ವಿದೇಶ

ಲಾಸ್ ಏಂಜಲೀಸ್​ ಏರ್ಪೋರ್ಟ್​ನಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ; 275 ಪ್ರಯಾಣಿಕರು ಸುರಕ್ಷಿತ..LAX Plane Collision

  • ಲಾಸ್ ಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ.

  • ಡೆಲ್ಟಾ ಏರ್ ಲೈನ್ಸ್ ಮತ್ತು ಏರ್ ಕೆನಡಾ ಸಂಸ್ಥೆಗಳಿಗೆ ಸೇರಿದ ವಿಮಾನಗಳಿಗೆ ಹಾನಿ.

  • ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ ಮಾಹಿತಿ, ತನಿಖೆ ಆರಂಭ

ವಾಷಿಂಗ್ಟನ್​ ಡಿಸಿ; ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮುಂಜಾನೆ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 10:30 ರ ಸುಮಾರಿಗೆ ಈ ಘಟನೆ ನಡೆದದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(FAA) ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ತನಿಖೆಗೆ ಆದೇಶ

ಡೆಲ್ಟಾ ಏರ್ ಲೈನ್ಸ್ ಮತ್ತು ಏರ್ ಕೆನಡಾ ಸಂಸ್ಥೆಗಳಿಗೆ ಸೇರಿದ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಧಿಕಾರಿಗಳು ಈ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (NTSB) ಮಾಹಿತಿ ನೀಡಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಪ್ರಕಾರ, ಡೆಲ್ಟಾ ವಿಮಾನದ ಎಡಭಾಗದ ವಿಂಗ್‌ಟಿಪ್ ಮತ್ತು ಏರ್ ಕೆನಡಾ ವಿಮಾನದ ಹಾರಿಜಾಂಟಲ್ ಸ್ಟೆಬಿಲೈಸರ್ ಒಂದಕ್ಕೊಂದು ಸ್ಪರ್ಶಿಸಿವೆ. ಘಟನೆಯ ನಂತರ ಬಿಡುಗಡೆಯಾದ ಚಿತ್ರಗಳಲ್ಲಿ ಏರ್ ಕೆನಡಾ ವಿಮಾನಕ್ಕೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ಏರ್ ಕೆನಡಾ ಸಂಸ್ಥೆಯ ಪ್ರಕಾರ, ಟೊರೊಂಟೊದಿಂದ ಬಂದಿದ್ದ ವಿಮಾನವು ಗೇಟ್‌ನತ್ತ ಸಾಗುತ್ತಿದ್ದಾಗ, ಜಪಾನ್‌ನ ಟೋಕಿಯೊದ ಹನೆಡಾ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಡೆಲ್ಟಾ ಏರ್ ಲೈನ್ಸ್ ವಿಮಾನವು ಪರಸ್ಪರ ಡಿಕ್ಕಿ ಹೊಡೆದುಕೊಂಡಿದೆ. ಇದರಿಂದಾಗಿ ಡೆಲ್ಟಾ ವಿಮಾನದ ರೆಕ್ಕೆಯ ಒಂದು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಏರ್ ಕೆನಡಾ ವಿಮಾನದ ಸ್ಟೆಬಿಲೈಸರ್ ಸಿಲುಕಿಕೊಂಡಿರುವುದು ಕಂಡುಬಂದಿದೆ.

ಪ್ರಯಾಣಿಕರು ಹೀಗಂದ್ರು

ಡೆಲ್ಟಾ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಮಾತನಾಡಿ, ವಿಮಾನವು ಗೇಟ್‌ನಿಂದ ಹೊರಟು ರನ್‌ವೇ ಕಡೆಗೆ ತೆರಳುತ್ತಿದ್ದಾಗ ಏರ್ ಕೆನಡಾ ವಿಮಾನವು ಅದರ ಹಾದಿಗೆ ಬಂದಂತೆ ತೋರಿತು. ಹೀಗಾಗಿ ಡಿಕ್ಕಿ ಹೊಡೆದುಕೊಂಡಿರಬಹುದು ಎಂದು ಸ್ಪಷ್ಟನೆ ಕೊಟ್ಟರು.

ಡೆಲ್ಟಾ ವಿಮಾನದಲ್ಲಿದ್ದ 275 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಗಾಯಗಳ ವರದಿ ಬಂದಿಲ್ಲ. ಏರ್ ಕೆನಡಾ ವಿಮಾನದಲ್ಲಿದ್ದವರ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲ. ಏಕಾಏಕಿ ನಡೆದ ಘಟನೆಯಿಂದಾಗಿ ಪ್ರಯಾಣಿಕರಿಗುಂಟಾದ ಸಮಸ್ಯೆ ಬಗ್ಗೆ ಡೆಲ್ಟಾ ಸಂಸ್ಥೆಯು ಕ್ಷಮೆಯಾಚಿಸಿದೆ.

ಮುಂಜಾಗ್ರತಾ ಕ್ರಮವಾಗಿ ಎರಡೂ ವಿಮಾನಗಳನ್ನು ಸೇವೆಯಿಂದ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ಎಂದಿನಂತೆ ಮುಂದುವರೆದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜೆನ್ಸೀಸ್).