ಗಲ್ಫ್​ ರಾಷ್ಟ್ರಗಳಿಂದ 20 ಸಾವಿರಕ್ಕೂ ಅಧಿಕ ಪಾಕಿಸ್ತಾನಿಗಳಿಗೆ ಗೇಟ್​ ಪಾಸ್:​ ವಿಶ್ವ ಮಟ್ಟದಲ್ಲಿ ಪಾಕ್​ ವರ್ಚಸ್ಸಿಗೆ ಮಸಿ! Gulf Countries  
ವಿದೇಶ

ಗಲ್ಫ್​ ರಾಷ್ಟ್ರಗಳಿಂದ 20 ಸಾವಿರಕ್ಕೂ ಅಧಿಕ ಪಾಕಿಸ್ತಾನಿಗಳಿಗೆ ಗೇಟ್​ ಪಾಸ್:​ ವಿಶ್ವ ಮಟ್ಟದಲ್ಲಿ ಪಾಕ್​ ವರ್ಚಸ್ಸಿಗೆ ಮಸಿ! Gulf Countries

ಪ್ರಮುಖ ಮುಖ್ಯಾಂಶಗಳು

  • ಗಲ್ಫ್ ರಾಷ್ಟ್ರಗಳಿಂದ ನಾಲ್ಕು ತಿಂಗಳಲ್ಲಿ 20 ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಪ್ರಜೆಗಳ ಗಡೀಪಾರು
  • ಅಕ್ರಮ ವಲಸೆ ಮತ್ತು ವೀಸಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಪಾಕ್ ಪ್ರಜೆಗಳ ಮೇಲೆ ಕ್ರಮ
  • ಸೌದಿ ಅರೇಬಿಯಾ ಒಂದರಲ್ಲೇ ಅತಿ ಹೆಚ್ಚು ಅಂದರೆ 15500 ಪಾಕಿಸ್ತಾನಿಗಳ ಗಡೀಪಾರು
  • ಇರಾನ್ ಅಮೆರಿಕ ಸಂಘರ್ಷದ ವಿಡಿಯೋ ಹಂಚಿಕೊಂಡಿದ್ದಕ್ಕೂ ಗಡೀಪಾರು ಶಿಕ್ಷೆ
ಇಸ್ಲಮಾಬಾದ್​: ಕಾನೂನುಬಾಹಿರ ಚಟುವಟಿಕೆಗಳು ಹಾಗೂ ವೀಸಾ ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಗಲ್ಫ್ ರಾಷ್ಟ್ರಗಳು ( Gulf Countries ), ಪಾಕಿಸ್ತಾನಿ ಪ್ರಜೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ನಾಲ್ಕು ತಿಂಗಳುಗಳಲ್ಲಿ ಬರೋಬ್ಬರಿ 20,000ಕ್ಕೂ ಅಧಿಕ ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿವೆ ಎಂಬ ಅಧಿಕೃತ ಅಂಕಿಅಂಶಗಳನ್ನು ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗಿದೆ.
ಅಕ್ರಮ ವಲಸೆ, ವೀಸಾ ಉಲ್ಲಂಘನೆ, ಭಿಕ್ಷಾಟನೆ, ಮಾದಕವದ್ರವ್ಯ ಪ್ರಕರಣಗಳು, ನಕಲಿ ದಾಖಲೆಗಳು ಮತ್ತು ಗಂಭೀರ ಭದ್ರತಾ ಕಾಳಜಿಗಳ ಹಿನ್ನೆಲೆಯಲ್ಲಿ ಈ ಸಾಮೂಹಿಕ ಗಡೀಪಾರು ಕ್ರಮ ಜರುಗಿಸಲಾಗಿದೆ. ವಿದೇಶಗಳಲ್ಲಿ ಹೆಚ್ಚುತ್ತಿರುವ ಇಂತಹ ಕಾನೂನು ಬಾಹಿರ ಪ್ರಕರಣಗಳಿಂದಾಗಿ ಪಾಕಿಸ್ತಾನದ ಅಂತಾರಾಷ್ಟ್ರೀಯ ವರ್ಚಸ್ಸಿಗೆ ಮಸಿ ಬಳಿದಂತಾಗಿದ್ದು, ಶಹಬಾಜ್ ಷರೀಫ್ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಗೆ ಇದು ಭಾರೀ ದೊಡ್ಡ ಮುಖಭಂಗವನ್ನುಂಟು ಮಾಡಿದೆ.
ಮಾರ್ಚ್ 1ರಿಂದ ಜುಲೈ 13ರವರೆಗಿನ ಅಧಿಕೃತ ಅಂಕಿಅಂಶಗಳ ಪ್ರಕಾರ, ಗಲ್ಫ್ ರಾಷ್ಟ್ರಗಳಿಂದ ಪಾಕಿಸ್ತಾನಿ ಪ್ರಜೆಗಳ ಗಡೀಪಾರು ಪ್ರಕ್ರಿಯೆಯಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದೆ. ಕೇವಲ ಸೌದಿ ಅರೇಬಿಯಾ ಒಂದೇ ದೇಶದಿಂದ ಬರೋಬ್ಬರಿ 15,500 ಪಾಕಿಸ್ತಾನಿ ನಾಗರಿಕರನ್ನು ಗಡೀಪಾರು ಮಾಡಲಾಗಿದೆ. ಇದರ ಬೆನ್ನಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸುಮಾರು 3,800 ಜನರನ್ನು ವಾಪಸ್ ಕಳುಹಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಒಮನ್ ದೇಶದಿಂದ 1,606 ಜನರನ್ನು, ಬಹ್ರೈನ್‌ ದೇಶದಿಂದ 521 ಜನರನ್ನು, ಕತಾರ್‌ ದೇಶದಿಂದ 429 ಜನರನ್ನು ಹಾಗೂ ಕುವೈತ್‌ನಿಂದ 97 ಪಾಕಿಸ್ತಾನಿಗಳನ್ನು ಗಡೀಪಾರು ಮಾಡಿ ತಮ್ಮ ದೇಶದ ಗಡಿಯಿಂದ ಹೊರಹಾಕಲಾಗಿದೆ.
ಈ ರೀತಿ ಗಡೀಪಾರಾದವರ ಪಟ್ಟಿಯಲ್ಲಿ ವಿವಿಧ ಗಂಭೀರ ಕಾರಣಗಳು ಹಾಗೂ ಕಾನೂನು ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಬಂಧನದಿಂದ ವಿನಾಯಿತಿ ಪಡೆದಿದ್ದ 4,628 ಮಂದಿ, ವಿವಿಧ ಅಪರಾಧಗಳಿಗಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 1,294 ಜನ, ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿದ್ದ 968 ನೌಕರರು ಹಾಗೂ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ 689 ಮಂದಿ ಈ ಪಟ್ಟಿಯಲ್ಲಿದ್ದಾರೆ. ಇದರ ಜೊತೆಗೆ ಇತರೆ ವಿವಿಧ ವರ್ಗಗಳ ಅಡಿಯಲ್ಲಿ 6,000ಕ್ಕೂ ಅಧಿಕ ಪ್ರಕರಣಗಳು ಸೇರಿವೆ. ಇದು ಗಲ್ಫ್ ರಾಷ್ಟ್ರಗಳಲ್ಲಿ ಅಲ್ಲಿನ ಕಾನೂನುಗಳನ್ನು ಎಷ್ಟರ ಮಟ್ಟಿಗೆ ಉಲ್ಲಂಘಿಸಲಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಗಡೀಪಾರಾದವರಲ್ಲಿ ಅತಿ ಮಹತ್ವದ ಸಂಗತಿಯೆಂದರೆ, ಇರಾನ್ ಹಾಗೂ ಅಮೆರಿಕ ನಡುವಿನ ಸಂಘರ್ಷದ ಸಂದರ್ಭದಲ್ಲಿ ಇರಾನ್‌ನ ದಾಳಿಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಕ್ಕಾಗಿ ಬಂಧಿಸಲ್ಪಟ್ಟ ಕೆಲವರು ಸಹ ಈ ಗಡೀಪಾರು ಪಟ್ಟಿಯಲ್ಲಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಗಲ್ಫ್ ದೇಶಗಳು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬುದನ್ನು ಈ ಕ್ರಮವು ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ನಿರ್ದಿಷ್ಟ ಅವಧಿಯಲ್ಲಿ ತಮ್ಮಷ್ಟಕ್ಕೆ ತಾವೇ ಸ್ವಯಂಪ್ರೇರಿತರಾಗಿ ಗಲ್ಫ್ ದೇಶಗಳನ್ನು ತೊರೆದು ಪಾಕಿಸ್ತಾನಕ್ಕೆ ಹಿಂತಿರುಗಿದವರನ್ನು ಈ ಅಂಕಿಅಂಶಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಪಾಕಿಸ್ತಾನದ ಸಂಸದೀಯ ವ್ಯವಹಾರಗಳ ಸಚಿವರಾದ ಡಾ. ತಾರಿಫ್ ಫಜಲ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ವಿದೇಶಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಎಸಗುತ್ತಿರುವ ನಿರಂತರ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಅಪರಾಧಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಗೌರವ ಹಾಗೂ ವರ್ಚಸ್ಸಿಗೆ ತೀವ್ರ ಧಕ್ಕೆಯುಂಟಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಇತರ ರಾಷ್ಟ್ರಗಳು ಪಾಕಿಸ್ತಾನಿಗಳಿಗೆ ವೀಸಾ ನೀಡುವ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸುವ ಅಥವಾ ಸಂಪೂರ್ಣ ನಿರ್ಬಂಧಿಸುವ ಸಾಧ್ಯತೆಯಿದೆ. ಇದು ಪ್ರಾಮಾಣಿಕವಾಗಿ ವಿದೇಶಗಳಿಗೆ ತೆರಳಲು ಬಯಸುವ ಸಾಮಾನ್ಯ ಪಾಕಿಸ್ತಾನಿ ನಾಗರಿಕರ ಮೇಲೂ ತೀವ್ರ ನಕಾರಾತ್ಮಕ ಪರಿಣಾಮ ಬೀಳಲಿದೆ ಎಂದು ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ, (ಏಜೆನ್ಸೀಸ್​).