ನೆತನ್ಯಾಹು ಹೂಡಿದ ಮಾಯಾಜಾಲಕ್ಕೆ ಬಲಿಯಾಯ್ತಾ ಅಮೆರಿಕ? ಕಣ್ಮುಚ್ಚಿ ಯುದ್ಧಕ್ಕೆ ಸಮ್ಮತಿಸಿದ ಟ್ರಂಪ್! ಆ ಒಂದು ಗಂಟೆಯ ರಹಸ್ಯ ಸಭೆಯಲ್ಲಿ ನಡೆದದ್ದೇನು?
ನ್ಯೂಯಾರ್ಕ್: ಕಳೆದ ಒಂದು ತಿಂಗಳಿನಿಂದ ಜಗತ್ತನ್ನೇ ನಡುಗಿಸಿದ ಅಮೆರಿಕ-ಇರಾನ್ (Iran War Exposed) ಯುದ್ಧವು ಕೇವಲ ಆಕಸ್ಮಿಕವಲ್ಲ, ಬದಲಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೂಡಿದ ಒಂದು ವ್ಯವಸ್ಥಿತ ರಣತಂತ್ರದ ಫಲ ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ. ನ್ಯೂಯಾರ್ಕ್ ಟೈಮ್ಸ್ ಬಿಡುಗಡೆ ಮಾಡಿದ ವಿಶೇಷ ವರದಿಯ ಪ್ರಕಾರ, ಇಸ್ರೇಲ್ ನೀಡಿದ ವಿವಾದಾತ್ಮಕ ಗುಪ್ತಚರ ಮಾಹಿತಿಯು ಟ್ರಂಪ್ ಅವರನ್ನು ಈ ಭೀಕರ ಯುದ್ಧಕ್ಕೆ ಪ್ರಚೋದಿಸಿತ್ತು.
ವೈಟ್ ಹೌಸ್‌ನ ರಹಸ್ಯ ಸಭೆಯಲ್ಲಿ ನಡೆದದ್ದೇನು..?
ಫೆಬ್ರವರಿ 11 ರಂದು ವೈಟ್ ಹೌಸ್‌ನಲ್ಲಿ ನಡೆದ ಅತ್ಯಂತ ಗೌಪ್ಯ ಸಭೆಯಲ್ಲಿ ನೆತನ್ಯಾಹು ಇರಾನ್ ಆಡಳಿತವನ್ನು ಉರುಳಿಸುವ ಮಾಸ್ಟರ್ ಪ್ಲಾನ್ ಒಂದನ್ನು ಟ್ರಂಪ್ ಮುಂದಿಟ್ಟಿದ್ದರು. ಈ ಸಭೆಯಲ್ಲಿ ಮಾರ್ಕೊ ರೂಬಿಯೋ, ಪೀಟ್ ಹೆಗ್ಸೆತ್ ಮತ್ತು ಸಿಐಎ ಮುಖ್ಯಸ್ಥ ಜಾನ್ ರಾಟ್‌ಕ್ಲಿಫ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ನೆತನ್ಯಾಹು ನೀಡಿದ ಭರವಸೆಗಳು
1. ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಯನ್ನು ಕೆಲವೇ ವಾರಗಳಲ್ಲಿ ಧ್ವಂಸಗೊಳಿಸಬಹುದು.
2. ಅಮೆರಿಕದ ದಾಳಿಯಿಂದ ಇರಾನ್‌ನಲ್ಲಿ ಮತ್ತೆ ಜನಾಂದೋಲನ ಶುರುವಾಗಿ ಆಡಳಿತ ಬದಲಾಗುತ್ತದೆ.
3. ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡುವ ಸಾಧ್ಯತೆ ತೀರಾ ಕಡಿಮೆ.
ನೆತನ್ಯಾಹು ಅವರ ಈ ಮಾತುಗಳಿಗೆ ಮಾರುಹೋದ ಟ್ರಂಪ್, ಇದು ನನಗೆ ಸರಿ ಅನ್ನಿಸುತ್ತಿದೆ ಎಂದು ಹೇಳುವ ಮೂಲಕ ಆಪರೇಷನ್ ಎಪಿಕ್ ಫ್ಯೂರಿಗೆ ಹಸಿರು ನಿಶಾನೆ ತೋರಿಸಿದ್ದರು.
ಇದು ಬರೀ ಫಾರ್ಸ್ ಮತ್ತು ಬುಲ್‌ಶಿಟ್": ಟ್ರಂಪ್ ತಂಡದ ಆಕ್ರೋಶ
ನೆತನ್ಯಾಹು ಅವರ ಈ ಪ್ಲಾನ್ ಅನ್ನು ಟ್ರಂಪ್ ಅವರ ಸ್ವಂತ ಅಧಿಕಾರಿಗಳೇ ಟೀಕಿಸಿದ್ದರು. ಸಿಐಎ ನಿರ್ದೇಶಕರು ಈ ಯೋಜನೆಯನ್ನು ಹಾಸ್ಯಾಸ್ಪದ ಎಂದು ಕರೆದರೆ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಒಂದು ಹೆಜ್ಜೆ ಮುಂದೆ ಹೋಗಿ ಇದು ಬರೀ ಬುಲ್‌ಶಿಟ್ ಎಂದು ಕಿಡಿಕಾರಿದ್ದರು.
ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕೂಡ ಯುದ್ಧದ ವಿರುದ್ಧವಾಗಿದ್ದರು. ಹೊಸ ಯುದ್ಧಗಳನ್ನು ಮಾಡುವುದಿಲ್ಲ ಎಂಬ ಭರವಸೆಯ ಮೇಲೆ ಜನರು ನಮಗೆ ಮತ ಹಾಕಿದ್ದಾರೆ, ಈ ಯುದ್ಧವು ಜನರಿಗೆ ಮಾಡುವ ದ್ರೋಹವಾಗುತ್ತದೆ ಎಂದು ಎಚ್ಚರಿಸಿದ್ದರು. ಆದರೆ, ವೆನೆಜುವೆಲಾದ ಅಧ್ಯಕ್ಷ ಮಡುರೋ ಅವರನ್ನು ಬಂಧಿಸಿದ ಮಾದರಿಯಲ್ಲೇ ಇರಾನ್ ಅನ್ನು ಕೂಡ ಬೇಗನೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದ ಟ್ರಂಪ್ ಯಾರಿಗೂ ಕಿವಿಕೊಡಲಿಲ್ಲ.
ಯುದ್ಧ ತಂದಿಟ್ಟ ಭೀಕರ ಆರ್ಥಿಕ ಹೊಡೆತ
ನೆತನ್ಯಾಹು ಅಂದಾಜಿಸಿದಂತೆ ಯುದ್ಧ ಸುಲಭವಾಗಿರಲಿಲ್ಲ. ಇರಾನ್ ಹೋರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದರಿಂದ ಜಾಗತಿಕ ತೈಲ ಬೆಲೆ ಗಗನಕ್ಕೇರಿತು. ಅಮೆರಿಕದಲ್ಲಿ ಷೇರು ಮಾರುಕಟ್ಟೆ ಕುಸಿಯಿತು ಮತ್ತು ಗ್ಯಾಸ್ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಯುದ್ಧದಲ್ಲಿ 13 ಅಮೆರಿಕನ್ ಸೈನಿಕರು ಸಾವನ್ನಪ್ಪಿದರು ಮತ್ತು ಇರಾನ್‌ನಲ್ಲಿ 2,000ಕ್ಕೂ ಹೆಚ್ಚು ಜನರು ಬಲಿಯಾದರು.
ಕದನ ವಿರಾಮಕ್ಕೆ ದಾರಿ ಮಾಡಿಕೊಟ್ಟ ಸುಜಿ ವೈಲ್ಸ್
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ವೈಟ್ ಹೌಸ್ ಚೀಫ್ ಆಫ್ ಸ್ಟಾಫ್ ಸುಜಿ ವೈಲ್ಸ್, ಟ್ರಂಪ್ ಅವರಿಗೆ ಕಠಿಣ ಸತ್ಯವನ್ನು ಮನವರಿಕೆ ಮಾಡಿಕೊಟ್ಟರು. ಆರ್ಥಿಕತೆ ಕುಸಿಯುತ್ತಿರುವುದು ಮತ್ತು ಜನರ ಅಸಮಾಧಾನ ಹೆಚ್ಚುತ್ತಿರುವುದನ್ನು ವಿವರಿಸಿದ ನಂತರ, ಟ್ರಂಪ್ ಯುದ್ಧದಿಂದ ಹೊರಬರಲು ದಾರಿ ಹುಡುಕಲಾರಂಭಿಸಿದರು. ಅಂತಿಮವಾಗಿ ಮಾರ್ಚ್ 28 ರಂದು ಮಾತುಕತೆ ಆರಂಭವಾಗಿ, ಬುಧವಾರ ಎರಡು ವಾರಗಳ ಕದನ ವಿರಾಮಕ್ಕೆ ಸಹಿ ಹಾಕಲಾಯಿತು.
ಇಸ್ರೇಲ್‌ನ ಹಿತಾಸಕ್ತಿಗಾಗಿ ಅಮೆರಿಕವನ್ನು ಇರಾನ್ ವಿರುದ್ಧದ ಯುದ್ಧಕ್ಕೆ ಎಳೆಯಲಾಯಿತು ಎಂಬುದು ಈಗ ಜಗಜ್ಜಾಹೀರಾಗಿದೆ. ಟ್ರಂಪ್ ಅವರ ತರಾತುರಿಯ ನಿರ್ಧಾರವು ಅಮೆರಿಕದ ಆರ್ಥಿಕತೆ ಮತ್ತು ಸೈನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿತು,(ಏಜೆನ್ಸೀಸ್).