Deadly Shooting  
ವಿದೇಶ

ಅಮೆರಿಕದಲ್ಲಿ ಭೀಕರ ಗುಂಡಿನ ದಾಳಿ: 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿ ಮೂವರು ಬಲಿ! | Deadly Shooting

ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ (UT) ಸಮೀಪವಿರುವ ಜನನಿಬಿಡ ನೈಟ್‌ಲೈಫ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ(Deadly Shooting) ಭಾರತೀಯ ಮೂಲದ ಪ್ರತಿಭಾವಂತ ವಿದ್ಯಾರ್ಥಿನಿ ಸವಿತಾ ಶಾನ್ (21) ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಈ ಘಟನೆಯನ್ನು "ಸಂಭವನೀಯ ಭಯೋತ್ಪಾದನಾ ಕೃತ್ಯ" ಎಂದು ಪರಿಗಣಿಸಿರುವ ಎಫ್‌ಬಿಐ (FBI), ದಾಳಿಯ ಹಿಂದೆ ಅಂತರಾಷ್ಟ್ರೀಯ ಆಯಾಮಗಳಿವೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದೆ.
ಆಸ್ಟಿನ್‌ನ ಪ್ರಸಿದ್ಧ ಸಿಕ್ಸ್ತ್ ಸ್ಟ್ರೀಟ್‌ನಲ್ಲಿರುವ 'ಬಫೋರ್ಡ್ಸ್ ಬ್ಯಾಕ್ಯಾರ್ಡ್ ಬೀರ್ ಗಾರ್ಡನ್' ಎಂಬ ಬಾರ್‌ನ ಹೊರಗೆ ಈ ದುರಂತ ಸಂಭವಿಸಿದೆ. ದಾಳಿಕೋರ 53 ವರ್ಷದ ಎನ್ಡಿಯಾಗಾ ಡಿಯಾಗ್ನೆ (Ndiaga Diagne) ಎಂಬಾತ ತನ್ನ ಎಸ್‌ಯುವಿ ವಾಹನದಲ್ಲಿ ಬಂದು, ಕಿಟಕಿಯಿಂದ ಪಿಸ್ತೂಲ್ ಮೂಲಕ ಮನಬಂದಂತೆ ಗುಂಡು ಹಾರಿಸಿದ್ದಾನೆ. ನಂತರ ವಾಹನದಿಂದ ಇಳಿದು ರೈಫಲ್ ಹಿಡಿದು ಪಾದಚಾರಿಗಳ ಮೇಲೆ ದಾಳಿ ಮುಂದುವರಿಸಿದ್ದಾನೆ. ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ದುಷ್ಕರ್ಮಿ ಹತನಾಗಿದ್ದಾನೆ.
ಬಲಿಯಾದವರು ಯಾರು?
ಈ ದಾಳಿಯಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಸವಿತಾ ಶಾನ್ (21): ಟೆಕ್ಸಾಸ್ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ಸ್ ಮತ್ತು ಎಕನಾಮಿಕ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ. ಮೇ ತಿಂಗಳಲ್ಲಿ ಪದವಿ ಪಡೆಯಬೇಕಿದ್ದ ಇವರು ಅದ್ಭುತ ಪ್ರತಿಭಾವಂತೆಯಾಗಿದ್ದರು.
ರೈಡರ್ ಹ್ಯಾರಿಂಗ್ಟನ್ (19): ಟೆಕ್ಸಾಸ್ ಟೆಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ. ಜಾರ್ಜ್ ಪೆಡರ್ಸನ್ (30): ಮಿನ್ನೇಸೋಟದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಫೈಟರ್. ಈ ದಾಳಿಯಲ್ಲಿ ಇತರೆ 14 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಯೋತ್ಪಾದನೆಯ ಲಿಂಕ್?

ದಾಳಿಕೋರ ಎನ್ಡಿಯಾಗಾ ಡಿಯಾಗ್ನೆ ಮೂಲತಃ ಸೆನೆಗಲ್ ದೇಶದವನಾಗಿದ್ದು, ಅಮೆರಿಕದ ಪೌರತ್ವ ಪಡೆದಿದ್ದನು. ದಾಳಿಯ ಸಮಯದಲ್ಲಿ ಆತ "ಪ್ರಾಪರ್ಟಿ ಆಫ್ ಅಲ್ಲಾ" (Property of Allah) ಎಂಬ ಬರಹವಿರುವ ಹೂಡಿ ಮತ್ತು ಇರಾನ್ ದೇಶದ ಧ್ವಜವಿರುವ ಟಿ-ಶರ್ಟ್ ಧರಿಸಿದ್ದನು ಎಂದು ವರದಿಯಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಪ್ರಚಲಿತ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆತನ ಮನೆಯ ತಪಾಸಣೆಯ ವೇಳೆ ಇರಾನ್ ನಾಯಕರ ಫೋಟೋಗಳು ಮತ್ತು ಕೆಲವು ಉಗ್ರಗಾಮಿ ಬರಹಗಳು ಪತ್ತೆಯಾಗಿವೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).