ಟ್ರಂಪ್​ ಹೇಳಿದ್ರೂ ಅಷ್ಟೇ! ಜೆನ್ಸನ್ ಹುವಾಂಗ್‌ರನ್ನು ವಾಪಸ್​ ಕರೆದುಕೊಳ್ಳುವ ಮಾತೇ ಇಲ್ಲವೆಂದ ಎನ್ವಿಡಿಯಾ | Jensen Huang  
ವಿದೇಶ

ಟ್ರಂಪ್​ ಹೇಳಿದ್ರೂ ಅಷ್ಟೇ! ಜೆನ್ಸನ್ ಹುವಾಂಗ್‌ರನ್ನು ವಾಪಸ್​ ಕರೆದುಕೊಳ್ಳುವ ಮಾತೇ ಇಲ್ಲವೆಂದ ಎನ್ವಿಡಿಯಾ | Jensen Huang

ವಾಷಿಂಗ್ಟನ್​: ಸದ್ಯ ಜಗತ್ತಿನಾದ್ಯಂತ ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಅವರ ವಿವಾಹೇತರ ಸಂಬಂಧ ಹಾಗೂ ಚೀನಿ ಗೂಢಚರ್ಯೆ ಜತೆಗೆ ಹೊಂದಿರುವ ಸಂಪರ್ಕದ ಸುದ್ದಿ ಎಲ್ಲಡೆ ಕೇಳಿ ಬರುತ್ತಿದ್ದು, ಇದರಿಂದ ಕಂಪನಿಯ ಮೌಲ್ಯ ಕೂಡ ಕುಸಿಯುತ್ತಿದೆ. ಈ ವಿಚಾರ ಬೆಳಕಿಗೆ ಬಂದ ದಿನದಲ್ಲಿ ಸುಮಾರು 600 ಬಿಲಿಯನ್​ ಡಾಲರ್​ ನಷ್ಟವಾದ ಹಿನ್ನಲೆ ಜೆನ್ಸೆನ್ ಹುವಾಂಗ್​ರನ್ನು ಸಿಇಒ ಹುದ್ದೆಯಿಂದ ಸಂಸ್ಥೆ ಕೆಳಗಿಳಿಸಿದ್ದು, ಈಗ ಮತ್ತೇ ಅವರನ್ನು ನೇಮಕ ಮಾಡಿಕೊಳ್ಳುವ ವಿಚಾರ ಮುನ್ನೆಲೆಗೆ ಬಂದಿದೆ.

ಸ್ವತಂತ್ರ ತನಿಖೆಗೆ ಒತ್ತು

ಎಐ ಜಗತ್ತಿನ ದೈತ್ಯ ಕಂಪನಿ ಎನ್‌ವಿಡಿಯಾದಲ್ಲಿ ಜೆನ್ಸನ್ ಹುವಾಂಗ್ ಅವರ ಎಕ್ಸಿಟ್​ ಬಳಿಕ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ. ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ಕರೆತರಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಪ್ರಭಾವಿಗಳು ಒತ್ತಾಯಿಸುತ್ತಿದ್ದರೂ, ಇಲ್ಲಿಯವರೆಗೆ ಕಂಪನಿಯ ಆಡಳಿತ ಮಂಡಳಿ ಮಾತ್ರ ಇದಕ್ಕೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ, ಹುವಾಂಗ್ ಅವರ ನಡೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅನುಮಾನಗಳ ಕುರಿತು ಸ್ವತಂತ್ರ ತನಿಖೆಗೆ ಒತ್ತು ನೀಡಿದೆ.

ಕಳೆದ ವಾರ ಜೆನ್ಸನ್ ಹುವಾಂಗ್ ಎನ್‌ವಿಡಿಯಾ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಕಂಪನಿಯ ನಿರ್ದೇಶಕ ಮಂಡಳಿಯು ಸ್ವತಂತ್ರ ತನಿಖೆ ಆರಂಭಿಸಿದೆ. ಹುವಾಂಗ್ ಅವರ ವೈಯಕ್ತಿಕ ಸಂಬಂಧಗಳು, ಚೀನಾದ ಗುಪ್ತಚರ ಜಾಲದೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಯೊಂದಿಗಿನ ಸಂಬಂಧ ಹಾಗೂ ಇದರಿಂದ ಕಂಪನಿಯ ರಹಸ್ಯ ಮಾಹಿತಿ ಅಥವಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಯಾವುದೇ ಧಕ್ಕೆಯಾಗಿದೆಯೇ ಎಂಬುದನ್ನು ತನಿಖೆ ಪರಿಶೀಲಿಸಲಿದೆ.

ರಹಸ್ಯ ಮಾಹಿತಿ ಸೋರಿಕೆ?

ಈ ತನಿಖೆಯ ಜವಾಬ್ದಾರಿಯನ್ನು ವಾಚ್‌ಟೆಲ್, ಲಿಪ್ಟನ್ ಎಂಬ ಕಾನೂನು ಸಂಸ್ಥೆಗೆ ವಹಿಸಿಕೊಂಡಿವೆ. ತನಿಖೆಯ ಮೇಲ್ವಿಚಾರಣೆಯನ್ನು ಸ್ವತಂತ್ರ ನಿರ್ದೇಶಕರ ಸಮಿತಿ ನಡೆಸಲಿದೆ. ರಾಷ್ಟ್ರೀಯ ಭದ್ರತೆ ಅಥವಾ ಕಂಪನಿಯ ರಹಸ್ಯ ಮಾಹಿತಿ ಸೋರಿಕೆಯಾಗಿದೆ ಎಂಬುದಕ್ಕೆ ಸದ್ಯ ಯಾವುದೇ ಕಾರಣ ಕಾಣುತ್ತಿಲ್ಲ ಎಂದು ಎನ್‌ವಿಡಿಯಾ ಮಂಡಳಿ ಈ ಹಿಂದೆಯೇ ತಿಳಿಸಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಟ್ರಂಪ್​ ಸೇರಿದಂತೆ ಅನೇಕ ಪ್ರಭಾವಿ ನಾಯಕರು ಹುವಾಂಗ್​ರನ್ನು ವಾಪಸ್​ ಕರೆದುಕೊಳ್ಳುವಂತೆ ಕಂಪನಿಗೆ ಒತ್ತಾಯಿಸಿದೆ. ಇಷ್ಟಾದರೂ ಸಂಸ್ಥೆ ಮಾತ್ರ ಯಾವುದೇ ಕಾರಣಕ್ಕೂ ಅವರಿಗೆ ಜಾಗವಿಲ್ಲ ಎಂದು ಖಡಕ್ ಆಗಿ ತಿರುಗೇಟು ಕೊಟ್ಟಿದೆ.

ಮರುನೇಮಕಕ್ಕೆ ಟ್ರಂಪ್, ಟೆಕ್ ದಿಗ್ಗಜರ ಸಾಥ್​

ಹುವಾಂಗ್ ಅವರನ್ನು ಮತ್ತೆ ಸಿಇಒ ಸ್ಥಾನಕ್ಕೆ ಕರೆತರಬೇಕು ಎಂಬ ಅಭಿಯಾನಕ್ಕೆ ತಂತ್ರಜ್ಞಾನ ಕ್ಷೇತ್ರದ ಹಲವು ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆರಂಭಿಸಿರುವ ಆನ್‌ಲೈನ್ ಮನವಿಗೆ 1.80 ಲಕ್ಷಕ್ಕೂ ಹೆಚ್ಚು ಮಂದಿ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಎಲಾನ್ ಮಸ್ಕ್ ಕೂಡ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಹುವಾಂಗ್ ಮತ್ತೆ ಸಿಇಒ ಆಗುವುದಕ್ಕೆ ತಮ್ಮ ವಿರೋಧವಿಲ್ಲ ಎಂಬ ಟ್ರಂಪ್​ ಹೇಳಿಕೆಯ ಹೊರತಾಗಿಯೂ ನಾವು ಅವರನ್ನು ವಾಪಾಸ್ ಕರೆದುಕೊಳ್ಳುವ ಮಾತಿಲ್ಲ. ಅದು ಟ್ರಂಪ್​ ಹೇಳಲಿ ಅಥವಾ ಇನ್ಯಾರೇ ಹೇಳಿದರೂ ಅಷ್ಟೇ ಎಂದು ಸಂಸ್ಥೆ ತಿಳಿಸಿದೆ.

ಹೊಸ ಸಿಇಒ ಹುಡುಕಾಟ ಆರಂಭ

ಹುವಾಂಗ್ ಅವರ ರಾಜೀನಾಮೆಯ ಬೆನ್ನಲ್ಲೇ ಎನ್‌ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಇದೇ ವೇಳೆ ಕಂಪನಿಯ ಆಡಳಿತ ಮಂಡಳಿ ಶಾಶ್ವತ ಸಿಇಒ ಆಯ್ಕೆಗಾಗಿ ಪ್ರಮುಖ ಕಾರ್ಯನಿರ್ವಾಹಕ ಹುಡುಕಾಟ ಸಂಸ್ಥೆಯ ನೆರವು ಪಡೆಯಲು ಮುಂದಾಗಿದೆ. ಹುವಾಂಗ್​ರ ನಾಯಕತ್ವದಲ್ಲಿ ಎನ್‌ವಿಡಿಯಾ ಕೃತಕ ಬುದ್ಧಿಮತ್ತೆ ಕ್ಷೇತ್ರದ ನೂರಾರು ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸಿನ ನೆರವು ನೀಡಿತ್ತು.

ಕಂಪನಿಯ ವೆಚ್ಚ ನಿರ್ವಹಣೆ ಮತ್ತು ಹೂಡಿಕೆ ನಿರ್ಧಾರಗಳ ಬಗ್ಗೆಯೂ ಕೆಲವು ಪ್ರಶ್ನೆಗಳು ಎದ್ದಿವೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಹಂಗಾಮಿ ಸಿಇಒ ಕೊಲೆಟ್ ಕ್ರೆಸ್ ಕಂಪನಿಯ ವೆಚ್ಚ ಮತ್ತು ಹೂಡಿಕೆ ನೀತಿಯನ್ನು ಮರುಪರಿಶೀಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. 33 ವರ್ಷಗಳ ಹಿಂದೆ ಕಂಪನಿಯನ್ನು ಸಹ-ಸ್ಥಾಪಿಸಿದ್ದ ಜೆನ್ಸನ್ ಹುವಾಂಗ್ ಅವರ ನಿರ್ಗಮನವು ತಂತ್ರಜ್ಞಾನ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅವರ ವಿರುದ್ಧದ ಆರೋಪಗಳ ಕುರಿತು ತನಿಖೆ ಪೂರ್ಣಗೊಳ್ಳುವವರೆಗೆ ಮರುನೇಮಕದ ಪ್ರಶ್ನೆಯೇ ಇಲ್ಲ ಎಂಬುದು ಕಂಪನಿಯ ನಿಲುವಾಗಿದೆ. ಹೀಗಾಗಿ, ಎನ್‌ವಿಡಿಯಾದ ಮುಂದಿನ ನಾಯಕತ್ವ ಯಾರ ಕೈ ಸೇರಲಿದೆ ಎಂಬುದೇ ಸದ್ಯದ ಕುತೂಹಲ,(ಏಜೆನ್ಸೀಸ್).