ನವದೆಹಲಿ: ನವೆಂಬರ್ 10 ರಂದು ದೆಹಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ತಮ್ಮ(ಪಾಕಿಸ್ತಾನ) ದೇಶದ ನೇರ ಪಾತ್ರವಿದೆ ಎಂದು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (ಪಿಒಕೆ) ಮಾಜಿ ಪ್ರಧಾನಿ ಚೌಧರಿ ಅನ್ವರುಲ್ ಹಕ್ ಹೇಳಿದ್ದಾರೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ದೆಹಲಿಯ ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೆ ಭಾರತದ ಮಣ್ಣಿನ ಮೇಲೆ ದಾಳಿ ನಡೆಸಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಅಲ್ಲಾಹನ ದಯೆಯಿಂದ, ನಾವು ಅದನ್ನು ಮಾಡಿದ್ದೇವೆ... ನಮ್ಮ ಧೈರ್ಯಶಾಲಿಗಳು ಅದನ್ನು ಮಾಡಿದ್ದಾರೆ ಎಂದು ಪಿಒಕೆ ವಿಧಾನಸಭೆಗೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಈ ಹೇಳಿಕೆಯ ಬಗ್ಗೆ ಪಾಕಿಸ್ತಾನ ಔಪಚಾರಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ರಕ್ಷಣಾ ಸಚಿವ ಖವಾಜಾ ಆಸಿಫ್ ಭಾರತದೊಂದಿಗೆ "ಸಂಪೂರ್ಣ ಯುದ್ಧ"ದ ಸಾಧ್ಯತೆಯನ್ನು ಇಸ್ಲಾಮಾಬಾದ್ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತವು ತನ್ನ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಅಶಾಂತಿಯನ್ನು ಹುಟ್ಟುಹಾಕುತ್ತಿದೆ ಎಂದು ಪಾಕ್ ಪದೇ ಪದೇ ಆರೋಪಿಸುತ್ತಿದೆ. ಆದರೆ, ಇಸ್ಲಾಮಾಬಾದ್ ಬೆಂಬಲಿತ ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಈ ತಂತ್ರವನ್ನು ಪಾಕ್ ಬಳಸುತ್ತಿದೆ ಎಂದು ಭಾರತ ಹೇಳುತ್ತದೆ. ಬಲೂಚಿಸ್ತಾನ್‌ನಲ್ಲಿ ಹಿಂಸಾಚಾರದಲ್ಲಿ ಯಾವುದೇ ಪಾತ್ರವನ್ನು ಭಾರತ ಯಾವಾಗಲೂ ನಿರಾಕರಿಸಿದೆ.
ಆದಾಗ್ಯೂ, ಕೆಂಪು ಕೋಟೆಯ ಹೊರಗೆ ಸ್ಫೋಟಗೊಂಡ ಕಾರು - ಅಮೋನಿಯಂ ನೈಟ್ರೇಟ್ ಇಂಧನ ತೈಲ ತುಂಬಿದ ಹುಂಡೈ i20 ಮತ್ತು ಈ ಸಂಚಿನ ಹಿಂದಿನ ಭಯೋತ್ಪಾದಕ ಗುಂಪು - ಪಾಕ್ ಬೆಂಬಲಿತ ಹಲವಾರು ಗುಂಪುಗಳಲ್ಲಿ ಒಂದಾದ ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ನವೆಂಬರ್ 10 ರಂದು ದೆಹಲಿಯ ಕೆಂಪು ಕೋಟೆಯ ಹೊರಗೆ i20 ಕಾರು ಸ್ಫೋಟಗೊಂಡು 15 ಜನರು ಸಾವನ್ನಪ್ಪಿ, 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು(ಏಜೆನ್ಸೀಸ್).