ಹಾವಿನ ತಲೆ ಕತ್ತರಿಸಿದ್ದೇವೆ ಎಂದ ಅಮೆರಿಕ! IRGC
- ಇರಾನಿನ ಮೇಲೆ ಸಮರ ಸಾರಿರುವ ಇಸ್ರೇಲ್ ಹಾಗೂ ಅಮೆರಿಕ
- ಬಾಂಬ್ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ
- ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಧಾನ ಕಚೇರಿ ಧ್ವಂಸ
- ಹಾವಿನ ತಲೆಯನ್ನೇ ಕತ್ತರಿಸಿದ್ದೇವೆ ಎಂದ ಅಮೆರಿಕ
ವಾಷಿಂಗ್ಟನ್: ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಸಾಥ್ ನೀಡುತ್ತಿರುವ ಅಮೆರಿಕ, ದೊಡ್ಡ ಪ್ರಮಾಣದಲ್ಲಿ ಬಾಂಬ್ ಸ್ಫೋಟ ನಡೆಸಿ, ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಧಾನ ಕಚೇರಿಯನ್ನೇ ಧ್ವಂಸ ಮಾಡಿದೆ. ಈ ಸುದ್ದಿಯನ್ನು ಅಮೆರಿಕದ ಮಿಲಿಟರಿ ಪಡೆ ಖಚಿತಪಡಿಸಿದೆ.
ಕಳೆದ 47 ವರ್ಷಗಳಲ್ಲಿ 1,000 ಕ್ಕೂ ಹೆಚ್ಚು ಅಮೆರಿಕನ್ನರ ಸಾವಿಗೆ ಐಆರ್‌ಜಿಸಿ ಕಾರಣ ಎಂದಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್), ಅದರ ಪ್ರಧಾನ ಕಚೇರಿಯನ್ನೇ ಧ್ವಂಸ ಮಾಡಿರುವುದು ಹಾವಿನ ತಲೆಯನ್ನು ಕಡಿದಂತಾಗಿದೆ ಎಂದಿದೆ. ಅಲ್ಲದೆ, ಅಮೆರಿಕವು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ ಎಂದು ಎಚ್ಚರಿಕೆ ನೀಡಿರುವ ಸೆಂಟ್ರಲ್ ಕಮಾಂಡ್, ಐಆರ್ಜಿಸಿಗೆ ಈಗ ಪ್ರಧಾನ ಕಚೇರಿಯ ಕೊರತೆಯಿದೆ ಎಂದು ಹೇಳಿದೆ.
ಐಆರ್ಜಿಸಿಯ ಗುಪ್ತಚರ ಪ್ರಧಾನ ಕಚೇರಿ, ಐಆರ್‌ಜಿಸಿ ಏರ್ ಫೋರ್ಸ್ ಕಮಾಂಡ್ ಸೆಂಟರ್ ಮತ್ತು ಆಂತರಿಕ ಭದ್ರತಾ ಪ್ರಧಾನ ಕಚೇರಿಯನ್ನು ಒಳಗೊಂಡಂತೆ ಇರಾನಿನ ಡಜನ್ಗಟ್ಟಲೆ ಮಿಲಿಟರಿ ಕಮಾಂಡ್ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಮಿಲಿಟರಿ ಕೂಡ ವರದಿ ಮಾಡಿದೆ. ಅಲ್ಲದೆ, ಈ ದಾಳಿಗಳು ಇರಾನ್‌ನ ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳಿಗೆ ತೀವ್ರ ಹೊಡೆತ ನೀಡಿದೆ ಎಂದು ಇಸ್ರೇಲ್ ಹೇಳಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ( IRGC ) ಎಂದರೆ ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ಅತ್ಯಂತ ಪ್ರಬಲವಾದ ಸೇನಾ ಶಾಖೆ. 1979ರ ಇರಾನ್ ಇಸ್ಲಾಮಿಕ್ ಕ್ರಾಂತಿಯ ನಂತರ ಅಯತೊಲ್ಲಾ ರುಹೊಲ್ಲಾ ಖಮೇನಿ ಅವರ ಆದೇಶದ ಮೇರೆಗೆ ಇದನ್ನು ಸ್ಥಾಪಿಸಲಾಯಿತು. ಇದು ಸಾಮಾನ್ಯ ಇರಾನಿ ಸೇನೆಗಿಂತಲೂ ಭಿನ್ನವಾಗಿ ಕೇವಲ ದೇಶದ ಗಡಿಗಳನ್ನು ರಕ್ಷಿಸುವುದಲ್ಲದೆ, ಇಸ್ಲಾಮಿಕ್ ಕ್ರಾಂತಿಯ ಆದರ್ಶಗಳನ್ನು, ಇಸ್ಲಾಮಿಕ್ ಗಣರಾಜ್ಯ ವ್ಯವಸ್ಥೆಯನ್ನು ಮತ್ತು ಸುಪ್ರೀಂ ಲೀಡರ್‌ರ (ಪರಮೋಚ್ಚ ನಾಯಕ) ಅಧಿಕಾರವನ್ನು ರಕ್ಷಿಸುವ ಮುಖ್ಯ ಜವಾಬ್ದಾರಿಯನ್ನು ಹೊಂದಿದೆ.
ಶನಿವಾರ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ನಂತರವೂ ಅಮೆರಿಕ-ಇಸ್ರೇಲಿ ಜಂಟಿ ಕಾರ್ಯಾಚರಣೆಗಳು ಭಾನುವಾರದವರೆಗೂ ಮುಂದುವರೆದವು. ರಾತ್ರಿ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸ್ಫೋಟಗಳು ಸಂಭವಿಸಿದ್ದು, ರಾಜಧಾನಿಯ ಹೃದಯಭಾಗವನ್ನೇ ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿದೆ. ಇನ್ನೊಂದೆಡೆ ಇರಾನ್, ಇಸ್ರೇಲ್ ಹಾಗೂ ಗಲ್ಫ್ ಪ್ರದೇಶದಲ್ಲಿನ ಯುಎಸ್ ಮಿಲಿಟರಿ ಕೇಂದ್ರಗಳ ಮೇಲೆ ದಾಳಿ ನಡೆಸಿ, ಪ್ರತೀಕಾರದ ಹೆಜ್ಜೆ ಅನುಸರಿಸುತ್ತಿದೆ.
ಯುದ್ಧಕ್ಕೆ ಕಾರಣ ಏನು?
ಪ್ರಸ್ತುತ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಮುಖ್ಯ ಕಾರಣ ಇರಾನ್‌ನ ನ್ಯೂಕ್ಲಿಯರ್ ಕಾರ್ಯಕ್ರಮ. ಅಲ್ಲದೆ, ಇರಾನ್‌ನ ಬ್ಯಾಲಿಸ್ಟಿಕ್ ಮಿಸೈಲ್ ಸಾಮರ್ಥ್ಯವನ್ನು ಇಸ್ರೇಲ್ ಮತ್ತು ಅಮೆರಿಕ, ಇಸ್ರೇಲ್‌ಗೆ ಅಸ್ತಿತ್ವದ ಬೆದರಿಕೆ ಎಂದು ಪರಿಗಣಿಸಿದೆ. 2025ರ ಜೂನ್‌ನಲ್ಲಿ 12-ದಿನಗಳ ಕಾಲ ಯುದ್ಧ ನಡೆದಿತ್ತು. ಈ ಸಮಯದಲ್ಲೂ ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ನ್ಯೂಕ್ಲಿಯರ್ ಸೈಟ್‌ಗಳ ಮೇಲೆ ದಾಳಿ ಮಾಡಿದ್ದವು. ಇದೀಗ, ಇರಾನ್ ತನ್ನ ನ್ಯೂಕ್ಲಿಯರ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸುತ್ತಿದ್ದಂತೆ 2026, ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದೊಡ್ಡ ಮಟ್ಟದ ದಾಳಿ ಆರಂಭಿಸಿದವು. ಈ ದಾಳಿಯ ಗುರಿ ಇರಾನ್‌ನ ನ್ಯೂಕ್ಲಿಯರ್/ಮಿಸೈಲ್ ಸಾಮರ್ಥ್ಯವನ್ನು ನಾಶಗೊಳಿಸುವುದು, ನೌಕಾಪಡೆಯನ್ನು ನಿಷ್ಕ್ರಿಯಗೊಳಿಸುವುದು ಮತ್ತು ಆಡಳಿತ ವ್ಯವಸ್ಥೆಯನ್ನ ಬದಲಾಯಿಸುವುದು. ಇದಕ್ಕೆ ಪ್ರತಿಯಾಗಿ ಇರಾನ್ ಮಿಸೈಲ್/ಡ್ರೋನ್ ದಾಳಿಗಳ ಮೂಲಕ ಪ್ರತೀಕಾರ ನಡೆಸುತ್ತಿದೆ, (ಏಜೆನ್ಸೀಸ್).