ಕೊಲಂಬೊ: ದಿತ್ವಾ ಚಂಡಮಾರುತದ(Ditwah Cyclone) ಅಬ್ಬರದಿಂದ ಉಂಟಾದ ಧಾರಾಕಾರ ಮಳೆ, ಪ್ರವಾಹಕ್ಕೆ ಶ್ರೀಲಂಕಾದಾದ್ಯಂತ ಇದುವರೆಗೂ 123 ಮಂದಿ ಮೃತಪಟ್ಟಿದ್ದು, 130ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ ಎಂದು ಶನಿವಾರ(ನ. 29) ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.
ಈ ಕುರಿತು ಮಾತನಾಡಿರುವ ಕೊಲಂಬೊದಲ್ಲಿ ಮಹಾನಿರ್ದೇಶಕ ಸಂಪತ್ ಕೊಟುವೆಗೊಡ, ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಅನೇಕ ಮನೆಗಳು ಹಾನಿಗೊಳಗಾಗಿವೆ. 43,995 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸಶಸ್ತ್ರ ಪಡೆಗಳ ಸಹಾಯದಿಂದ ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಬಲಪಡಿಸಲು ಸರ್ಕಾರ ಸಶಸ್ತ್ರ ಪಡೆಗಳನ್ನು ನಿಯೋಜಿಸಿದ್ದು, ಸಿಲುಕಿರುವ ನಿವಾಸಿಗಳನ್ನು ಸ್ಥಳಾಂತರಿಸಲು ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು ದೋಣಿಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸೋಮವಾರದಿಂದಲೇ ಚಂಡಮಾರುತದ ಪರಿಣಾಮ ಕಂಡು ಬರುತ್ತಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ ಬುಧವಾರ ಭೂಕುಸಿತವಾಗಿ, ದ್ವೀಪದಾದ್ಯಂತ ದಾಖಲೆ ಮಳೆಯಾಗಿದೆ. ಶನಿವಾರ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇದ್ದು, ಕೊಲಂಬೊದಿಂದ ಹಿಂದೂ ಮಹಾಸಾಗರಕ್ಕೆ ಹರಿಯುವ ಕೆಲನಿ ನದಿಯ ದಡದಲ್ಲಿ ವಾಸಿಸುವವರಿಗೆ ಸ್ಥಳಾಂತರಿಸಲಾಗಿದೆ. ಶುಕ್ರವಾರ ಸಂಜೆ ಕೆಲನಿ ನದಿ ದಡಗಳು ಒಡೆದ ಪರಿಣಾಮ ನೂರಾರು ಜನರನ್ನು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕಾಯಿತು ಎಂದು ಡಿಎಂಸಿ ಮಾಹಿತಿ ನೀಡಿದೆ.
ಶ್ರೀಲಂಕಾದಲ್ಲಿ ಸಂಭವಿಸಿದ ಜೀವಹಾನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದು, ಭಾರತ ಹೆಚ್ಚಿನ ನೆರವು ಕಳುಹಿಸಲು ಸಿದ್ಧವಾಗಿದೆ. ಪರಿಸ್ಥಿತಿ ನೋಡಿಕೊಂಡು ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).