Dancing plague: 2020 ಮತ್ತು 21ರಲ್ಲಿ ದೇಶದ ಜನತೆಯನ್ನು ಲಾಕ್ಡೌನ್ ಹೆಸರಿನಲ್ಲಿ ತಮ್ಮ ತಮ್ಮ ಮನೆಯಲ್ಲೇ ಕೂಡಿ ಹಾಕಿದ್ದಲ್ಲದೇ, ಅದೆಷ್ಟೋ ಸಂಖ್ಯೆಯ ಜನರ ಪ್ರಾಣವನ್ನು ಕಸಿದ ಮಾರಣಾಂತಿಕ, ರಕ್ಕಸ ಸಾಂಕ್ರಾಮಿಕ ಕೋವಿಡ್-19 ಅಥವಾ ಕೊರೊನಾ ಕಾಯಿಲೆಯನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ? ನೆನಪಿಸಿಕೊಂಡರೇ ಈಗಲೂ ಮೈಜುಮ್ ಎನ್ನುತ್ತೆ. ಕಾರಣ, ಮಾಸ್ಕ್ ಧರಿಸದೆ ಹೊರಗೆ ಹೋಗುವಂತಿಲ್ಲ, ಸಾಮಾಜಿಕ ಅಂತರವಿಲ್ಲದೆ ಅಂಗಡಿಯಲ್ಲಿ ನಿಲ್ಲುವಂತಿರಲಿಲ್ಲ. ಹೆಮ್ಮಾರಿ ರೋಗವಿದು ಎನ್ನುವ ಮಂದಿಗೆ ಇದಕ್ಕಿಂತ ರಣ ಭೀಕರ, ಭಯಂಕರ ಕಾಯಿಲೆಯೊಂದು ಜನರ ಪ್ರಾಣವನ್ನು ಹೀರಿದ ಘಟನೆ ಬಗ್ಗೆ ಕೇಳಿದ್ರೆ ಖಂಡಿತ ಬೆಕ್ಕಸ ಬೆರಗಾಗುವುದು ಖಚಿತ.
ಅಸಲಿಗೆ ಕೋವಿಡ್ 21ನೇ ಶತಮಾನದ ಅತಿದೊಡ್ಡ ಸಾಂಕ್ರಾಮಿಕ ರೋಗವಾಗಿತ್ತು. ಅದರಲ್ಲಿ ಅನುಮಾನವೇ ಬೇಡ. ಕೊರೊನಾ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವೂ ಇಲ್ಲ. ಮನುಷ್ಯನ ಜೀವನವನ್ನೇ ಕಠಿಣವಾಗಿಸಿ, ಜರ್ಜರಿತ ಸ್ಥಿತಿಗೆ ದೂಡಿದ್ದ ಇನ್ನೂ ಅನೇಕ ಸಾಂಕ್ರಾಮಿಕ ರೋಗಗಳು ಈ ಭೂಮಿಯಲ್ಲಿ ನಡೆದಿವೆ. ಎಬೋಲಾ, ಪ್ಲೇಗ್, ಸಿಡುಬು ಮತ್ತು ಬ್ಲ್ಯಾಕ್ ಡೆತ್ ಎಂಬ ಹಲವಾರು ಸಾಂಕ್ರಾಮಿಕ ರೋಗಗಳು ನಮ್ಮ ಗಮನಕ್ಕೆ ಬಂದಿದ್ದರೆ, ಇವುಗಳಿಗಿಂತ ತೀರಾ ಭಿನ್ನವಾದ, ಮಾನವನ ಇತಿಹಾಸದಲ್ಲಿಯೇ ಅತ್ಯಂತ ಘೋರ, ವಿಚಿತ್ರ ಹಾಗೂ ನಿಗೂಢವಾದ ಒಂದು ಮಹಾಮಾರಿ ಸೋಂಕು ಎಂದೇ ಕರೆಯಲಾದ 1518ರ ಡ್ಯಾನ್ಸಿಂಗ್ ಪ್ಲೇಗ್ ಬಗ್ಗೆ ಬಹುತೇಕರು ಕೇಳಿರಲು ಸಾಧ್ಯವೇ ಇಲ್ಲ ಬಿಡಿ.
ಸಾಮಾನ್ಯವಾಗಿ, ರೋಗಿಯು ಕಾಯಿಲೆಗೆ ಒಳಗಾದಾಗ, ಆರಂಭಿಕ ಲಕ್ಷಣಗಳು ಕಂಡುಬರುತ್ತವೆ. ಮುಖ್ಯ ಲಕ್ಷಣಗಳು ಜ್ವರ, ಕೆಮ್ಮು ಮತ್ತು ಮೈಕೈ ನೋವು ಕಾಣಿಸಿಕೊಳ್ಳುತ್ತವೆ. ಆದರೆ, 1518ರಲ್ಲಿ ಫ್ರಾನ್ಸ್‌ನಲ್ಲಿ ಕಾಣಿಸಿಕೊಂಡ ವಿಚಿತ್ರ ಸಾಂಕ್ರಾಮಿಕ ರೋಗವು ಅಂತಹ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ. ಇದೇ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಅಮಾಯಕರ ಪ್ರಾಣವನ್ನು ಕಸಿಯುವಂತೆ ಮಾಡಿತು. ಇಲ್ಲಿ ಸಾವು ಜನರನ್ನು ಹುಡುಕಿ ಬಂದಿದ್ದು ರೋಗ ಲಕ್ಷಣಗಳಿಂದಲ್ಲ. ಬದಲಿಗೆ ಒಂದು ನೃತ್ಯದ ರೂಪದಲ್ಲಿ ಎಂಬುದೇ ದುರಂತ.
ಈ ಡ್ಯಾನ್ಸಿಂಗ್ ಪ್ಲೇಗ್ ಫ್ರಾನ್ಸ್‌ನಲ್ಲಿ ಓರ್ವ ಮಹಿಳೆಯಿಂದ ಹರಡಿ, ಬರೋಬ್ಬರಿ 400 ಜನರಿಗೆ ವೇಗವಾಗಿ ಹಬ್ಬಿತು. ನಿಖರವಾಗಿ ಐನೂರು ವರ್ಷಗಳ ಹಿಂದೆ ರೋಮನ್ ಸಾಮ್ರಾಜ್ಯದ ಭಾಗವಾದ ಸ್ಟ್ರಾಸ್‌ಬರ್ಗ್ ನಗರದಲ್ಲಿ ಕಾಣಿಸಿಕೊಂಡ ಈ ವಿಚಿತ್ರ ರೋಗದಲ್ಲಿ ಸಾಯುವವರೆಗೂ ನಿರಂತರವಾಗಿ ಕುಣಿಯುವುದೇ ರೋಗ ಲಕ್ಷಣವಾಗಿತ್ತು. ಜುಲೈ 1518ರ ಬೆಳಗ್ಗೆ, ಒಬ್ಬ ಮಹಿಳೆ ಸ್ಟ್ರಾಸ್ಬರ್ಗ್ನ ರಸ್ತೆಯ ಮಧ್ಯದಲ್ಲಿ ದಿಢೀರ್ ಕುಣಿಯಲು ಪ್ರಾರಂಭಿಸಿದಳು.
ಆರಂಭದಲ್ಲಿ ಇದು ನೋಡುಗರಿಗೆ ಆಕೆ ಮೋಜಿಗಾಗಿ ಡ್ಯಾನ್ಸ್ ಮಾಡುತ್ತಿದ್ದಾಳೆಂದು ಭಾವಿಸಿದ್ದರು. ಅನೇಕರು ಅವಳನ್ನು ನೋಡಿ ನಕ್ಕರು, ಇತರರು ಮಹಿಳೆಯ ನೃತ್ಯವನ್ನು ಅನುಕರಿಸಿದರು. ಆದರೆ, ನೋಡ ನೋಡುತ್ತಿದ್ದಂತೆ ಆಕೆಯ ಕುಣಿತ ನಿಮಿಷಗಳನ್ನು ಮೀರಿ ಗಂಟೆ ಗಂಟ್ಟಲೇ ತಲುಪಿತು. ಮಹಿಳೆ ಎಲ್ಲಿಯೂ ನಿಲ್ಲಿಸದೆ ಡ್ಯಾನ್ಸ್ ಮಾಡುತ್ತಿದ್ದರಿಂದ ಆಕೆಯ ಕಾಲುಗಳಿಂದ ರಕ್ತ ಸುರಿಯಲು ಆರಂಭಿಸಿತು. ಇಷ್ಟಾದರೂ ಮಹಿಳೆ ನೃತ್ಯ ನಿಲ್ಲಿಸಲಿಲ್ಲ. ಇಲ್ಲೇ ಎಲ್ಲರಿಗೂ ಶುರುವಾಗಿದ್ದು ಆತಂಕ.
ಮಹಿಳೆ ಜತೆ ದಿನದಿಂದ ದಿನಕ್ಕೆ ಕುಣಿಯುವವರ ಸಂಖ್ಯೆಯೂ ಹೆಚ್ಚುತ್ತಲೇ ಹೋಯಿತು. ಒಂದು ತಿಂಗಳೊಳಗೆ, ಸುಮಾರು 400 ಜನರು ಈ ರೀತಿ ನಗರದಲ್ಲಿ ಡ್ಯಾನ್ಸ್ ಮಾಡಲು ಶುರು ಮಾಡಿದರು. ಹಗಲು-ರಾತ್ರಿ ಎಂದು ನೋಡದೆ, ಹೀಗೆಯೇ ನಿರಂತರವಾಗಿ ಕುಣಿಯುವುದನ್ನು ಮುಂದುವರಿಸಿದ್ದು ಸ್ವತಃ ಆಡಳಿತ ಸರ್ಕಾರವನ್ನೇ ಬೆಚ್ಚಬೀಳಿಸಿತು. ಅದೆಷ್ಟೋ ಮಂದಿ ಸ್ಟ್ರೋಕ್, ಹೃದಯಾಘಾತದಿಂದಲೇ ಸಾವನ್ನಪ್ಪಿದರು.
ಮೊದಲಿಗೆ ಅಧಿಕಾರಿಗಳಿಗೂ ಇದೇನು ಎಂದು ಅರ್ಥವಾಗಲಿಲ್ಲ. ಆದರೆ, ದಿನಗಳು ಕಳೆದಂತೆ ಪರಿಸ್ಥಿತಿ ತೀವ್ರ ಹದಗೆಟ್ಟಿತು. ನಿಧಾನವಾಗಿ ಸಾಯುವವರ ಸಂಖ್ಯೆ ಮತ್ತು ಡ್ಯಾನ್ಸ್ ಮಾಡುವವರ ಸಂಖ್ಯೆ ಹೆಚ್ಚಾಗತೊಡಗಿತು. ಸಮಸ್ಯೆ ಏನು? ಇದಕ್ಕೆ ಕಾರಣವೇನು? ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆ ಈ ಸೋಂಕನ್ನು 'ಡ್ಯಾನ್ಸಿಂಗ್ ಪ್ಲೇಗ್' ಎಂದು ಕರೆಯಲಾಯಿತು. ಜನರ ಸರಣಿ ಸಾವಿನ ಸಂಖ್ಯೆಯನ್ನು ಕಂಡು ಇದೊಂದು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಯಿತು.
ಸಾಂಕ್ರಾಮಿಕ ರೋಗವು ಕೊನೆಗೊಂಡಿದ್ದರೂ, ವಿಜ್ಞಾನಿಗಳು ಮತ್ತು ಇತಿಹಾಸಕಾರರು ಡ್ಯಾನ್ಸಿಂಗ್ ಪ್ಲೇಗ್‌ನ ಹಿಂದಿರುವ ರಹಸ್ಯವನ್ನು ಭೇದಿಸುವಲ್ಲಿ ವಿಫಲರಾಗಿದ್ದಾರೆ. ಸ್ಟ್ರಾಸ್‌ಬರ್ಗ್ ಅಸಮಾನತೆ, ಬಡತನ ಮತ್ತು ಸಂಘರ್ಷದಿಂದ ತುಂಬಿದ ನಗರವಾಗಿತ್ತು. ಮಾನಸಿಕ ಅಸ್ವಸ್ಥರು ಅಥವಾ ತೀವ್ರ ಒತ್ತಡದಲ್ಲಿದ್ದ ಮಂದಿ ಈ ರೀತಿ ಕುಣಿದು ಸಾವಿಗೀಡಾದರು ಎಂಬ ನಂಬಿಕೆಗಳೂ ಇವೆಯೇ ಹೊರತು ಯಾವ ನಿಖರ ಕಾರಣಕ್ಕೆ ಜನರು ಅಷ್ಟು ಸಂಖ್ಯೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಮೃತಪಟ್ಟರು ಎಂಬುದಕ್ಕೆ ಉತ್ತರವೇ ಲಭಿಸಿಲ್ಲ,(ಏಜೆನ್ಸೀಸ್).