ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ 
ವಿದೇಶ

ದಂಗೆ ಪ್ರಕರಣ: ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ ಬಂಧನ; 27 ವರ್ಷ ಜೈಲು ಶಿಕ್ಷೆ | Jair Bolsonaro

Brazil: 2022ರ ಚುನಾವಣೆಯಲ್ಲಿ ಸೋತ ಬಳಿಕ ಮತ್ತೆ ಅಧಿಕಾರ ಪಡೆಯಲು ಬ್ರೆಜಿಲ್​ನಲ್ಲಿ ನಡೆದ ದಂಗೆಯ ನೇತೃತ್ವ ವಹಿಸಿದ್ದಕ್ಕೆ ಬಲಪಂಥೀಯ ನಾಯಕ ಮತ್ತು ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ(Jair Bolsonaro) ಅವರಿಗೆ ಸುಪ್ರೀಂಕೋರ್ಟ್ 27 ವರ್ಷ ಮತ್ತು ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದ್ದು, ಇಂದು (ನ. 22) ಬೆಳಗ್ಗೆ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬ್ರೆಜಿಲ್‌ನ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಫೆಡರಲ್ ಪೊಲೀಸರು ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬ್ರೆಸಿಲಿಯಾದ ದುಬಾರಿ ಜಾರ್ಡಿಮ್ ಬೊಟಾನಿಕೊ ಪ್ರದೇಶದ ಅವರ ನಿವಾಸದಿಂದ ಪೊಲೀಸ್ ಪ್ರಧಾನ ಕಚೇರಿಗೆ ಕರೆದೊಯ್ದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
70 ವರ್ಷದ ಬೋಲ್ಸನಾರೋ ಅವರಿಗೆ ಆಗಸ್ಟ್‌ನಲ್ಲೇ ಗೃಹಬಂಧನ ವಿಧಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್ 27 ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆ ಗೃಹಬಂಧನದಿಂದ ಜೈಲಿಗೆ ಕಳುಹಿಸಲು ಬಂಧಿಸಿದ್ದಾರೆ ಎನ್ನಲಾಗಿದೆ.
2019ರಿಂದ 2022 ರವರೆಗೆ ಬ್ರೆಜಿಲ್ ಅನ್ನು ಆಳಿದ ಬೋಲ್ಸನಾರೊ, 2022ರ ದಂಗೆ ಪ್ರಯತ್ನಕ್ಕೆ ಸಂಬಂಧಿಸಿದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನು ಸುಪ್ರೀಂಕೋರ್ಟ್​ನಲ್ಲಿ ಅವರ ಪರ ವಕೀಲರು ಆರೋಗ್ಯದ ಕಾರಣ ಗೃಹಬಂಧನದ ಶಿಕ್ಷೆಯನ್ನು ಮುಂದುವರೆಸುವಂತೆ ವಾದಿಸಿದ್ದರು (ಏಜೆನ್ಸೀಸ್).