರ ಸಂಸ್ಥೆಯಾದ ಶಿನ್ ಬೆಟ್ ಮತ್ತು ಇಸ್ರೇಲ್ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.

2024ರ ಜುಲೈನಲ್ಲಿ ‘ಮಿಡಲ್ ಈಸ್ಟ್ ಮೀಡಿಯಾ ರಿಸರ್ಚ್ ಇನ್​ಸ್ಟಿಟ್ಯೂಟ್’ (ಎಂಇಎಂಆರ್​ಐ), ‘ಪ್ರಾಜೆಕ್ಟ್ ರೇವನ್’ ಎಂಬ ಕಣ್ಗಾವಲು ಉಪಕ್ರಮದಿಂದ ಸೋರಿಕೆಯಾದ ಎರಡು ದಾಖಲೆಗಳನ್ನು ಬಿಡುಗಡೆ ಮಾಡಿತು. ಈ ದಾಖಲೆಗಳು ಲಿಕುಡ್ ಪಕ್ಷಕ್ಕಾಗಿ ಕತಾರ್​ನಿಂದ ನೆತನ್ಯಾಹು ಅವರಿಗೆ ನೇರವಾಗಿ ತಲುಪಿಸಲು ಯೋಜಿಸಲಾಗಿದ್ದ 50 ಮಿಲಿಯನ್ ಡಾಲರ್​ಗಳವರೆಗಿನ ನಗದು ಪಾವತಿಯ ವಿವರಗಳನ್ನು ಹೊಂದಿವೆ ಎಂದು ಆರೋಪಿಸಲಾಗಿದೆ.

ಏನೆಲ್ಲ ನಡೆಯಿತು?

ಆರೋಪಿಗಳು ಗಾಜಾ ಸಂಘರ್ಷದ ಒತ್ತೆಯಾಳುಗಳ ಬಿಡುಗಡೆ ಸಂಧಾನದಲ್ಲಿ ಕತಾರ್ ಅನ್ನು ಪ್ರಮುಖ ಹಾಗೂ ಪ್ರಭಾವಿ ಮಧ್ಯಸ್ಥಿಕೆದಾರನನ್ನಾಗಿ ಬಿಂಬಿಸಲು ಪ್ರಯತ್ನಿಸಿದ್ದರು. ಈ ಜಾಲದಲ್ಲಿ ಮಾಜಿ ಭದ್ರತಾ ಅಧಿಕಾರಿಗಳು ಮತ್ತು ಅಂತಾರಾಷ್ಟ್ರೀಯ ಲಾಬಿದಾರರನ್ನೊಳಗೊಂಡ ಬೃಹತ್ ಸಿಂಡಿಕೇಟ್ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಇಸ್ರೇಲಿ ಮಾಧ್ಯಮಗಳಲ್ಲಿ ಕತಾರ್ ಪರವಾಗಿ ವರದಿಗಳನ್ನು ಬಿತ್ತರಿಸಲಾಯಿತು ಮತ್ತು ಅಮೆರಿಕದ ಅಧಿಕಾರಿಗಳ ಹೆಸರಿನಲ್ಲಿ ಕತಾರ್ ಅನ್ನು ‘ವಿಶ್ವಾಸಾರ್ಹ ಮಧ್ಯಸ್ಥಿಕೆದಾರ’ ಎಂದು ಬಿಂಬಿಸುವಂತಹ ಸುದ್ದಿಗಳನ್ನು ಪ್ರಕಟಿಸಲಾಯಿತು. ಅದೇ ಸಮಯದಲ್ಲಿ, ಒತ್ತೆಯಾಳು ಮಾತುಕತೆಯಲ್ಲಿ ಈಜಿಪ್ತ್ ವಿಶ್ವಾಸಾರ್ಹವಲ್ಲ ಎಂದು ತೋರಿಸಲು ಪ್ರಯತ್ನಿಸಲಾಯಿತು. ಕತಾರ್ ಈ ಆರೋಪಗಳನ್ನು ತಿರಸ್ಕರಿಸಿದ್ದರೆ, ನೆತನ್ಯಾಹು ಈ ಇಡೀ ಪ್ರಕರಣವನ್ನು ತಮ್ಮ ವಿರುದ್ಧದ ರಾಜಕೀಯ ಷಡ್ಯಂತ್ರ ಎಂದು ಕರೆದಿದ್ದಾರೆ.

ನಕಲಿ ಕಂಪನಿಗಳ ಸ್ಥಾಪನೆ: ಉನ್ನತ ಮಟ್ಟದ ಭದ್ರತಾ ಸಭೆಗಳು ಮತ್ತು ಅತ್ಯಂತ ಗೌಪ್ಯವಾದ ಮಿಲಿಟರಿ ಡೇಟಾವನ್ನು ವಿದೇಶಿ ಮಧ್ಯವರ್ತಿಗಳಿಗೆ ತಲುಪಿಸಲಾ ಯಿತು. ನಕಲಿ ಶೆಲ್ ಕಂಪನಿಗಳ ಮೂಲಕ ಪ್ರತಿ ತಿಂಗಳು ಸಾವಿರಾರು ಡಾಲರ್​ಗಳ ವಹಿವಾಟು ನಡೆಸಲಾಗುತ್ತಿತ್ತು. ಸರ್ಕಾರ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿ ದಂತೆ ಜರ್ಮನ್ ಮಾಧ್ಯಮಗಳಲ್ಲಿ ವರ್ಗೀಕೃತ ಮಿಲಿಟರಿ ದಾಖಲೆಗಳನ್ನು ಪ್ರಕಟಿಸಲಾಯಿತು. ಇಡೀ ಪ್ರಕರಣದಲ್ಲಿ ಮಾಜಿ ಭದ್ರತಾ ಅಧಿಕಾರಿಗಳು ಮತ್ತು ಅಂತಾರಾಷ್ಟ್ರೀಯ ಲಾಬಿಕೋರರ ದೊಡ್ಡ ಸಿಂಡಿಕೇಟ್​ನ ಪಾತ್ರ ಬೆಳಕಿಗೆ ಬಂದಿದೆ.

ಆರೋಪಗಳು

ವಿದೇಶಿ ಪ್ರಭಾವ: ಕತಾರ್ ಪರವಾದ ನಿರೂಪಣೆಗಳನ್ನು ಉತ್ತೇಜಿಸಲು ಸಹಾಯಕರು ಮೂರನೇ ವ್ಯಕ್ತಿಯ ಸಂಸ್ಥೆಗಳು ಮತ್ತು ಲಾಬಿದಾರರ ಮೂಲಕ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಧ್ಯಸ್ಥಿಕೆದಾರರ ವರ್ಚಸ್ಸು ರೂಪಿಸುವುದು: ಈ ಪ್ರಚಾರವು ಈಜಿಪ್ತ್​ನ ಪಾತ್ರವನ್ನು ಕಡೆಗಣಿಸಿ, ಕತಾರ್ ಅನ್ನು ಮುಖ್ಯ ಮಧ್ಯಸ್ಥಿಕೆದಾರನನ್ನಾಗಿ ಬಿಂಬಿಸುವ ಮತ್ತು ಅದರ ಸ್ಥಾನಮಾನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.

ಮಾಧ್ಯಮಗಳ ದುರ್ಬಳಕೆ: ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮದ ಮಾತುಕತೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು, ಸುದ್ದಿಯನ್ನು ತಿರುಚಲು, ಹೇಳಿಕೆಗಳನ್ನು ಸೃಷ್ಟಿಸಲು ಮತ್ತು ಮಾಧ್ಯಮಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಆರೋಪ ಶಂಕಿತರ ಮೇಲಿದೆ.

ಯಾರೆಲ್ಲ ಭಾಗಿ?

್ಞಪ್ರಧಾನಿಯ ಮುಖ್ಯ ಕಾರ್ಯತಂತ್ರ ಸಲಹೆಗಾರರಾದ ಜೊನಾಥನ್ ಉರಿಚ್ ಗೌಪ್ಯ ಸಭೆಗಳ ಮಾಹಿತಿಯನ್ನು ಹಂಚಿಕೊಂಡಿದ್ದು, ತಿಂಗಳಿಗೆ 18 ಸಾವಿರ ಡಾಲರ್ ರಹಸ್ಯ ಹಣ ಪಡೆದಿದ್ದಾರೆ ಎನ್ನಲಾಗಿದೆ. ವಿದೇಶಿ ಏಜೆಂಟರೊಂದಿಗೆ ಸಂಪರ್ಕ ಮತ್ತು ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಆರೋಪದ ಮೇಲೆ ಬಂಧಿಸಲಾಗಿದೆ.

*ಪ್ರಧಾನಿಯ ಮಿಲಿಟರಿ ವ್ಯವಹಾರಗಳ ವಕ್ತಾರರಾದ ಎಲಿ ಫೆಲ್ಡ್​ಸ್ಟೀನ್ ಅತ್ಯಂತ ಗೌಪ್ಯವಾದ ಸೇನಾ ದಾಖಲೆಗಳನ್ನು ವಿದೇಶಿ ಪತ್ರಿಕೆಗೆ ಸೋರಿಕೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ತಿಂಗಳಿಗೆ 11 ಸಾವಿರ ಡಾಲರ್ ಪಡೆದಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಲಾಗಿದೆ.

*ಲಿಕುಡ್ ಪಕ್ಷದ ಮಾಜಿ ಚುನಾವಣಾ ಕಾರ್ಯತಂತ್ರಗಾರ ಇಸ್ರೇಲ್ ಎನ್​ಹಾರ್ನ್ ಕತಾರ್​ನ ಸಂವಹನ ಸಂಸ್ಥೆಯಿಂದ ತಿಂಗಳಿಗೆ 45 ಸಾವಿರ ಡಾಲರ್ ಮೊತ್ತದ ಗುತ್ತಿಗೆ ಪಡೆದಿದ್ದು, ಪಿಎಂಒ ಸಲಹೆಗಾರರನ್ನು ಈ ಜಾಲಕ್ಕೆ ಜೋಡಿಸಿದ್ದು ಮತ್ತು ಸಂಪೂರ್ಣ ಪಿತೂರಿಯ ಆರೋಪ ಇವರ ಮೇಲಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚಲಿದೆ ಬಿಕ್ಕಟ್ಟು

*ಈ ಎಲ್ಲ ಬೆಳವಣಿಗೆಗಳಿಂದ ಇಸ್ರೇಲ್ ಮತ್ತು ಈಜಿಪ್ತ್ ನಡುವಿನ 1979ರ ಐತಿಹಾಸಿಕ ಶಾಂತಿ ಒಪ್ಪಂದ ಅಪಾಯಕ್ಕೆ ಸಿಲುಕಿದೆ. ಮಧ್ಯಪ್ರಾಚ್ಯದ ಮುಖ್ಯ ಭದ್ರತಾ ಚೌಕಟ್ಟು ಅಲುಗಾಡಿದ್ದು, ಈ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಲಿದೆ.

*ಕತಾರ್​ನ ಮಧ್ಯಸ್ಥಿಕೆಯ ಮೇಲೆ ಪ್ರಶ್ನೆಗಳು ಎದ್ದಿರುವುದರಿಂದ ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆಯು ಹಳಿ ತಪ್ಪಿದ್ದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಸಂಪೂರ್ಣವಾಗಿ ಅತಂತ್ರವಾಗಿವೆ.

*ಅರಬ್ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಇಸ್ರೇಲ್​ನ ಆಂತರಿಕ ರಾಜಕೀಯ ಅಸ್ಥಿರತೆಯು ಭದ್ರತಾ ಶೂನ್ಯತೆಯನ್ನು ಸೃಷ್ಟಿಸುತ್ತದೆ. ಇದರ ನೇರ ಲಾಭ ಇರಾನ್, ಹಿಜ್ಬುಲ್ಲಾ ಮತ್ತು ಹಮಾಸ್​ಗೆ ಸಿಗಲಿದ್ದು, ಇಡೀ ಪ್ರದೇಶದಲ್ಲಿ ಯುದ್ಧದ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ.

ಇದೇ ಮೊದಲೇನಲ್ಲ

ಇಸ್ರೇಲ್​ನ ಪ್ರಭಾವಿ ವ್ಯಕ್ತಿಗಳು ಕತಾರ್​ನಿಂದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವುದು ಇದೇ ಮೊದಲೇನಲ್ಲ. ಎಲಿ ಫೆಲ್ಡ್​ಸ್ಟೈನ್ ಅವರು ಪ್ರಧಾನಿಯವರ ಮಿಲಿಟರಿ ವ್ಯವಹಾರಗಳ ವಕ್ತಾರರಾಗಿ ಕೆಲಸ ಮಾಡಿದ ಅಲ್ಪಾವಧಿಯಲ್ಲಿ ಪತ್ರಕರ್ತರಿಗೆ ಗೌಪ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಈಗಾಗಲೇ ತನಿಖೆ ಎದುರಿಸುತ್ತಿದ್ದಾರೆ. ವರದಿಗಳ ಪ್ರಕಾರ, ಫೆಲ್ಡ್​ಸ್ಟೈನ್​ಗೆ ಕಾಯಂ ಹುದ್ದೆಯನ್ನು ನೀಡಲು ನೆತನ್ಯಾಹು ಬಯಸಿದ್ದರು; ಆದರೆ ಅಗತ್ಯ ಭದ್ರತಾ ಅನುಮತಿ ಪಡೆಯಲು ವಿಫಲವಾದ ನಂತರ, ಅವರು ಬಾಹ್ಯ ಗುತ್ತಿಗೆದಾರರಾಗಿಯೇ ಉಳಿದುಕೊಂಡರು. ಕತಾರ್ ಪರ ಕೆಲಸ ಮಾಡುವ ಪ್ರಸಿದ್ಧ ಯುಎಸ್ ಲಾಬಿದಾರ ಜೇ ಫುಟ್​ಲಿಕ್ ಅವರಿಂದ ಫೆಲ್ಡ್​ಸ್ಟೈನ್ ಸಂಬಳ ಪಡೆದಿದ್ದರು ಎಂದು ಇಸ್ರೇಲ್​ನ ‘ಚಾನೆಲ್ 12’ನ ತನಿಖೆಯು ಕಳೆದ ತಿಂಗಳು ತಿಳಿಸಿದೆ. ಇಸ್ರೇಲಿ ಪತ್ರಕರ್ತರ ಸಮ್ಮುಖದಲ್ಲಿ ಫೆಲ್ಡ್​ಸ್ಟೈನ್ ಕತಾರ್ ಅನ್ನು ಪ್ರಚಾರ ಮಾಡಿದ್ದರು ಮತ್ತು ಅವರಿಗೆ ದೋಹಾಗೆ ಪ್ರವಾಸಗಳನ್ನು ಏರ್ಪಡಿಸಿದ್ದರು.

ವಜಾ ತಂದ ಫಜೀತಿ

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಲಹೆಗಾರರು ಕತಾರ್​ನಿಂದ ಹಣ ಪಡೆದಿದ್ದಾರೆ ಎಂಬ ಆರೋಪಗಳ ಕುರಿತು ರೊನೆನ್ ಬಾರ್ ಅವರ ನೇತೃತ್ವದಲ್ಲಿ ಗುಪ್ತಚರ ಸಂಸ್ಥೆ ಶಿನ್ ಬೆಟ್ ತನಿಖೆಯನ್ನು ಪ್ರಾರಂಭಿಸಿತು. ಈ ತನಿಖೆ ನಡೆಯುತ್ತಿರುವ ಮಧ್ಯೆಯೇ, 2023ರ ಅಕ್ಟೋಬರ್ 7ರ ಹಮಾಸ್ ದಾಳಿಯನ್ನು ತಡೆಯುವಲ್ಲಿ ಶಿಟ್ ಬೆಟ್ ವಿಫಲವಾದ ಹಿನ್ನೆಲೆಯಲ್ಲಿ ನೆತನ್ಯಾಹು ರೊನೆನ್ ಬಾರ್ ಅವರನ್ನು ವಜಾಗೊಳಿಸಲು ಮುಂದಾದರು. ಆದರೆ, ಕತಾರ್​ಗೇಟ್ ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದಲೇ ಈ ವಜಾ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಸ್ರೇಲಿ ಪ್ರತಿಪಕ್ಷಗಳು ಆರೋಪಿಸಿವೆ. ರೊನೆನ್ ಬಾರ್ ಅವರನ್ನು ವಜಾಗೊಳಿಸಿದ್ದನ್ನು ವಿರೋಧಿಸಿ ಸಾರ್ವಜನಿಕ ಪ್ರತಿಭಟನೆಗಳು ತೀವ್ರಗೊಂಡವು. ಇಸ್ರೇಲ್​ನ ಸುಪ್ರೀಂ ಕೋರ್ಟ್ ಬಾರ್ ವಜಾವನ್ನು ತಾತ್ಕಾಲಿಕವಾಗಿ ತಡೆಹಿಡಿಯಿತು. ಒಟ್ಟಾರೆಯಾಗಿ, ರೊನೆನ್ ಬಾರ್ ಅವರನ್ನು ವಜಾಗೊಳಿಸಲು ನೆತನ್ಯಾಹು ಮಾಡಿದ ಪ್ರಯತ್ನವು ಕತಾರ್​ಗೇಟ್ ಹಗರಣದ ಕುರಿತ ಶಿನ್ ಬೆಟ್​ನ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಯತ್ನವೆಂದೇ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ.

ಮುಂದೇನು?

ಬಾರ್-ಇಲಾನ್ ವಿಶ್ವವಿದ್ಯಾಲಯದ ರಾಜಕೀಯ ಅಧ್ಯಯನ ವಿಭಾಗದ ಮುಖ್ಯಸ್ಥ ಜೊನಾಥನ್ ರೈನ್​ಹೋಲ್ಡ್ ಅವರು ಎಎಫ್​ಪಿಯೊಂದಿಗೆ ಮಾತನಾಡಿ, ‘ಈ ಪ್ರಕರಣವು ನೆತನ್ಯಾಹು ಅವರಿಗೆ ಸಂಬಂಧಿಸಿದ ಎಲ್ಲ ಕೆಟ್ಟ ವಿಷಯಗಳನ್ನು ಒಂದೇ ಪ್ಯಾಕೇಜ್​ನಲ್ಲಿ ಒಟ್ಟಿಗೆ ತಂದಿದ್ದು, ಇದು ನೆತನ್ಯಾಹು ಅವರನ್ನು ನೇರವಾಗಿ ಹಮಾಸ್ ಅನ್ನು ತುಷ್ಟೀಕರಣ ಮಾಡುವ ನೀತಿಯೊಂದಿಗೆ ಜೋಡಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಕತಾರ್​ನಿಂದ ಗಾಜಾಗೆ ಲಕ್ಷಾಂತರ ಡಾಲರ್​ಗಳ ನಗದನ್ನು ಕಳುಹಿಸಲು ಇಸ್ರೇಲ್ ಸರ್ಕಾರ ಅನುಮತಿಸಿತ್ತು. ಈ ಹಣವೇ ಹಮಾಸ್ ಅನ್ನು ಬಲಪಡಿಸಿತು ಮತ್ತು 2023ರ ಅಕ್ಟೋಬರ್ 7ರಂದು ದಾಳಿ ನಡೆಸಲು ಅದಕ್ಕೆ ಅನುವು ಮಾಡಿಕೊಟ್ಟಿತು ಎಂಬ ವಿಶ್ಲೇಷಣೆಗಳು ವರದಿಯಾಗಿವೆ. ಆದಾಗ್ಯೂ, ಈ ಪ್ರಕರಣವು ನೆತನ್ಯಾಹು ಮೇಲೆ ಮತ್ತಷ್ಟು ಒತ್ತಡವನ್ನು ಹೇರಿದ್ದು, ಇಸ್ರೇಲ್​ನ ರಾಜಕೀಯದಲ್ಲಿ ಪ್ರಮುಖ ವಿವಾದವೊಂದು ಮುನ್ನೆಲೆಗೆ ಬಂದಿದೆ.