ಇಸ್ಲಾಮಾಬಾದ್: ಪಾಕಿಸ್ತಾನಿ ಪಡೆಗಳು ಬಂಡುಕೋರರ(BLA) ವಿರುದ್ಧ ಹೋರಾಡಲು "ದೈಹಿಕವಾಗಿ ಅಶಕ್ತವಾಗಿವೆ" (Physically Handicapped) ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಹೌದು, ಭಯೋತ್ಪಾದನೆಯನ್ನು ಪೋಷಿಸಿ ಬೆಳೆಸಿದ್ದ ಪಾಕಿಸ್ತಾನಕ್ಕೆ ಈಗ ಅದೇ ಭೂತವಾಗಿ ಕಾಡುತ್ತಿದೆ. ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ವಿರುದ್ಧ ಹೋರಾಡಲು ಪಾಕಿಸ್ತಾನಿ ಪಡೆಗಳು ಹರಸಾಹಸ ಪಡುತ್ತಿರುವ ಬೆನ್ನಲ್ಲೇ, ಪಾಕಿಸ್ತಾನದ ರಕ್ಷಣಾ ಸಚಿವ ಆಸಿಫ್ ನೀಡಿರುವ ಹೇಳಿಕೆ ಇಡೀ ವಿಶ್ವದ ಗಮನ ಸೆಳೆದಿದೆ.
ಬಲೂಚಿಸ್ತಾನದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭದ್ರತಾ ಪಡೆಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಬಿಎಲ್‌ಎ (BLA) ಸಂಘಟನೆಯು ಪಾಕಿಸ್ತಾನಿ ಸೇನೆ ಮತ್ತು ಅಲ್ಲಿನ ಚೀನಾ ಮೂಲದ ಪ್ರಾಜೆಕ್ಟ್‌ಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಮಾತನಾಡಿದ ಖವಾಜಾ ಆಸಿಫ್, ಸೇನೆಯ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾರೆ.
ಸಂಸತ್ತಿನಲ್ಲಿ ನಡೆದ ಚರ್ಚೆಯ ವೇಳೆ ಆಸಿಫ್, "ನಾವು ಬಿಎಲ್‌ಎ ವಿರುದ್ಧದ ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದೇವೆ. ನಮ್ಮ ಪಡೆಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಈ ಮಟ್ಟದ ಉಗ್ರವಾದವನ್ನು ಎದುರಿಸಲು ಅಶಕ್ತವಾಗಿವೆ" ಎಂದಿದ್ದಾರೆ. ಇದು ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಅಚ್ಚರಿಯ ಹೇಳಿಕೆಯಾಗಿದ್ದು, ಬಲಿಷ್ಠ ಸೇನೆ ಎಂದು ಜಗತ್ತಿಗೆ ಬಿಂಬಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಅಸಲಿ ಮುಖವಾಡ ಈಗ ಕಳಚಿದೆ.
ಬಿಎಲ್‌ಎ (BLA) ಅಬ್ಬರಕ್ಕೆ ನಲುಗಿದ ಪಾಕ್
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಇತ್ತೀಚೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಪಾಕಿಸ್ತಾನಿ ಸೈನಿಕರ ಮೇಲೆ ಆತ್ಮಾಹುತಿ ದಾಳಿ ಹಾಗೂ ಗೆರಿಲ್ಲಾ ಮಾದರಿಯ ದಾಳಿಗಳನ್ನು ನಡೆಸುತ್ತಿದೆ. ಈ ದಾಳಿಗಳಿಂದ ಪಾಕಿಸ್ತಾನಿ ಸೇನೆಗೆ ದೊಡ್ಡ ಮಟ್ಟದ ಜೀವಹಾನಿಯಾಗುತ್ತಿದ್ದು, ಸೈನಿಕರ ನೈತಿಕ ಸ್ಥೈರ್ಯ ಕುಸಿದಿದೆ.
ಆರ್ಥಿಕ ಮುಗ್ಗಟ್ಟು ಮತ್ತು ಅಸ್ಥಿರತೆ
ಪಾಕಿಸ್ತಾನವು ಒಂದೆಡೆ ಆರ್ಥಿಕವಾಗಿ ದಿವಾಳಿಯಾಗಿದ್ದರೆ, ಇನ್ನೊಂದೆಡೆ ಆಂತರಿಕವಾಗಿ ಗೃಹಯುದ್ಧದಂತಹ ಸ್ಥಿತಿಯನ್ನು ಎದುರಿಸುತ್ತಿದೆ. ಸೈನಿಕರಿಗೆ ಸರಿಯಾದ ಶಸ್ತ್ರಾಸ್ತ್ರ ಮತ್ತು ತರಬೇತಿ ನೀಡಲು ಹಣವಿಲ್ಲದ ಕಾರಣ, ಅವರು ಬಂಡುಕೋರರ ಮುಂದೆ ಮಂಡಿಯೂರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).