ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಸೈಬರ್ ಅಟ್ಯಾಕ್: 2,000 ಅಮೆರಿಕನ್ ಮರೀನ್‌ಗಳ ಡೇಟಾ ಲೀಕ್ ಮಾಡಿದ ಇರಾನ್ ಹ್ಯಾಕರ್ಸ್! ಯುದ್ಧದ ಹೊಸ ರಣತಂತ್ರ..?
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಕೇವಲ ಸಮರಭೂಮಿಗೆ ಸೀಮಿತವಾಗಿಲ್ಲ, ಅದು ಡಿಜಿಟಲ್ ಲೋಕಕ್ಕೂ ಹಬ್ಬಿದೆ. ಇರಾನ್ ಬೆಂಬಲಿತ ಹ್ಯಾಕರ್(Iran Hackers) ಗುಂಪೊಂದು ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ 2,000ಕ್ಕೂ ಹೆಚ್ಚು ಅಮೆರಿಕನ್ ಮರೀನ್ ಸೈನಿಕರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಿ ಸೋರಿಕೆ ಮಾಡಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ.
ದಿ ವಾಲ್ ಸ್ಟ್ರೀಟ್ ಜರ್ನಲ್ ಈ ಕುರಿತು ವರದಿ ಮಾಡಿದ್ದು, ಅಮೆರಿಕದ ರಕ್ಷಣಾ ಇಲಾಖೆ ಈ ಗಂಭೀರ ಭದ್ರತಾ ಲೋಪದ ಬಗ್ಗೆ ತನಿಖೆ ಆರಂಭಿಸಿದೆ.
ಟೆಲಿಗ್ರಾಮ್‌ನಲ್ಲಿ ಹರಿದಾಡುತ್ತಿದೆ ಸೈನಿಕರ ಗುಟ್ಟು!
ಈ ಸೈಬರ್ ದಾಳಿಯ ಹಿಂದೆ ಹಂದಾಲ ಎಂಬ ಅಪಾಯಕಾರಿ ಹ್ಯಾಕರ್ ಗುಂಪು ಇದೆ ಎಂದು ಗುರುತಿಸಲಾಗಿದೆ. ಈ ಗುಂಪು ಸೈನಿಕರ ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ಅವರ ನಿಯೋಜನೆಯ ಸ್ಥಳಗಳ ಮಾಹಿತಿಯನ್ನು ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಬಹಿರಂಗಪಡಿಸಿದೆ. ಅಷ್ಟೇ ಅಲ್ಲದೆ, ನಮ್ಮ ಕಣ್ಣು ನಿಮ್ಮ ಮೇಲಿದೆ" ಎಂಬ ಎಚ್ಚರಿಕೆಯೊಂದಿಗೆ ಅಮೆರಿಕನ್ ಮರೀನ್‌ಗಳ ಕಣ್ಗಾವಲು ನಡೆಸುವ ಸಾಮರ್ಥ್ಯ ನಮಗಿದೆ ಎಂದು ಜಗತ್ತಿಗೆ ತೋರಿಸಿದೆ.
ಸೈನಿಕರಿಗೆ ನೇರ ಬೆದರಿಕೆ: ಸೈಕಲಾಜಿಕಲ್ ವಾರ್!
ಮಾಹಿತಿ ಸೋರಿಕೆ ಮಾಡುವುದಷ್ಟೇ ಅಲ್ಲದೆ, ಈ ಹ್ಯಾಕರ್‌ಗಳು ವಾಟ್ಸಾಪ್ ಮೂಲಕ ಸೈನಿಕರಿಗೆ ನೇರ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಸೈನಿಕರ ಕುಟುಂಬದ ವಿವರಗಳು, ಅವರ ಮನೆಯ ವಿಳಾಸ ಮತ್ತು ದೈನಂದಿನ ಚಟುವಟಿಕೆಗಳ ಸಂಪೂರ್ಣ ದಾಖಲೆ ನಮ್ಮ ಬಳಿ ಇದೆ ಎಂದು ಹ್ಯಾಕರ್‌ಗಳು ದಹಂ ಹಾಕುತ್ತಿದ್ದಾರೆ. ಇದು ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುವ ಇರಾನ್‌ನ ಸೈಕಲಾಜಿಕಲ್ ವಾರ್ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಂಘರ್ಷದ ನಡುವೆ ಡಿಜಿಟಲ್ ಬೆಂಕಿ
ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಕುಸಿತದ ಹಾದಿಯಲ್ಲಿದೆ ಮತ್ತು ಹೊರ್ಮುಜ್ ಜಲಸಂಧಿಯನ್ನು ತೆರೆಯುವಂತೆ ನಮ್ಮನ್ನು ಬೇಡಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಈ ಸೈಬರ್ ದಾಳಿಯ ಮೂಲಕ ಅಮೆರಿಕಕ್ಕೆ ಪ್ರಬಲ ತಿರುಗೇಟು ನೀಡಲು ಮುಂದಾಗಿದೆ.
ಅಮೆರಿಕವು ಇರಾನ್‌ನ ತೈಲ ರಫ್ತಿನ ಮೇಲೆ ಸಮುದ್ರ ದಿಗ್ಬಂಧನ ಹೇರಿದ್ದರೆ, ಇರಾನ್ ಈಗ ಅಮೆರಿಕದ ಅತ್ಯಂತ ಶಕ್ತಿಶಾಲಿ ಸೈನ್ಯದ ವೈಯಕ್ತಿಕ ಭದ್ರತೆಯನ್ನೇ ಪ್ರಶ್ನಿಸುವಂತಹ ಕೃತ್ಯಕ್ಕೆ ಕೈಹಾಕಿದೆ.
ಭಾರತಕ್ಕೂ ಎಚ್ಚರಿಕೆ ಗಂಟೆ..?
ಜಾಗತಿಕವಾಗಿ ನಡೆಯುತ್ತಿರುವ ಈ ಸೈಬರ್ ದಾಳಿಗಳು ಭಾರತದಂತಹ ದೇಶಗಳಿಗೂ ಪಾಠವಾಗಿದೆ. ಇಂದಿನ ಕಾಲದಲ್ಲಿ ಕ್ಷಿಪಣಿಗಳಿಗಿಂತಲೂ ಸೈಬರ್ ವೈರಸ್‌ಗಳು ಹೆಚ್ಚು ಅಪಾಯಕಾರಿ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಸೈನಿಕರ ಮಾಹಿತಿಯನ್ನು ರಕ್ಷಿಸುವುದು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ.
ಈ ಡೇಟಾ ಲೀಕ್‌ನ ಪೂರ್ಣ ಪ್ರಮಾಣವನ್ನು ಅಮೆರಿಕದ ಗುಪ್ತಚರ ಇಲಾಖೆ ಇನ್ನೂ ಪತ್ತೆ ಮಾಡುತ್ತಿದೆ. ಆದರೆ, ಈ ಘಟನೆಯು ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಒಂದು ವೇಳೆ ಹ್ಯಾಕರ್‌ಗಳು ಸೈನಿಕರ ಕುಟುಂಬದ ಮೇಲೆ ಪ್ರಭಾವ ಬೀರಲು ಶುರು ಮಾಡಿದರೆ, ಅದು ದೊಡ್ಡ ಮಟ್ಟದ ಅಂತರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಗಬಹುದು,(ಏಜೆನ್ಸೀಸ್).