ಕದನ ವಿರಾಮ ಅಂತ್ಯಕ್ಕೆ ಕೌಂಟ್‌ಡೌನ್! ಮತ್ತೆ ಶುರುವಾಗುತ್ತಾ ಇರಾನ್–ಅಮೆರಿಕ ವಾರ್​? | Iran-US war starting again? 
ವಿದೇಶ

ಕದನ ವಿರಾಮ ಅಂತ್ಯಕ್ಕೆ ಕೌಂಟ್‌ಡೌನ್! ಮತ್ತೆ ಶುರುವಾಗುತ್ತಾ ಇರಾನ್-ಅಮೆರಿಕ ವಾರ್​? | Iran-US war starting again?

Iran-US ceasefire: ಮಧ್ಯಪ್ರಾಚ್ಯದಲ್ಲಿ ಮತ್ತೆ ಸಂಘರ್ಷದ ಕಿಡಿ ಹೊತ್ತಿಕೊಳ್ಳುತ್ತಾ ಎಂಬ ಆತಂಕ ಶುರುವಾಗಿದೆ. ಇರಾನ್-ಅಮೆರಿಕ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದ ಪರಸ್ಪರ ಒಪ್ಪಂದ ಇಂದು ಮುಕ್ತಾಯಗೊಳ್ಳಲಿದೆ. ಆದ್ರೆ ಮುಂದಿನ ನಿರ್ಧಾರಗಳ ಬಗ್ಗೆ ಎರಡೂ ದೇಶಗಳಿಂದ ಸ್ಪಷ್ಟ ಸೂಚನೆ ಸಿಕ್ಕಿಲ್ಲ. ಹೀಗಾಗಿ ಕದನ ವಿರಾಮ ಮುಂದುವರಿಯುತ್ತಾ ಅಥವಾ ಮತ್ತೆ ಸಂಘರ್ಷ ಶುರುವಾಗುತ್ತಾ ಎಂಬ ಪ್ರಶ್ನೆಗಳು ಎದ್ದಿವೆ.
ಇನ್ನು, ಜೂನ್ 17ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಕದನ ನಿಲ್ಲಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. 14 ಅಂಶಗಳ ಈ ಒಪ್ಪಂದದಡಿ 60 ದಿನಗಳೊಳಗೆ ಅಂತಿಮ ತೀರ್ಮಾನಕ್ಕೆ ಬರಲು ಎರಡೂ ದೇಶಗಳು ಮಾತುಕತೆ ನಡೆಸಬೇಕಿತ್ತು. ಆದರೆ ಇತ್ತೀಚಿಗೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದ್ದು, ಒಪ್ಪಂದ ಮಾತು ಡೊಲಾಯಮಾನವಾಗಿದೆ.

ಒಪ್ಪಂದದ ಬಗ್ಗೆ ಯಾವುದೇ ನಿರ್ಧಾರವಿಲ್ಲ

ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ, ಅಮೆರಿಕದ ಜೊತೆ ಮಾತುಕತೆ ಬಗ್ಗೆ ಇರಾನ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಧ್ಯವರ್ತಿಗಳ ಮೂಲಕ ಸಂದೇಶಗಳ ವಿನಿಮಯ ನಡೆಯುತ್ತಿದೆ. ಆದರೆ ಇದನ್ನು ಒಪ್ಪಂದ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅರಾಘ್ಚಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಪರಸ್ಪರ ಒಪ್ಪಂದ (MoU) ಉಲ್ಲಂಘಿಸಿದೆ, ಹೀಗಾಗಿ ಮತ್ತೆ ಸಂಘರ್ಷ ಆರಂಭವಾಯಿತು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಮತ್ತೆ ವಾರ್​ ಶುರುವಾಗುತ್ತಾ?

ಕದನ ವಿರಾಮ ಒಪ್ಪಂದ ಮುಕ್ತಾಯವಾದ ಬಳಿಕ ಏನಾಗಲಿದೆ ಎಂಬುದೇ ಈಗ ದೊಡ್ಡ ಪ್ರಶ್ನೆ. ಎರಡೂ ದೇಶಗಳು ಸಂಘರ್ಷದಲ್ಲಿ ತಾವೇ ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿಕೊಂಡಿವೆ. ಆದರೆ ಶಾಶ್ವತ ರಾಜಕೀಯ ಪರಿಹಾರ ಇನ್ನೂ ದೂರದಲ್ಲಿದೆ. ಇರಾನ್‌ನ ಪರಮಾಣು ಕಾರ್ಯಕ್ರಮ, ಆಡಳಿತ ಬದಲಾವಣೆ, ಪರಮಾಣು ಅಸ್ತ್ರ ಹೊಂದದಂತೆ ತಡೆಯುವುದು ಮತ್ತು ಮಧ್ಯಪ್ರಾಚ್ಯದಲ್ಲಿನ ಇರಾನ್ ಬೆಂಬಲಿತ ಸಂಘಟನೆಗಳ ವಿಚಾರಗಳು ಅಮೆರಿಕದ ಪ್ರಮುಖ ಗುರಿಗಳಾಗಿವೆ. ಹೀಗಾಗಿ ರಾಜತಾಂತ್ರಿಕ ಮಾತುಕತೆ ಮುಂದುವರಿಯುತ್ತಾ? ಅಥವಾ ಮತ್ತೆ ಯುದ್ಧದ ಕಾವು ಹೆಚ್ಚುತ್ತಾ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್​).