ವಿದೇಶ

ಎಲ್ಲಾ ಡಾಟ್ ಹೆಡ್​ಗಳನ್ನು ಗಡಿಪಾರು ಮಾಡಿ: ಅಮೆರಿಕದಲ್ಲಿ ದೀಪಾವಳಿ ಆಚರಣೆಗೆ ಅಡ್ಡಿಪಡಿಸಿದ ಕ್ರಿಶ್ಚಿಯನ್ ಬಲಪಂಥೀಯ ಕಾರ್ಯಕರ್ತರು | America

ಅಮೆರಿಕಾದ ಸಿಯಾಟಲ್​ನಲ್ಲಿ ಶನಿವಾರ(ನ. 07) ಹಿಂದೂಗಳ ದೀಪಾವಳಿ ಆಚರಣೆಗೆ ಕ್ರಿಶ್ಚಿಯನ್ ಬಲಪಂಥೀಯ ಕಾರ್ಯಕರ್ತರು ಅಡ್ಡಿಪಡ್ಡಿಸಿದ್ದು, ಎಲ್ಲಾ ಡಾಟ್ ಹೆಡ್‌ಗಳನ್ನು ಗಡೀಪಾರು ಮಾಡಿ ಎಂಬ ಪೋಸ್ಟರ್ ಹಿಡಿದು ಕಾರ್ಯಕ್ರಮದ ಸಭಾಂಗಣಕ್ಕೆ ನುಗ್ಗಿ ಅಸ್ತವ್ಯಸ್ತಗೊಳಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕಾದ ಸಿಯಾಟಲ್​ನಲ್ಲಿ ಶನಿವಾರ(ನ. 07) ಹಿಂದೂಗಳ ದೀಪಾವಳಿ ಆಚರಣೆಗೆ ಕ್ರಿಶ್ಚಿಯನ್ ಬಲಪಂಥೀಯ ಕಾರ್ಯಕರ್ತರು ಅಡ್ಡಿಪಡ್ಡಿಸಿದ್ದು, ಎಲ್ಲಾ ಡಾಟ್ ಹೆಡ್‌ಗಳನ್ನು ಗಡೀಪಾರು ಮಾಡಿ ಎಂಬ ಪೋಸ್ಟರ್ ಹಿಡಿದು ಕಾರ್ಯಕ್ರಮದ ಸಭಾಂಗಣಕ್ಕೆ ನುಗ್ಗಿ ಅಸ್ತವ್ಯಸ್ತಗೊಳಿಸಿದ್ದಾರೆ.

ಜೇಕ್ ಲ್ಯಾಂಗ್ ಮತ್ತು ಥಾಮಸ್ ಅಲೆನ್ ನೇತೃತ್ವದ ಕಾರ್ಯಕರ್ತರು ದೀಪಾವಳಿ ಆಚರಣೆ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ, ಎಲ್ಲಾ ಡಾಟ್ ಹೆಡ್‌ಗಳನ್ನು ಗಡೀಪಾರು ಮಾಡಿ ಎಂಬ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದು ಅಮೆರಿಕದ ಧ್ವಜವನ್ನು ಬೀಸುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಸಿಯಾಟಲ್ ಸೆಂಟರ್ ಫೆಸ್ಟಲ್​​ನ ಭಾಗವಾಗಿರುವ 'ಸಿಯಾಟಲ್ ಸೆಂಟರ್ ಆರ್ಮರಿ'ಯಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿದ್ದಾಗ ಘಟನೆ ನಡೆದಿದೆ. ಲ್ಯಾಂಗ್ ಮತ್ತು ಅಲೆನ್ ಹಿಡಿದ ಮತ್ತೊಂದು ಫಲಕದಲ್ಲಿ ಕ್ರೈಸ್ತರನ್ನು ಹಿಂದೂಗಳಾಗಿ ಬದಲಾಯಿಸುವುದನ್ನು ನಿಲ್ಲಿಸಿ ಎಂದು ಬರೆಯಲಾಗಿದೆ.

ಡಾಟ್ ಹೆಡ್ಸ್ ಎಂಬ ಪದವು ದಕ್ಷಿಣ ಏಷ್ಯಾ ಮೂಲದ ಜನರನ್ನು, ವಿಶೇಷವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹೀಯಾಳಿಸುವ ಜನಾಂಗೀಯ ನಿಂದನೆ ಪದವಾಗಿದೆ.

ಲ್ಯಾಂಗ್ ಮತ್ತು ಅಲೆನ್ ಟ್ರಂಪ್ ಬೆಂಬಲಿಗರು?

ಲ್ಯಾಂಗ್ ಮತ್ತು ಅಲೆನ್ ತೀವ್ರ ಬಲಪಂಥೀಯ ಕಾರ್ಯಕರ್ತರಾಗಿದ್ದಾರೆ. ಮತ್ತು ರಿಪಬ್ಲಿಕನ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಲವಾದ ಬೆಂಬಲಿಗರು ಎಂದು ವರದಿಯಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ, ಲ್ಯಾಂಗ್ ಯುಎಸ್ ಸೆನೆಟ್‌ಗೆ ಫ್ಲೋರಿಡಾದಿಂದ ರಿಪಬ್ಲಿಕನ್ ಅಭ್ಯರ್ಥಿಯಾಗಬೇಕೆಂದು ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.

ಅಸೋಸಿಯೇಟೆಡ್ ಪ್ರೆಸ್ ಪ್ರಕಾರ , ದೀಪಾವಳಿ ಆಚರಣೆಗೆ ಅಡ್ಡಿಪಡಿಸಿದ ಲ್ಯಾಂಗ್ 'ವೈಟ್ ರಿಪ್ಲೇಸ್‌ಮೆಂಟ್' ಸಂಘಟನೆಯೊಂದಿಗೆ ಸಹ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಲಾಗಿದೆ. ಮತ್ತು 2021 ಜನವರಿ 6ರಂದು ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ಮಾಡಿದವರಲ್ಲಿ ಒಬ್ಬರಾಗಿದ್ದರು. ಅವರು ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಬಳಿಕ 2025ರಲ್ಲಿ ಟ್ರಂಪ್ ಎರಡನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅವರನ್ನು ಕ್ಷಮಾಪಣೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿತ್ತು.

ಲ್ಯಾಂಗ್, ಅಲೆನ್ ಅವರ ಕೃತ್ಯಕ್ಕೆ ಖಂಡನೆ

ಹಿಂದೂಗಳ ದೀಪಾವಳಿ ಆಚರಣೆಗೆ ಕ್ರಿಶ್ಚಿಯನ್ ಬಲಪಂಥೀಯ ಕಾರ್ಯಕರ್ತರಾದ ಲ್ಯಾಂಗ್ ಮತ್ತು ಅಲೆನ್ ಅಡ್ಡಿಪಡಿಸಿದ್ದು, ಭಾರತೀಯ ಅಮೇರಿಕನ್ ನಾಯಕರು ಮತ್ತು ಅಮೇರಿಕನ್ ರಾಜಕಾರಣಿಗಳು ತೀವ್ರವಾಗಿ ಖಂಡಿಸಿದರು.

ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರು, ಲ್ಯಾಂಗ್ ಮತ್ತು ಅಲೆನ್ ಅವರ ಕೃತ್ಯವನ್ನು 'ಅಸಹ್ಯಕರ' ಎಂದು ಕರೆದು ಖಂಡಿಸಿದ್ದಾರೆ. ದೀಪಾವಳಿ ಒಂದು ಪ್ರಮುಖ ಹಬ್ಬವಾಗಿದ್ದು, ಇಂತಹ ದ್ವೇಷಪೂರಿತ ಪ್ರದರ್ಶನಕ್ಕೆ ಸಿಯಾಟಲ್‌ನಲ್ಲಿ ಅಥವಾ ಅಮೆರಿಕದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

ವೈಟ್ ಹೌಸ್‌ನ ಮಾಜಿ ಸಲಹೆಗಾರ ಅಜಯ್ ಜೈನ್ ಭುಟೋರಿಯಾ ಕೂಡ ಈ ಘಟನೆಯನ್ನು 'ಅಸಹ್ಯಕರ' ಎಂದು ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಹಿಂದೂ ಅಮೆರಿಕನ್ನರು ಮತ್ತು ಭಾರತೀಯ ವಲಸಿಗರನ್ನು ಗುರಿಯಾಗಿಸಿಕೊಂಡು, ಜನಾಂಗೀಯ ನಿಂದನೆಗಳನ್ನು ಮಾಡುವುದು ಹಾಗೂ ಪಿತೂರಿ ಸಿದ್ಧಾಂತದ ಮಾತುಗಳನ್ನು ಆಡುವುದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ (ಏಜೆನ್ಸೀಸ್).